ವಿರಾಜಪೇಟೆ ಮೇ 30 NEWS DESK : ಕೊಡವ ಪೊಮ್ಮಕ್ಕಡ ಒಕ್ಕೂಟದ ಮಹಾಸಭೆಯು ವಿರಾಜಪೇಟೆ ಕೊಡವ ಸಮಾಜದ ಆವರಣದಲ್ಲಿ ನಡೆಯಿತು.
ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಯವಂಡ ಇಂದಿರಾ ತಪ್ಪಡಕ ಕಟ್ಟಿ, ಚಪ್ಪಂಡ ಲಲಿತ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಳಿಯಪ್ಪ ಸ್ವಾಗತಿಸಿ, ವಾರ್ಷಿಕ ವರದಿಯನ್ನು ಮಂಡಿಸಿದರು. ಖಜಾಂಚಿ ತಾತಂಡ ಯಶು ಕಭೀರ್ ವಾರ್ಷಿಕ ಲೆಕ್ಕ ಪತ್ರ ವರದಿಯನ್ನು ಮಂಡಿಸಿದರು.
ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಒಕ್ಕೂಟ ನಡೆದು ಬಂದ ಹಾದಿಯನ್ನು ಮೆಲಕು ಹಾಕಿದರು. ಹಾಗೂ ಎಲ್ಲರಿಗೂ ಅವಕಾಶ ಸಿಗಬೇಕು ಎಂಬ ದೃಷ್ಟಿಯಿಂದ ಸ್ವ ಇಚ್ಛೆಯಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿ ರಾಜೀನಾಮೆ ಪತ್ರವನ್ನು ಕಾರ್ಯದರ್ಶಿಯವರಿಗೆ ನೀಡಿದರು. ಆದರೆ ಮಹಾಸಭೆ ಅವರ ರಾಜೀನಾಮೆಯನ್ನು ಸ್ವೀಕರಿಸದೆ, ಅಧ್ಯಕ್ಷಸ್ಥಾನದಲ್ಲಿ ಮುಂದುವರಿಯುವಂತೆ ಒಕ್ಕೊರಲಿನಿಂದ ಮನವಿ ಮಾಡಿದರು.
ಅಲ್ಲದೇ ಸರ್ವನು ಮತದಿಂದ ಅವರೇ ಮುಂದುವರಿಯುವಂತೆ ತೀರ್ಮಾನಿಸಲಾಯಿತು.
ವೇದಿಕೆಯಲ್ಲಿ ಸಲಹಾ ಸಮಿತಿ ಸದಸ್ಯರಾದ ಬಿದ್ದಂಡ ರಾಣಿ ಉತ್ತಯ್ಯ, ಹಾಗೂ ನಾಯಕಂಡ ಬೇಬಿ ಚಿಣ್ಣಪ್ಪ ಉಪಸ್ಥಿತರಿದ್ದರು.
ಮಹಾಸಭೆಯ ನಂತರ, ಖ್ಯಾತ ಜ್ಯೋತಿಷಿ ಕರವಟ್ಟಿರ ಶಶಿ ಸುಭ್ರಮಣಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊಡವ ಸಂಪ್ರದಾಯ, ಆಚಾರ, ವಿಚಾರದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ನಂತರ ಸದಸ್ಯರು ವಿವಿಧ ಆಟೋಟ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.