ಸೋಮವಾರಪೇಟೆ ಮೇ 30 NEWS DESK : ಕೊಡಗಿನ ಮಹಿಳೆಯೊಬ್ಬರು ಎವರೆಸ್ಟ್ ಬೇಸ್ ಕ್ಯಾಂಪ್ ಮೂಲಕ ಸಾಹಸ ಮಾಡಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರ ಸಮೀಪದ ಬಡುಬನ ಹಳ್ಳಿಯ ನಿವಾಸಿ ದಿವಂಗತ ಮಲ್ಲಪ್ಪನವರ ಪುತ್ರಿ ಡಾ.ಬಿ.ಎಂ.ಲತಾ ಅವರೇ ಎವರೆಸ್ಟ್ ಸಾಧಕಿ.
ಬೆಂಗಳೂರಿನಲ್ಲಿ ಸ್ತ್ರೀರೋಗ ತಜ್ಞೆಯಾಗಿರುವ ಇವರು ಕ್ರೀಡೆಯಲ್ಲಿ ಹಾಗೂ ಟ್ರಕ್ಕಿಂಗ್ ನಲ್ಲಿ ಆಸಕ್ತಿ ಹೊಂದಿದವರು. ಇತ್ತೀಚೆಗೆ ಇವರಿಗೆ ಎವರೆಸ್ಟ್ ಶಿಖರ ಏರಬೇಕೆಂಬ ಹಂಬಲ ಶುರುವಾಯಿತು. ಅದಕ್ಕಾಗಿ ನೇಪಾಳ ಮೂಲದ ಕಂಪೆನಿಯೊಂದರ ಮಾರ್ಗದರ್ಶನದಲ್ಲಿ 6 ತಿಂಗಳ ತರಬೇತಿ ಪಡೆದುಕೊಂಡರು.
ಪ್ರತಿ ನಿತ್ಯ 10ಕಿ.ಮೀ ಓಡುವುದು, ನಡೆಯುವುದು ಮತ್ತು ಚಿಕ್ಕ ಪುಟ್ಟ ಬೆಟ್ಟಗಳನ್ನು ಹತ್ತುವುದು ಈ ಅಭ್ಯಾಸ ಯಶಸ್ವಿಯಾಗಿ ಮುಗಿಸಿದ ನಂತರ ಏಪ್ರಿಲ್ 28 ರಿಂದ ಮೇ 11ರೊಳಗೆ ಪರ್ವತಾರೋಹಣಕ್ಕೆ ಸಿದ್ಧರಾದರು. ಭಾರತದ ವಿವಿಧೆಡೆಗಳಿಂದ ತಂಡಗಳು ಬಂದಿದ್ದವು. 57 ವರ್ಷದ ಲತಾ ಅವರ ತಂಡದಲ್ಲಿ 30, 40ವರ್ಷದ ಒಟ್ಟು ಎಂಟು ಮಂದಿ ಇದ್ದರು.
ಪ್ರತಿನಿತ್ಯ ಹತ್ತರಿಂದ ಹದಿನೈದು ಕಿಲೋಮೀಟರ್ ಏರುವುದು, ನಂತರ ವಿಶಾಂತಿ ಪಡೆಯುವುದು ಹೀಗೆ ಮಾಡುತ್ತಿದ್ದೆವು. ನಮ್ಮ ತಂಡದಲ್ಲಿ ನಾನು ಸೇರಿದಂತೆ ಮೂವರು ಮಾತ್ರ 18,514 ಅಡಿ ಎತ್ತರ ಏರಲು ಸಾಧ್ಯವಾಯಿತು ಎಂದು ಡಾಕ್ಟರ್ ಲತಾ ತಮ್ಮ ಅನುಭವ ಹಂಚಿಕೊಂಡರು.