ಮಡಿಕೇರಿ ಜೂ.3 NEWS DESK : ಆದಿವಾಸಿಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಒದಗಿಸಲು ಎಸ್‌ಟಿ ಜನಾಂಗಕ್ಕೆ ಒಳ ಮೀಸಲಾತಿ ನೀಡಬೇಕೆಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಒತ್ತಾಯಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಇದ್ದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರ ಒಳಮೀಸಲಾತಿಯನ್ನು ತಂದು ಕೆಲವು ಸಮುದಾಯಗಳಿಗೆ ನೆರವಾಗಿದೆ. ಇದೀಗ ರಾಜ್ಯದಲ್ಲಿ ಅಧಿಕಾರದಲ್ಲಿರುವ ಅಹಿಂದ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರಕಾರ ಎಸ್‌ಟಿ ಜನಾಂಗಕ್ಕೆ ಒಳ ಮೀಸಲಾತಿ ನೀಡುವ ಮೂಲಕ 49 ಸಮುದಾಯಗಳಿಗೆ ನ್ಯಾಯ ಒದಗಿಸಲಿ ಎಂದರು.
ಎಸ್‌ಟಿ ಜನಾಂಗಕ್ಕೆ ಒಳ ಮೀಸಲಾತಿ ನೀಡಲು ಸರಕಾರ ಸಮಿತಿಯೊಂದನ್ನು ರಚಿಸಬೇಕು. ಈ ಬೇಡಿಕೆಯ ಕುರಿತು ಆದಿವಾಸಿಗಳಿರುವ ಪ್ರದೇಶಗಳಲ್ಲಿ ಜನಜಾಗೃತಿ ಮೂಡಿಸಲಾಗುವುದು ಮತ್ತು ಸರಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಜಾತಿ ಜನ ಗಣತಿ ವರದಿಯನ್ನು ಬಿಡುಗಡೆ ಮಾಡಿದರೆ ನಿಖರವಾದ ಅಂಕಿ ಅಂಶಗಳು ಲಭಿಸಲಿದ್ದು, ಜನಸಂಖ್ಯಾ ಆಧಾರದಲ್ಲಿ ಮೀಸಲಾತಿ ನೀಡಿ ಆದಿವಾಸಿಗಳಿಗೆ ನ್ಯಾಯ ಒದಗಿಸಬಹುದಾಗಿದೆ. ಆದರೆ ಪ್ರಬಲ ಜಾತಿಗಳ ಒತ್ತಡಕ್ಕೆ ಮಣಿಯುತ್ತಿರುವ ಸರಕಾರ ವರದಿ ಹೊರ ತರಲು ತಡ ಮಾಡುತ್ತಿದೆ ಎಂದು ಟೀಕಿಸಿದರು.
::: ಲೈನ್ ಮನೆ ಮುಕ್ತಗೊಳಿಸಿ :::
ಕಾರ್ಮಿಕರಾಗಿ ದುಡಿಯುತ್ತಿರುವ ಆದಿವಾಸಿಗಳನ್ನು ಲೈನ್ ಮನೆಗಳಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದ ಚೇತನ್, ಕೆಲವು ತೋಟಗಳಲ್ಲಿ ಇಂದಿಗೂ ಆಧುನಿಕ ಜೀತ ಪದ್ಧತಿ ಜಾರಿಯಲ್ಲಿದೆ. ಕಾರ್ಮಿಕರು ಪಡೆದ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ವಿಧಿಸುವ ಶೋಷಣೆಯ ವ್ಯವಸ್ಥೆ ಇದೆ ಎಂದು ಆರೋಪಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಅವರು ಗ್ರಾಮೀಣ ಪ್ರದೇಶದ ತೋಟಗಳಲ್ಲಿ ಆದಿವಾಸಿಗಳು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಅರಿಯಬೇಕು. ಲೈನ್ ಮನೆಗಳಲ್ಲಿರುವ ಆದಿವಾಸಿ ಕಾರ್ಮಿಕರ ಕಷ್ಟಗಳನ್ನು ಅಧ್ಯಯನ ಮಾಡಿ ಲೈನ್ ಮನೆಗಳಿಂದ ಮುಕ್ತಗೊಳಿಸಿ ಅವರಿಗೆ ಸ್ವತಂತ್ರವಾದ ಬದುಕು ಕಲ್ಪಿಸಲು ಸರಕಾರ ಸಮಿತಿಯೊಂದನ್ನು ರಚಿಸಬೇಕು ಎಂದು ಒತ್ತಾಯಿಸಿದರು.
::: ರಾಜೀನಾಮೆಗೆ ಆಗ್ರಹ :::
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರು ಸಚಿವ ಸ್ಥಾನದಿಂದ ನಿರ್ಗಮಿಸಬೇಕು. ಅವರು ರಾಜೀನಾಮೆ ನೀಡದಿದ್ದಲ್ಲಿ ಮುಖ್ಯಮಂತ್ರಿಗಳು ರಾಜೀನಾಮೆ ಪಡೆಯಬೇಕು. ಎಸ್‌ಐಟಿ ತನಿಖೆಯ ಮೇಲೆ ನಂಬಿಕೆ ಇದೆ, ಪರಿಶಿಷ್ಟರ ಅನುದಾನವಾದ ಕಾರಣ ಸಿಬಿಐ ತನಿಖೆ ನಡೆದರೂ ಉತ್ತಮ ಎಂದು ಒತ್ತಾಯಿಸಿದ ಚೇತನ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಲು ನಾಗೇಂದ್ರ ಅವರಿಗೆ ಏನು ಅರ್ಹತೆ ಇದೆ ಎಂದು ಪ್ರಶ್ನಿಸಿದರು.
ಬಿಜೆಪಿ ಸರಕಾರ ಶೇ.40 ರಷ್ಟು ಕಮಿಷನ್ ಪಡೆಯುತ್ತಿತ್ತು ಎಂದು ಆರೋಪ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಬಿಜೆಪಿಗಿಂತ ಕಡಿಮೆ ಇಲ್ಲ ಎಂದು ಟೀಕಿಸಿದರು.
::: ಕಾಂಗ್ರೆಸ್, ಬಿಜೆಪಿ ಒಂದೇ :::
ದಿಡ್ಡಳ್ಳಿ ಹೋರಾಟಗಾರ್ತಿ ಜೆ.ಕೆ.ಅನಿತಾ ಮಾತನಾಡಿ ಬಿಜೆಪಿ, ಕಾಂಗ್ರೆಸ್ ಸರಕಾರಗಳೆರಡೂ ಒಂದೇ, ಚುನಾವಣೆ ಸಂದರ್ಭ ಕಾರು, ಬಸ್ ಗಳಲ್ಲಿ ಬಂದು ಮತ ಕೇಳುವ ರಾಜಕಾರಣಿಗಳು ಅಧಿಕಾರಕ್ಕೆ ಬಂದ ಮೇಲೆ ತಿರುಗಿ ನೋಡುತ್ತಿಲ್ಲ. ಜೇನು ಕುರುಬ, ಬೆಟ್ಟ ಕುರುಬ, ಎರವ, ಪಣಿ ಎರವ ಸೇರಿದಂತೆ ಆಗಿವಾಸಿಗಳನ್ನು ಗುರುತಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಿಡ್ಡಳ್ಳಿ ನಿರಾಶ್ರಿತರಿಗಾಗಿ ನಿರ್ಮಿಸಲಾದ ಮನೆಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಅರ್ಜಿ ಸಲ್ಲಿಸಿದರೂ ಸರಕಾರದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ದಿಡ್ಡಳ್ಳಿ ಹೋರಾಟದ ಸಂದರ್ಭ ಮೊದಲು ಮನೆ ನೀಡುತ್ತೇವೆ, ನಂತರ ಕೃಷಿಗಾಗಿ ತಲಾ ಮೂರು ಎಕರೆ ಭೂಮಿ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ನಮಗೆ ಭೂಮಿ ನೀಡಿಲ್ಲ. ದುಡಿಮೆಗೆ ಏನೂ ಇಲ್ಲದ ಆದಿವಾಸಿಗಳು ಬಸವನಹಳ್ಳಿ ಮತ್ತು ಬ್ಯಾಡಗೊಟ್ಟದ ಪುನರ್ ವಸತಿಗಳಿಂದ ಮತ್ತೆ ಲೈನ್ ಮನೆಗಳಿಗೆ ತೆರಳುತ್ತಿದ್ದಾರೆ. ಹಲವು ಮನೆಗಳು ಖಾಲಿ ಬಿದ್ದಿವೆ ಎಂದು ಬೇಸರ ವ್ಯಕ್ತಪಡಿಸಿದರು. ಕನಿಷ್ಠ ತಲಾ ಎರಡು ಎಕರೆ ಭೂಮಿಯನ್ನಾದರು ಸರಕಾರ ನೀಡಬೇಕೆಂದು ಅನಿತಾ ಒತ್ತಾಯಿಸಿದರು. ಮತ್ತೊಬ್ಬ ಹೋರಾಟಗಾರ್ತಿ ಜೆ.ಕೆ.ಜಯ ಮಾತನಾಡಿ ಮಕ್ಕಳಿಗೆ ಶಿಕ್ಷಣ ನೀಡದ ಪರಿಸ್ಥಿತಿಯಲ್ಲಿ ನಾವಿದ್ದೇವೆ, ಆದಿವಾಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರೆಯುತ್ತಿಲ್ಲ. ಬಡ್ಡಿಗೆ ಸಾಲ ಪಡೆದು ಶಿಕ್ಷಣ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಪುನರ್ ವಸತಿಯ ಮನೆಗಳು ಕುಳಿತುಕೊಳ್ಳಲು ಮತ್ತು ನಿದ್ರಿಸಲಷ್ಟೇ ಸೀಮಿತವಾಗಿದೆ, ಅಲ್ಲಿ ಬೇರೆ ಯಾವುದೇ ಸೌಲಭ್ಯಗಳಿಲ್ಲವೆಂದು ಗಮನ ಸೆಳೆದರು. ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಅರ್ಜುನ್ ದೇವ್ ಎ. ಉಪಸ್ಥಿತರಿದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*