ಕುಶಾಲನಗರ ಜೂ.12 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು( ಕ.ಸಾ.ಪ.), ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹೆಬ್ಬಾಲೆ ವಲಯ ಕ.ಸಾ.ಪ.ಘಟಕ ಹಾಗೂ ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಭಾಷಾ ಸಂಘದ ಸಂಯುಕ್ತಾಶ್ರಯದಲ್ಲಿ ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿರಾಜಪೇಟೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಳವಣಿಗೆ ಹಾಗೂ ಕ.ಸಾ.ಪ.ಅಧ್ಯಕ್ಷರುಗಳು ಕುರಿತು ಬಿ.ಜಿ.ರಘುನಾಥನಾಯಕ್ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ವಿರಾಜಪೇಟೆ ತಾಲ್ಲೂಕಿನಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳ ಸೇವೆಗಳು ಕುರಿತು ಏರ್ಪಡಿಸಿದ್ದ ಬಿ.ಜಿ.ರಘುನಾಥನಾಯಕ್ ಕನ್ನಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಮಕ್ಕಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಅರಿವು ಮೂಡಿಸುವುದು ಮತ್ತು ಅವರನ್ನು ಉತ್ತಮ ಸತ್ಪ್ರಜೆಗಳನ್ನಾಗಿ ರೂಪಿಸುವುದು ಕನ್ನಡ ಸಾಹಿತ್ಯ ಪರಿಷತ್ತಿನ ಉದ್ದೇಶವಾಗಿದೆ ಎಂದರು.
ಮಕ್ಕಳು ಕಲೆ, ಸಾಹಿತ್ಯ, ವಿಜ್ಞಾನದ ಪುಸ್ತಕಗಳನ್ನು ಓದುವ ಪ್ರವೃತ್ತಿಯೊಂದಿಗೆ ಬರವಣಿಗೆಯ ಕೌಶಲ್ಯ ಬೆಳೆಸಿಕೊಂಡು ಉತ್ತಮ ಜ್ಞಾನ ಬೆಳೆಸಿಕೊಳ್ಳಬೇಕು.
ನಾಡಿನ ಸಾಹಿತಿಗಳ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮತ್ತು ಕೊಂಡೊಯ್ಯುವ ಮಹತ್ತರ ಕಾರ್ಯ ಶಿಕ್ಷಕರಿಂದ ಮಾತ್ರ ಸಾಧ್ಯ ಸಲಹೆ ನೀಡಿದರು.
ಜಿಲ್ಲೆಯ ಗಡಿನಾಡಾದ ವಿರಾಜಪೇಟೆಯಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಕರ್ನಾಟಕ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅನೇಕ ಕನ್ನಡ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಕನ್ನಡ ಭಾಷೆ, ಸಾಹಿತ್ಯ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಳ್ಳಿಯ ಕಡೆಗೆ ಹಾಗೂ ಶಾಲೆಯ ಕಡೆಗೆ ಸಾಹಿತ್ಯದ ನಡಿಗೆ ಎಂಬಿತ್ಯಾದಿ ಕಾರ್ಯಕ್ರಮಗಳ ಮೂಲಕ ಸಾಹಿತ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಟಿ.ಜಿ.ಪ್ರೇಮಕುಮಾರ್ ಹೇಳಿದರು.
ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷರೂ ಆದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಚ್.ವಿ.ಶಿವಪ್ಪ ಮಾತನಾಡಿ, ಮಕ್ಕಳನ್ನು ಕ್ರಿಯಾಶೀಲರನ್ನಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ಮಕ್ಕಳಲ್ಲಿ ಸಾಹಿತ್ಯದ ಪ್ರೇಮ ಬೆಳೆಸಲು ಮುಂದಾಗಬೇಕು ಎಂದರು.
ಮಕ್ಕಳಲ್ಲಿ ಸಾಹಿತ್ಯ ಪ್ರೇಮ ಬಂದರೆ ಮಾತ್ರ ನಿಜವಾದ ಸಾಹಿತ್ಯ ಲೋಕ ಸೃಷ್ಟಿಯಾಗುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಕರ ಕರ್ತವ್ಯ ಪ್ರಮುಖವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಬೇಕು.
ಹಾಗೆಯೇ, ಕವಿಗಳು, ಸಾಹಿತಿಗಳ ಜೀವನ ಕ್ರಮ ಮತ್ತು ಅವರ ಸಾಹಿತ್ಯದ ಕೊಡುಗೆಗಳ ಬಗ್ಗೆ ಅಧ್ಯಯನ ಮಾಡಿ ಸ್ವತಃ ಪ್ರಬಂಧ ಬರೆಯುವ ಕೌಶಲ್ಯ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಎನ್.ವೆಂಕಟನಾಯಕ್, ಕೊಡಗಿನಲ್ಲಿ ಕಥೆಗಾರ್ತಿ ಕೊಡಗಿನ ಗೌರಮ್ಮ, ಪಂಜೆ ಮಂಗೇಶರಾಯರು, ಭಾರತೀಸುತರು ಸೇರಿದಂತೆ ಹಿರಿಯ ಸಾಹಿತಿಗಳು ಹಾಗೂ ಸಮಕಾಲೀನ ಸಾಹಿತಿಗಳು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಬೆಳಕು ಚೆಲ್ಲಿದರು.
ಶಾಲಾ ಮುಖ್ಯ ಶಿಕ್ಷಕ ಬಸವರಾಜಶೆಟ್ಟಿ, ಕಸಾಪ ತಾಲ್ಲೂಕು ಗೌರವ ಕೋಶಾಧಿಕಾರಿ ಕೆ.ವಿ.ಉಮೇಶ್, ಪದಾಧಿಕಾರಿ ಡಿ.ಆರ್. ಸೋಮಶೇಖರ್,
ಕ.ಸಾ.ಪ.ಸದಸ್ಯರಾದ ಎಚ್.ಪಿ.ಉದಯ್ ಕುಮಾರ್, ಟಿ.ಎಸ್.ಶಾಂಭಶಿವಮೂರ್ತಿ, ಇತರರು ಇದ್ದರು. ಶಿಕ್ಷಕ ಸಿ.ಡಿ.ಲೋಕೇಶ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಡಿ.ಕವಿತಾ ಸ್ವಾಗತಿಸಿದರು. ಶಿಕ್ಷಕ ಭೋಜೇಗೌಡ ವಂದಿಸಿದರು. ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.