ಬೆಂಗಳೂರು ಜೂ.14 NEWS DESK : ಕಾಳು ಮೆಣಸಿನ ದರ ದೇಶದ ಮಾರುಕಟ್ಟೆಯಲ್ಲಿ ಏರುಮುಖವಾಗಿ ಸಾಗುತ್ತಿದೆ. ಕಳೆದ ಜನವರಿ ತಿಂಗಳಿನಲ್ಲಿ ಕಿಲೋಗೆ 500-520 ರ ಸಮೀಪ ಇದ್ದ ಕಾಳು ಮೆಣಸಿನ ದರ ಈಗ ಕೆಜಿಗೆ 700 ಕ್ಕೆ ತಲುಪಿದೆ. ಬುಧವಾರ ಕೊಚಿನ್, ಸಕಲೇಶಪುರ ಹಾಗೂ ಚಿಕ್ಕಮಗಳೂರಿನ ಮಾರುಕಟ್ಟೆಗಳಲ್ಲಿ ಕಾಳು ಮೆಣಸು 700 ರೂಪಾಯಿಗಳವರೆಗೆ ಮಾರಾಟವಾಯಿತು. ಕೊಡಗಿನ ವಿವಿದ ಪಟ್ಟಣಗಳಲ್ಲಿ ಮೆಣಸಿನ ಬೆಲೆ 680-695 ರ ವರೆಗೆ ಇತ್ತು. ಈ ಮೊದಲು 2018 ರಲ್ಲಿ ಮೆಣಸು ಸರ್ವಕಾಲಿಕ ದಾಖಲೆಯ 800 ರೂಪಾಯಿಗಳ ವರೆಗೆ ತಲುಪಿತ್ತು.
ನಂತರ ವಿಯಟ್ನಾಂ ಮತ್ತು ಶ್ರೀಲಂಕಾದಿಂದ ಅಗ್ಗದ ಕಾಳು ಮೆಣಸು ಆಮದಾಗಿ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕಾಳು ಮೆಣಸಿಗೆ ಬೇಡಿಕೆ ಕಡಿಮೆಯಾಗಿ ಬೆಲೆ ಕುಸಿತ ಕಂಡಿದ್ದು ಬೆಳೆಗಾರರಲ್ಲಿ ಆತಂಕವನ್ನೂಮೂಡಿಸಿತ್ತು.ಇದೀಗ ಬೆಲೆ ಮತ್ತೆ ಏರುಮುಖವಾಗುತ್ತಿರುವುದು ಬೆಳೆಗಾರರ ಮುಖದಲ್ಲಿ ಮಂದಹಾಸವನ್ನು ಮೂಡಿಸಿದೆ.
ವಿಶ್ವದಲ್ಲಿ ವಿಯಟ್ನಾಂ ಕಾಳು ಮೆಣಸು ಬೆಳೆಯ ಅತ್ಯಂತ ದೊಡ್ಡ ಉತ್ಪಾದಕನಾಗಿದ್ದು 2019 ರಲ್ಲಿ ಸುಮಾರು ಮೂರು ಲಕ್ಷ ಟನ್ ಬೆಳೆ ಬೆಳೆದಿತ್ತು. ಆದರೆ ನಂತರದ ವರ್ಷಗಳಲ್ಲಿ ಪ್ರತಿಕೂಲ ಹವಾಮಾನ, ರೋಗ ಬಾಧೆ ಮತ್ತು ದರ ಕುಸಿತದ ಕಾರಣದಿಂದಾಗಿ ಬೆಳೆಗಾರರು ಇತರ ಬೆಳೆ ಬೆಳೆಯಲು ಮುಂದಾಗುತಿದ್ದು ಅಲ್ಲಿ ಈ ವರ್ಷದ ಉತ್ಪಾದನೆ ಸುಮಾರು ಎರಡು ಲಕ್ಷ ಟನ್ ಗಿಂತ ಸ್ವಲ್ಪ ಹೆಚ್ಚಾಗಿದೆ. ಇಂಡೋನೇಷ್ಯಾ ಎರಡನೇ ಸ್ಥಾನದಲ್ಲಿದ್ದು ಇಲ್ಲಿ ವಾರ್ಷಿಕ 85 ಸಾವಿರ ಟನ್ ಬೆಳೆ ಬೆಳೆಯಲಾಗುತ್ತಿದೆ.
ಭಾರತದಲ್ಲಿ ವರ್ಷಕ್ಕೆ 70 ಸಾವಿರ ಟನ್ ಕಾಳುಮೆಣಸಿನ ಬೆಳೆಯುತ್ತಿದ್ದು, ರಾಜ್ಯದಲ್ಲಿ 36 ಸಾವಿರ ಟನ್ ಉತ್ಪಾದನೆ ಆಗುತಿದ್ದು ಕೇರಳದಲ್ಲಿ ಸುಮಾರು 25 ಸಾವಿರ ಟನ್ ಉತ್ಪಾದನೆ ಆಗುತ್ತಿದೆ. ಆದರೆ ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದಾಗಿ ಕೇರಳದಲ್ಲಿ ಮೆಣಸು ಉತ್ಪಾದನೆ ಶೇಕಡಾ 20 ರಿಂದ 25 ರಷ್ಟು ನಾಶವಾಗಲಿದೆ ಎಂದು ಹೇಳಲಾಗಿದೆ. ಶೀತ ವಾತಾವರಣವು ದೇಶೀಯ ಕಾಳುಮೆಣಸು ಬಳಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದಾಗಿ ಉತ್ತಮ ಗುಣಮಟ್ಟದ ಮೆಣಸು ರೂ. ಪ್ರತಿ ಕಿಲೋಗ್ರಾಂಗೆ 690-700 ರೂಪಾಯಿವರೆಗೆ ಏರಿಕೆ ಆಗಿದೆ.
ಸರಬರಾಜಿನ ಕೊರತೆ ಮತ್ತು ಹೆಚ್ಚಿದ ಕೈಗಾರಿಕಾ ಬೇಡಿಕೆಯಿಂದಾಗಿ, ವಿಶೇಷವಾಗಿ ಮಸಾಲೆ ತಯಾರಕರಿಂದ ಹೆಚ್ಚಿದ ಬೇಡಿಕೆಯಿಂದ ಕಳೆದ ಮೂರು ತಿಂಗಳಲ್ಲಿ ಮೆಣಸು ಬೆಲೆಗಳು 20% ಕ್ಕಿಂತ ಹೆಚ್ಚಾಗಿವೆ.
ದೇಶೀಯ ಮತ್ತು ಆಮದು ಮಾಡಿದ ಕಾಳುಮೆಣಸಿನ ಪರಿಣಾಮ, ಸಂಭಾವ್ಯ ಬೆಲೆ ಕುಸಿತವನ್ನು ತಪ್ಪಿಸಲು ಅನೇಕ ರೈತರು ವರ್ಷದ ಆರಂಭದಲ್ಲಿ ತಮ್ಮ ದಾಸ್ತಾನನ್ನು ಮಾರಾಟ ಮಾಡಿದ್ದರಿಂದ ಇಡುಕ್ಕಿ ಯ ಕಾಳುಮೆಣಸು ಲಭ್ಯತೆ ಸೀಮಿತವಾಗಿದೆ. ಮಾರುಕಟ್ಟೆಯು ಈಗ ಆಮದು ಮಾಡಿದ ಕಾಳುಮೆಣಸಿನ ಮೇಲೆ ಹೆಚ್ಚು ಅವಲಂಬಿತವಾಗಿದೆ, ಶ್ರೀಲಂಕಾ ಮತ್ತು ವಿಯೆಟ್ನಾಂ ಕಾಳುಮೆಣಸಿನ ಬೆಲೆಗಳು ಜನವರಿಯಿಂದ ಪ್ರಸ್ತುತ ಅವಧಿಯವರೆಗೆ ಗಣನೀಯವಾಗಿ ಏರಿದೆ, ಆದರೆ ಗುಣಮಟ್ಟದಲ್ಲಿ ಕಡಿಮೆ ದರ್ಜೆ ಇರುವುದರಿಂದ ಇದಕ್ಕೆ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕುತ್ತಿಲ್ಲ. ಆದರೆ ಭಾರತೀಯ ಮೆಣಸು ಗುಣಮಟ್ಟದಲ್ಲಿ ಉತ್ಕೃಷ್ಟ ದರ್ಜೆಯದಾಗಿರುವುದರಿಂದ ಬೇಡಿಕೆ ಹೆಚ್ಚಾಗಿದು ದುಬಾರಿಯೂ ಆಗಿದೆ.
ವರದಿ : ಕೋವರ್‌ಕೊಲ್ಲಿ ಇಂದ್ರೇಶ್