ಮಡಿಕೇರಿ NEWS DESK ನ.16 : ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಮಾತನಾಡಿದರು. ವಿವಿಧ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗೆ 208 ಕೋಟಿ ರೂ. ವಿನಿಯೋಗ ಮಾಡಲಾಗುತ್ತದೆ ಎಂದು ಹೇಳಿದರು. ಸೋಮವಾರಪೇಟೆ, ಮಾದಾಪುರ, ಮೂರ್ನಾಡು, ಹುದಿಕೇರಿ, ಬಾಳೆಲೆ, ಸಿದ್ದಾಪುರ, ಕೂಡಿಗೆ, ಕೋಪಟ್ಟಿ, ಸಂಪಾಜೆ, ಕೊಡ್ಲಿಪೇಟೆ, ಕಾಟಕೇರಿ, ಕಳತ್ಮಾಡು, ಮರುಗೋಡು ಕೇಂದ್ರಗಳಲ್ಲಿ ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಮುಂದಾಗಲಾಗಿದೆ. ಆ ನಿಟ್ಟಿಲ್ಲಿ ಈಗಾಗಲೇ ಹಲವು ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಟೆಂಡರ್ ಆಹ್ವಾನಿಸಲಾಗಿದೆ ಎಂದರು. ಜಿಲ್ಲೆಯ ಹಾಡಿಗಳು ಸೇರಿದಂತೆ ಎಲ್ಲಾ ಕುಗ್ರಾಮಗಳಿಗೂ ಸಹ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗಿದೆ. ಆ ನಿಟ್ಟಿನಲ್ಲಿ ಸೆಸ್ಕ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯ ನಿರ್ವಹಿಸುವಂತೆ ಸಚಿವರು ಸೂಚಿಸಿದರು. ಸರ್ಕಾರ ವಿವಿಧ ಕಡೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳನ್ನು ಸ್ಥಾಪಿಸಲು ಮುಂದಾಗಿದೆ. ವಿದ್ಯುತ್ ಉಪ ಕೇಂದ್ರಗಳು ಎಲ್ಲೆಲ್ಲಿ ಅಗತ್ಯವಿದೆ. ಅಂತಹ ಕಡೆಗಳಲ್ಲಿ ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ ಮುಂದಾಗಲಾಗುವುದು. ಅಕ್ರಮ ಸಕ್ರಮ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಕ್ರಮವಹಿಸಲಾಗುವುದು. ರಾಜ್ಯದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸೋಲಾರ್ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ 636 ಮಂಜೂರಾದ ಹುದ್ದೆಗಳಿದ್ದು, 242 ಮಂದಿ ಕಾರ್ಯನಿರ್ವಹಿಸುತಿದ್ದಾರೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೂಡಲೇ ಕ್ರಮವಹಿಸಲಾಗುವುದು ಎಂದು ಕೆ.ಜೆ.ಜಾರ್ಜ್ ಅವರು ತಿಳಿಸಿದರು. ಗೃಹಜ್ಯೋತಿ ಯೋಜನೆಯು ರಾಜ್ಯಾದ್ಯಂತ ಉತ್ತಮವಾಗಿ ನಡೆಯುತ್ತಿದ್ದು, ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ 1,56,022 ಕುಟುಂಬಗಳು ಹೆಸರು ನೋಂದಣಿ ಮಾಡಿದ್ದು, ಶೇ.99.59 ರಷ್ಟು ಪ್ರಗತಿ ಸಾಧಿಸಲಾಗಿದೆ. ಇದಕ್ಕಾಗಿ ಪ್ರತಿ ತಿಂಗಳು 6.9 ಕೋಟಿ ಸಹಾಯಧನ ಬೇಡಿಕೆ ಇದೆ ಎಂದು ಮಾಹಿತಿ ನೀಡಿದರು. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುದಿಕೇರಿ, ಸಿದ್ದಾಪುರ, ಬಾಳೆಲೆಯಲ್ಲಿ ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದ್ದು, ಕಾಮಗಾರಿ ಸದ್ಯದಲ್ಲೇ ಆರಂಭವಾಗಲಿದೆ ಎಂದರು.
ಹಾಗೆಯೇ ಸಂಪಾಜೆ, ಭಾಗಮಂಡಲ ಭಾಗದಲ್ಲಿಯೂ ಸಹ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು ಮುಂದಾಗಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಇಂಧನ ಇಲಾಖೆಯ ಅಧಿಕಾರಿಯೊಬ್ಬರು ಸಂಪಾಜೆ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಅರಣ್ಯವಿರುವುದರಿಂದ 33 ಕೆ.ವಿ. ವಿದ್ಯುತ್ ಉಪ ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್‌ಗೌಡ ಅವರು 33 ಕೆ.ವಿ.ವಿದ್ಯುತ್ ಉಪ ಕೇಂದ್ರ ನಿರ್ಮಾಣ ಮಾಡುವುದರಿಂದ ಸಮರ್ಪಕವಾಗಿ ವಿದ್ಯುತ್ ಒದಗಿಸಲು ಸಾಧ್ಯವಿಲ್ಲ. ಆದ್ದರಿಂದ ಭವಿಷ್ಯದ ದೃಷ್ಟಿಯಿಂದ 66 ಕೆ.ವಿ. ವಿದ್ಯುತ್ ಉಪಕೇಂದ್ರ ನಿರ್ಮಾಣ ಮಾಡುವುದು ಒಳ್ಳೆಯದು ಎಂದು ಅವರು ಸಲಹೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸೆಸ್ಕ್ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ ಅವರು ಸದ್ಯ ಈಗಾಗಲೇ ಇರುವ ಪ್ರಸ್ತಾವನೆಯಂತೆ 33 ಕೆ.ವಿ. ವಿದ್ಯುತ್ ಉಪ ಕೇಂದ್ರವನ್ನು ನಿರ್ಮಿಸಲಿ, ನಂತರ ಮುಂದಿನ ಹಂತದಲ್ಲಿ 66 ಕೆ.ವಿ. ವಿದ್ಯುತ್ ಉಪಕೇಂದ್ರವನ್ನು ನಿರ್ಮಿಸಲು ಪ್ರಯತ್ನಿಸಬಹುದು ಎಂದರು. ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಒಪ್ಪಿಗೆ ಪಡೆಯುವುದು. ಹಾಗೆಯೇ ಹಾಡಿಗಳು ಸೇರಿದಂತೆ ಕುಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಲಾಗುತ್ತದೆ ಎಂದು ರಮೇಶ್ ಬಂಡಿ ಸಿದ್ದೇಗೌಡ ಅವರು ಹೇಳಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಕಾಮಗಾರಿಗೆ ಬಾಕಿ ಇರುವುದನ್ನು ಶೀಘ್ರವೇ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುವುದು. ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಲಾಗುವುದು ಎಂದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಪ್ರಸಕ್ತ ವರ್ಷದ ಮಳೆಗಾಲದ ಸಂದರ್ಭದಲ್ಲಿ ಸೆಸ್ಕ್ ಇಲಾಖೆಯಿಂದ ಉತ್ತಮವಾಗಿ ಕೆಲಸ ನಿರ್ವಹಣೆಯಾಗಿದೆ ಎಂದು ತಿಳಿಸಿದರು. ಮಳೆಗಾಲದ ಸಂದರ್ಭದಲ್ಲಿ ಹಾನಿಯಾಗಿ ವಿದ್ಯುತ್ ಕಂಬಗಳು ಹಾಗೂ ಪರಿವರ್ತಕಗಳನ್ನು ಬದಲಿಸಿ, ನಿರಂತರ ವಿದ್ಯುತ್ ಪೂರೈಕೆಗೆ ಶ್ರಮಿಸಿದ್ದಾರೆ ಎಂದು ಮಾಹಿತಿ ನೀಡಿದರು. ಪ್ರಸಕ್ತ ವರ್ಷದಲ್ಲಿ 40 ಕ್ಕೂ ಹೆಚ್ಚು ಲೈನ್‌ಮೆನ್‌ಗಳು ಕರ್ತವ್ಯ ನಿರ್ವಹಿಸಿದ ಪರಿಣಾಮ ಉತ್ತಮ ಕಾರ್ಯನಿರ್ವಹಣೆ ಆಗಿದೆ ಎಂದರು. ಪ್ರಸಕ್ತ ವರ್ಷದಲ್ಲಿ ಹೆಚ್ಚಿನ ಮಳೆಯಿಂದಾಗಿ 3,472 ಕಂಬಗಳಿಗೆ ಹಾನಿಯಾಗಿದ್ದು, 12.42 ಎಚ್.ಟಿ ಲೈನ್, 11.12 ಎಲ್‌ಟಿ ಲೈನ್ ಹಾಗೂ 77 ವಿದ್ಯುತ್ ಪರಿವರ್ತಕಗಳು ಹಾನಿಯಾಗಿದ್ದು, ಒಟ್ಟು 550.32 ಲಕ್ಷದಷ್ಟು ಹಾನಿಯಾಗಿದೆ ಎಂದು ತಿಳಿಸಿದರು. ಗಂಗಾ ಕಲ್ಯಾಣ ಮತ್ತು ಕುಡಿಯುವ ನೀರು ಪೂರೈಕೆ ಯೋಜನೆಯಡಿ ಕಳೆದ ವರ್ಷ 87 ಮತ್ತು 52 ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ 19 ಮತ್ತು ಕುಡಿಯುವ ನೀರು ಪೂರೈಕೆ ಯೋಜನೆಯಡಿ 76 ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕಿಸಲಾಗಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಶೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಇಂಧನ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.
Breaking News
- *ಕೊಡಗು ಜಿಲ್ಲೆಯಲ್ಲಿ 13 ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್*
- *ಹುದ್ದೆಗಳ ಭರ್ತಿಗೆ ಕ್ರಮ : ಸಚಿವ ಕೆ.ಜೆ.ಜಾರ್ಜ್ ಭರವಸೆ*
- *ಕುಶಾಲನಗರ ಗಣಪತಿ ದೇವಾಲಯಕ್ಕೆ ಉದ್ಯಮಿಗಳು ಹಾಗೂ ಟಿಬೆಟಿಯನ್ ಕುಟುಂಬದಿಂದ ಬೆಳ್ಳಿ ಕವಚ ಮತ್ತು ಪೂಜಾ ಸಾಮಾಗ್ರಿ ವಿತರಣೆ*
- *ವಿರಾಜಪೇಟೆ : ಡಿಜಿಟಲ್ ಗ್ರಂಥಾಲಯದ ಮೂಲಕ ಜ್ಞಾನದ ಸಶಕ್ತೀಕರಣ ಉಪನ್ಯಾಸ ಕಾರ್ಯಕ್ರಮ*
- *ಅತಿ ಹೆಚ್ಚು ಅಂಕ ಪಡೆದವರಿಗೆ ಸನ್ಮಾನ : ಶಿಕ್ಷಣ ನೀಡಿದ ಸರ್ಕಾರಿ ಶಾಲೆಗೆ ಆದಾಯದ ಒಂದು ಭಾಗ ಮೀಸಲಿಡಿ : ಹೆಚ್.ಎಲ್.ದಿವಾಕರ್ ಕರೆ*
- *ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ನೂತನ ಪದಾಧಿಕಾರಿಗಳ ನೇಮಕ : ಜಿಲ್ಲಾಧ್ಯಕ್ಷರಾಗಿ ಡಾ.ಯಾಲದಾಳು ಮನೋಜ್ ಬೋಪಯ್ಯ ಆಯ್ಕೆ*
- *ವಾರ ಭವಿಷ್ಯ : ಯಾರಿಗೆ ಈ ವಾರ ಶುಭ… : ನ.18 ರಿಂದ 24ರ ವರೆಗೆ*
- *ಬಿ.ಡಿ.ಮಂಜುನಾಥ್ “ಕೊಡಗು ಸಹಕಾರ ರತ್ನ” ಪ್ರಶಸ್ತಿಗೆ ಭಾಜನ : ನ.20 ರಂದು ಸಹಕಾರ ಸಪ್ತಾಹ ಸಮಾರೋಪ, ಪ್ರಶಸ್ತಿ ಪ್ರದಾನ*
- *ಭಾಗಮಂಡಲದಲ್ಲಿ ಕಾವೇರಿ ಆರತಿ*
- *ಬೊಳ್ಳಮ್ಮಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ*