ಮೈಸೂರು ಜೂ.15 NEWS DESK : ಬ್ಯಾಂಕಿನವರಂತೆ ಮಾತಾಡಿ, ಆನ್ ಲೈನ್ ಉದ್ಯೋಗ , ಷೇರು ಮಾರುಕಟ್ಟೆ ಹಣದ ಅಮಿಷ ಒಡ್ಡಿ ಹಣ ದೋಚುವ ಗ್ಯಾಂಗ್ ನ ವಂಚಕರು ಇದೀಗ ಅರಣ್ಯ ಇಲಾಖೆಯ ಆನ್ಲೈನ್ ರಿಸರ್ವೇಶನ್ ಗೂ ನಕಲಿ ವೆಬ್ಸೈಟ್ ತೆರೆದು ಹಣ ದೋಚುತ್ತಿರುವ ಬಗ್ಗೆ ಅರಣ್ಯ ಇಲಾಖೆಯು ಪ್ರವಾಸಿಗರಿಗೆ ಎಚ್ಚರಿಸಿದೆ.
ಕಳೆದ ಜನವರಿ ತಿಂಗಳಿನಲ್ಲಿ ನಾಗರಹೊಳೆ ನ್ಯಾಷನಲ್ ಪಾರ್ಕ್ ಎಂಬ ನಕಲಿ ವೆಬ್ ಸೈಟ್ ತೆರೆದು ಪ್ರವಾಸಿಗರಿಗೆ ಸಫಾರಿ ಹಾಗೂ ರೂಂ ಬುಕಿಂಗ್ ಎಂದು ಹಣ ವಂಚಿಸುತಿದ್ದ ಗ್ಯಾಂಗ್ ಇದೀಗ ಮತ್ತೆ ಸಕ್ರಿಯವಾಗಿದೆ. ನಾಗರಹೊಳೆಯ ಕಾಕನಕೋಟೆ, ವೀರನಗೊಸಳ್ಳಿ ಮತ್ತು ನಾಣಚ್ಚಿ ಕೇಂದ್ರಗಳ ಮೂಲಕ ಸಫಾರಿಗೆ ತೆರಳಲು ಪ್ರವಾಸಿಗರಿಗೆ ಆನ್ಲೈನ್ ಬುಕಿಂಗ್ ವ್ಯವಸ್ಥೆ ಇದೆ. ಈ ಹಿಂದೆ ಜನವರಿಯಲ್ಲಿ ನಕಲಿ ವೆಬ್ ಸೈಟ್ ಮೂಲಕ ಇಲ್ಲಿಗೆ ಬುಕಿಂಗ್ ಮಾಡಿಕೊಂಡು ಪ್ರವಾಸಿಗರಿಗೆ ಸಾವಿರಾರು ರೂಪಾಯಿ ವಂಚನೆ ಮಾಡಲಾಗಿತ್ತು. ಪ್ರವಾಸಿಗರು ಬುಕಿಂಗ್ ಮಾಡಿದ ಹಿನ್ನೆಲೆಯಲ್ಲಿ ಆರಾಮವಾಗಿ ಸಫಾರಿ ಕೇಂದ್ರಕ್ಕೆ ಬಂದಾಗಲೇ ನಕಲಿ ಬುಕಿಂಗ್ ವಂಚನೆ ಬಯಲಾಗುತಿತ್ತು.
ಎಚ್ಚತ್ತ ಅರಣ್ಯ ಇಲಾಖೆ ಕೊಡಗು ಜಿಲ್ಲಾ ಪೋಲೀಸ್ ಅಧಿಕಾರಿಯವರಿಗೆ ಜನವರಿ ತಿಂಗಳಿನಲ್ಲೇ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಕೋರಿತ್ತು. ಆಗ ಸ್ಥಗಿತಗೊಂಡಿದ್ದ ನಕಲಿ ವೆಬ್ ಸೈಟ್ ಗಳು ಈಗ ಪುನಃ ಆಟ ಶುರುಮಾಡಿವೆ ಎಂದು ನಾಗರಹೊಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷ ಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ. ಬರೀ ನಾಗರಹೊಳೆ ಅಲ್ಲದೆ , ಬಂಡೀಪುರ , ವೈನಾಡು, ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ , ಕಾಜೀರಂಗ ಅಭಯಾರಣ್ಯ ಈ ರೀತಿ ದೇಶದ ಎಲ್ಲಾ ಅರಣ್ಯಗಳ ನಕಲಿ ವೆಬ್ ಸೈಟ್ ಮಾಡಿಕೊಂಡು ಪ್ರವಾಸಿಗರನ್ನು ವಂಚಿಸುವುದೇ ಅಲ್ಲದೆ ಅವರ ಪ್ರವಾಸ ಯೋಜನೆ, ಅಮೂಲ್ಯ ಸಮಯವನ್ನೂ ದುಷ್ಕರ್ಮಿಗಳು ಹಾಳು ಮಾಡುತಿದ್ದಾರೆ ಎಂದು ಹರ್ಷ ತಿಳಿಸಿದರು. ಈಗ ಅರಣ್ಯ ಇಲಾಖೆ ಪುನಃ ಪೋಲೀಸ್ ಇಲಾಖೆಗೆ ಪತ್ರ ಬರೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಚಿತ್ರ, ಆನೆ, ಹುಲಿ ಮತ್ತು ಇತರ ಪ್ರಾಣಿಗಳ ಚಿತ್ರ ಇರುವ ನಕಲಿ ವೆಬ್ಸೈಟ್ನಲ್ಲಿ ರಿಸರ್ವೇಶನ್ (ಕಾಯ್ದಿರಿಸುವಿಕೆ) ಮಾಡಿಕೊಳ್ಳಲಾಗುತ್ತಿತ್ತು. ರಿಸರವೇಷನ್ ಆಗಿರುವ ಕುರಿತು ಮೊಬೈಲ್ ಗೆ ಸಂದೇಶ ಬರುವಂತೆಯೂ ವಂಚಕರು ಮಾಡಿಕೊಂಡಿದ್ದಾರೆ. ನಾಗರಹೊಳೆಯ ಅಧಿಕೃತ ವೆಬ್ ಸೈಟ್ ನಾಗರಹೊಳೆ ಟೈಗರ್ ರಿಸರ್ವ್ ಮಾತ್ರ ಆಗಿದ್ದು ( https://www.nagaraholetigerreserve.com/) ಇತರ ಯಾವುದೇ ವೆಬ್ ಸೈಟ್ ಗಳಲ್ಲಿ ರಿಸರ್ವೇಷನ್ ಮಾಡಿಸದಂತೆ ಹರ್ಷ ಕುಮಾರ್ ಪ್ರವಾಸಿಗರಿಗೆ ಎಚ್ಚರಿಸಿದ್ದಾರೆ.
ನಕಲಿ ವೆಬ್ ಸೈಟ್ ನಲ್ಲಿ ನೀಡಿರುವ ಸಂಖ್ಯೆಗೆ ಕರೆ ಮಾಡಿದರೆ ಅಲ್ಲಿ ಬರೀ ಹಿಂದಿಯಲ್ಲಿ ಮಾತಾಡುತ್ತಿದ್ದಾರೆ. ಇದರಿಂದಲೇ ವಂಚಕರೆಂಬುದು ಸ್ಪಷ್ಟವಾಗುತಿದ್ದು ಅಧಿಕೃತ ವೆಬ್ ಸೈಟ್ ನಲ್ಲಿ ನೀಡಿರುವ ಮೊಬೈಲ್ ನಲ್ಲಿ ಕನ್ನಡದಲ್ಲಿ ಮಾತಾಡಿ ನಂತರ ಬುಕಿಂಗ್ ಖಚಿತಪಡಿಸಿಕೊಳ್ಳಿ ಎಂದು ಇಲಾಖೆ ಎಚ್ಚರಿಸಿದೆ.