ಸೋಮವಾರಪೇಟೆ, NEWS DESK ಸೆ.20: “ಸದಾ ಸಿದ್ಧರಾಗಿರಿ” ಎಂಬ ಧ್ಯೇಯದೊಂದಿಗೆ ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಹಾಗೂ ಇತರರಿಗೆ ಸಹಾಯ ಮಾಡುವ ಮನೋಭಾವವನ್ನು ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಕಮಿಷನರ್ ಜಿಮ್ಮಿ ಸಿಕ್ವೆರ ಕರೆ ನೀಡಿದರು.
ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ತಾಲೂಕು ಸ್ಕೌಟ್ ಮತ್ತು ಗೈಡ್ಸ್ ವಾರ್ಷಿಕ ಮಹಾಸಭೆ ಹಾಗೂ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಗೀತಾ ಗಾಯನ ಮತ್ತು ದೇಶಭಕ್ತಿ ಗೀತೆಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ಕೌಟ್ ಮತ್ತು ಗೈಡ್ಸ್ ಮೂಲಕ ಪ್ರಾಮಾಣಿಕತೆ, ಉತ್ತಮ ನಡವಳಿಕೆ, ಪ್ರಕೃತಿ ಪ್ರೀತಿ ಹಾಗೂ ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವ ಗುಣಗಳನ್ನು ಬೆಳೆಸಿಕೊಳ್ಳಬಹುದು. ಇದು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಜೀವನದ ಮೌಲ್ಯಗಳನ್ನು ಕಲಿಸುವ ವೇದಿಕೆಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಕೌಟ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಂ. ವಾಸಂತಿ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಗೀತಾ ಗಾಯನ ಹಾಗೂ ದೇಶಭಕ್ತಿ ಗೀತೆಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಾದಾಪುರ ಶಾಲೆ ಪ್ರಥಮ ಸ್ಥಾನ ಹಾಗೂ ಸೋಮವಾರಪೇಟೆ ಜಿ.ಎಂ.ಪಿ. ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸ್ಕೌಟ್ ಮತ್ತು ಗೈಡ್ಸ್ ಅಧ್ಯಕ್ಷ ಎಸ್.ಡಿ. ವಿಜೇತ್ ವಹಿಸಿದ್ದರು. ಉಪಾಧ್ಯಕ್ಷರಾದ ಶೀಲಾ ಡಿ. ಸೋಜ, ಜೆ.ಸಿ. ಶೇಖರ್, ಎ.ಪಿ. ವೀರರಾಜ್, ಶುಭ, ಚಂದ್ರಕಲಾ, ವಾಸಂತಿ ರವೀಂದ್ರ, ಗಿರೀಶ್ ಕಾಟ್‌ನಮನೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಜ್ಯೋತಿ ಅರುಣ್ ಕಾರ್ಯಕ್ರಮ ನಿರೂಪಿಸಿದರು.






