
ಮಡಿಕೇರಿ NEWS DESK ಸೆ.20 : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪಾಜೆ ಸ್ಥಳೀಯ ಸಂಸ್ಥೆಯ ವಾರ್ಷಿಕ ಸಭೆ ನಾಪೋಕ್ಲುವಿನ ಕೆ.ಪಿ.ಎಸ್. ಸಭಾಂಗಣದಲ್ಲಿ ನಡೆಯಿತು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯನ್ನು ಕೆ.ಪಿ.ಎಸ್. ಪ್ರೌಢಶಾಲೆಯ ಉಪಪ್ರಾಂಶುಪಾಲ ಶಿವಣ್ಣ ಅವರು ಹೂವಿನ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿ ಶುಭ ಹಾರೈಸಿದರು. ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತ ರಂಜಿತ್ ಕೆ.ಯು. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ಸಮವಸ್ತçದ ಮಹತ್ವ, ವಿದ್ಯಾರ್ಥಿಗಳು ಕಲಿಯುವ ಜೀವನ ಕೌಶಲ್ಯ, ಶಿಸ್ತು, ಮೌಲ್ಯಗಳು ಹಾಗೂ ಸಮಾಜ ಸೇವಾ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ವತಿಯಿಂದ ಮಕ್ಕಳ ಮೇಳ, ರಕ್ತದಾನ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಉತ್ತಮ ಸಂಸ್ಥೆ ಪ್ರಶಸ್ತಿಗೆ ಪಾತ್ರವಾಗಿರುವುದನ್ನು ತಿಳಿಸಿದರು. ಉಪಾಧ್ಯಕ್ಷ ಶ್ರೀಧರ್ ಎ.ಎಸ್. ಅವರು ಮಾತನಾಡಿ, ತರಬೇತಿ ಪಡೆದ ಎಲ್ಲಾ ಶಿಕ್ಷಕರು ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಅಗತ್ಯ ಮಾಹಿತಿಯನ್ನು ಪಡೆದುಕೊಂಡು ಶಾಲಾ ಮಕ್ಕಳ ಅಭಿವೃದ್ಧಿಗೆ ಸಹಕರಿಸಬೇಕು ಎಂದರು. ಈ ಸಾಲಿನಲ್ಲಿ ನಡೆಯಲಿರುವ ಮಕ್ಕಳ ಮೇಳಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಧನಂಜಯ ಎಂ. ಅವರು ಸರ್ವರನ್ನು ಸ್ವಾಗತಿಸಿ, ಸಂಸ್ಥೆಯು ನಡೆದು ಬಂದ ಹಾದಿ ಹಾಗೂ ಕೈಗೊಂಡ ವಿವಿಧ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಕಳೆದ ಸಾಲಿನಲ್ಲಿ ಗೀತ ಗಾಯನದಲ್ಲಿ ವಿಭಾಗ ಮಟ್ಟದಲ್ಲಿ ಸಂಸ್ಥೆ ಗುರುತಿಸಿಕೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಈ ವರ್ಷ ನಡೆಯಲಿರುವ ಮಕ್ಕಳ ಮೇಳದಲ್ಲಿ ಎಲ್ಲಾ ಶಾಲೆಗಳ ಮಕ್ಕಳು ಭಾಗವಹಿಸಿ, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಉಷಾರಾಣಿ ಕೆ.ಬಿ. ಅವರು ವಾರ್ಷಿಕ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಈ ಸಾಲಿನಲ್ಲಿ ಕೈಗೊಳ್ಳಲಿರುವ ವಿವಿಧ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿ, ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.









