ಮಡಿಕೇರಿ ಜೂ.21 NEWS DESK : ವಿರಾಜಪೇಟೆಯ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿ ಕೀಳು ಮಟ್ಟದ ರಾಜಕೀಯ ಪ್ರದರ್ಶಿಸಿರುವ ಬಿಜೆಪಿಯ ಹದ್ದು ಮೀರಿದ ವರ್ತನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎಸ್.ಟಾಟು ಮೊಣ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜಕೀಯ ಕ್ಷೇತ್ರಕ್ಕೆ ಕಳಂಕವಾಗಿರುವ ಮತ್ತು ಸ್ವಾರ್ಥ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ಬಿಜೆಪಿಗರ ನೀಚ ಮನೋಸ್ಥಿತಿಯನ್ನು ಕ್ಷಮಿಸಲು ಸಾಧ್ಯವಿಲ್ಲ. ಬಿಜೆಪಿಯ ಈ ವರ್ತನೆಯಿಂದ ಕೊಡಗು ಜಿಲ್ಲೆಯ ಘನತೆಗೆ ದಕ್ಕೆಯಾಗಿದೆ ಎಂದು ತಿಳಿಸಿದ್ದಾರೆ.
ವಿರಾಜಪೇಟೆ ಕ್ಷೇತ್ರದಲ್ಲಿ ಪೊನ್ನಣ್ಣ ಅವರ ಜನಪ್ರಿಯತೆ ಹೆಚ್ಚುತ್ತಿರುವುದು ಮತ್ತು ಸರಕಾರದ ಮಟ್ಟದಲ್ಲಿ ಪ್ರಭಾವಿಯಾಗಿರುವುದನ್ನು ಸಹಿಸದ ಬಿಜೆಪಿ ಮಂದಿ ಬೆಲೆ ಏರಿಕೆಯ ನೆಪ ಮಾಡಿಕೊಂಡು ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ವಿರಾಜಪೇಟೆ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಲ್ಲಿ ನಡೆಯದೆ ಇರುವ ಅಭಿವೃದ್ಧಿ ಕಾರ್ಯಗಳು ಪೊನ್ನಣ್ಣ ಅವರ ದಕ್ಷ ಆಡಳಿತದಿಂದ ಒಂದೇ ವರ್ಷದಲ್ಲಿ ಕಾರ್ಯಗತಗೊಂಡಿದೆ.
ರಾತ್ರಿ, ಹಗಲೆನ್ನದೆ ತಮ್ಮ ಕ್ಷೇತ್ರವ್ಯಾಪಿ ಸಂಚರಿಸುತ್ತಿರುವ ಪೊನ್ನಣ್ಣ ಅವರು ಪಕ್ಷಾತೀತ ಮತ್ತು ಜಾತ್ಯತೀತವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ವಿವಿಧ ಅಭಿವೃದ್ಧಿ ಕಾರ್ಯಗಳೊಂದಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದ್ದಾರೆ. ನೊಂದವರು ನೆರವು ಕೋರಿ ಬಂದಾಗ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆಯುತ್ತಿದ್ದಾರೆ. ದಿನದಿಂದ ದಿನಕ್ಕೆ ವಿರಾಜಪೇಟೆ ಕ್ಷೇತ್ರ ಮಾತ್ರವಲ್ಲದೆ ರಾಜ್ಯ ಮಟ್ಟದಲ್ಲೂ ಹೆಸರು ಮಾಡುತ್ತಿರುವ ಪೊನ್ನಣ್ಣ ಅವರ ಏಳಿಗೆಯನ್ನು ಸಹಿಸದ ಬಿಜೆಪಿ ಮಂದಿ ಹೇಡಿಗಳಂತೆ ವರ್ತಿಸಿ ಪ್ರತಿಕೃತಿ ದಹಿಸಿದ್ದಾರೆ ಎಂದು ಟಾಟೂ ಮೊಣ್ಣಪ್ಪ ಆರೋಪಿಸಿದ್ದಾರೆ.
ವಿರಾಜಪೇಟೆ ಕ್ಷೇತ್ರದ ಜನ ಪೊನ್ನಣ್ಣ ಅವರ ಅಭಿವೃದ್ಧಿ ಪರ ಚಿಂತನೆಗೆ ಮನಸೋತಿದ್ದಾರೆ. ಒಬ್ಬ ನಿಸ್ವಾರ್ಥಿ ಜನನಾಯಕನ ಪ್ರತಿಕೃತಿ ದಹಿಸುವುದು ಕೊಡಗಿನ ಸಂಸ್ಕೃತಿಯಲ್ಲ. ಬಿಜೆಪಿ ಮಂದಿಯ ಕೀಳು ಮಟ್ಟದ ಈ ವರ್ತನೆಯನ್ನು ಬಿಜೆಪಿ ಬೆಂಬಲಿಗರೇ ಖಂಡಿಸುತ್ತಿದ್ದಾರೆ. ಪ್ರತಿಭಟನೆಯ ಹೆಸರಿನಲ್ಲಿ ಅತಿರೇಕದ ವರ್ತನೆ ತೋರಿರುವ ಬಿಜೆಪಿಗೆ ಮುಂದಿನ ಚುನಾವಣೆಯಲ್ಲೂ ಜನ ತಕ್ಕ ಪಾಠ ಕಲಿಸಲಿದ್ದಾರೆ.
ಈ ರೀತಿಯ ಪ್ರತಿಭಟನೆಗಳ ಮೂಲಕ ಪೊನ್ನಣ್ಣ ಅವರ ಮನೋಸ್ಥೈರ್ಯ ಕುಗ್ಗಿಸಬಹುದೆನ್ನುವ ಭ್ರಮೆಯಲ್ಲಿರುವ ಬಿಜೆಪಿ ತಾನು ತೋಡಿದ ಖೆಡ್ಡಾಕ್ಕೆ ತಾನೇ ಬೀಳಲಿದೆ. ಬಿಜೆಪಿಯ ಕೀಳು ಮಟ್ಟದ ವರ್ತನೆಯಿಂದ ಪೊನ್ನಣ್ಣ ಪರ ಜನಬಲ ಮತ್ತಷ್ಟು ಹೆಚ್ಚಾಗಲಿದೆ. ಈಗಾಗಲೇ ಅವರ ಅಭಿಮಾನಿಗಳು ಹಾಗೂ ಕ್ಷೇತ್ರದ ಜನ ಯೋಗಕ್ಷೇಮ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ವತಿಯಿಂದಲೂ ಜೂ.24 ರಂದು ಎಲ್ಲಾ ವಲಯ ಘಟಕಗಳಿಂದ ಎ.ಎಸ್.ಪೊನ್ನಣ್ಣ ಅವರ ಹೆಸರಿನಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಹೆಚ್ಚಿನ ಆಯಸ್ಸು, ಆರೋಗ್ಯ ಮತ್ತು ಜನಸೇವೆ ಮಾಡುವ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುವಂತೆ ಪ್ರಾರ್ಥಿಸಲಾಗುವುದೆಂದು ಟಾಟೂ ಮೊಣ್ಣಪ್ಪ ತಿಳಿಸಿದ್ದಾರೆ.