ವಿರಾಜಪೇಟೆ ಜೂ.21 NEWS DESK : ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಯೋಗ ಸಹಕಾರಿಯಾಗಿದೆ ಎಂದು ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕರು ಮತ್ತು ಸೆಂಟ್ ಆನ್ಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಮದಲೈ ಮುತ್ತು ಅಭಿಪ್ರಾಯಪಟ್ಟರು.
ಕಾಲೇಜಿನಲ್ಲಿ ಎನ್.ಎಸ್.ಎಸ್, ದೈಹಿಕ ಶಿಕ್ಷಣ ವಿಭಾಗ, ರೆಡ್ ಕ್ರಾಸ್ ಘಟಕ ಮತ್ತು ಸೆಂಟ್ ಆನ್ಸ್ ಪಿಯು ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಯೋಗವು ವ್ಯಕ್ತಿಯ ಏಕಾಗ್ರತೆಗೆ ಅತೀ ಮುಖ್ಯವಾಗಿದ್ದು, ಸಕಲ ರೋಗಗಳ ನಿವಾರಣೆಗೂ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಯೋಗದ ಮಹತ್ವವನ್ನು ಸಮಾಜಕ್ಕೆ ಸಾರಿ ಪ್ರಚಾರ ಪಡಿಸುವ ಅಗತ್ಯವಿದೆ. ಯೋಗದಿಂದ ಮಾನಸಿಕ ಸ್ಥಿರತೆ ಮೂಡಲು ಸಾಧ್ಯ ಎಂದರು.
ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಇಂದು ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದು, ಯೋಗವು ಇಂದಿನ ಸನ್ನಿವೇಶದಲ್ಲಿ ಪ್ರಸ್ತುತವಾಗಿದೆ ಎಂದರು.
ವೇದಿಕೆಯಲ್ಲಿ ಕಾಲೇಜಿನ ಎನ್.ಎಸ್.ಎಸ್. ಘಟಕದ ಅಧಿಕಾರಿ ಬಿ.ಎನ್.ಶಾಂತಿಭೂಷಣ್, ಐಕ್ಯೂಎಸಿ ಸಂಚಾಲಕಿ ಹೇಮ, ದೈಹಿಕ ಶಿಕ್ಷಣ ನಿರ್ದೇಶಕ ಬಿ.ವಿ.ರಾಜ ರೈ, ರೆಡ್ ಕ್ರಾಸ್ ಅಧಿಕಾರಿ ವಿಲೀನ ಗೋನ್ಸಾಲ್ವೇಸ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು. ದೈಹಿಕ ಶಿಕ್ಷಕರಾದ ರಾಜ ರೈ ರವರು ಮತ್ತು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹೆಚ್. ಆರ್. ಅರ್ಜುನ್ ಯೋಗ ಕಾರ್ಯಕ್ರಮವನ್ನು ನಡೆಸಿ ಮತ್ತು ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.