ಮಡಿಕೇರಿ ಜೂ.21 NEWS DESK : ವಿರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಮಂದಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆಯ ಜನಪ್ರಿಯ ಶಾಸಕ ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿ ವಿಕೃತಿ ಮೆರೆದಿರುವುದು ಖಂಡನೀಯವೆಂದು ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವೈ.ರಾಜೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶುದ್ಧ ರಾಜಕಾರಣಕ್ಕೆ ಹೆಸರಾಗಿರುವ ಕೊಡಗಿನ ಘನತೆಗೆ ಬಿಜೆಪಿ ಚ್ಯುತಿ ತಂದಿದೆ. ಎ.ಎಸ್.ಪೊನ್ನಣ್ಣ ಅವರ ಜನಪ್ರಿಯತೆಯನ್ನು ಸಹಿಸದೆ ಈ ರೀತಿಯ ಕೀಳು ಮಟ್ಟದ ರಾಜಕೀಯ ಪ್ರದರ್ಶಿಸಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಪೊನ್ನಣ್ಣ ಅವರಿಗೆ ರಾಜ್ಯ ಮಟ್ಟದಲ್ಲಿ ಘನತೆ, ಗೌರವವಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ಜನಪ್ರಿಯತೆ ಇದೆ. ಇದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಮಂದಿ ವಿನಾಕಾರಣ ಪ್ರತಿಕೃತಿ ದಹಿಸಿ ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ 25 ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಅಧಿಕಾರವಿಲ್ಲದಿದ್ದರೂ ಕಾಂಗ್ರೆಸ್ ಮಂದಿ ಆಡಳಿತ ಪಕ್ಷದಲ್ಲಿರುವವರ ಪ್ರತಿಕೃತಿ ದಹಿಸಿ ಅಗೌರವ ತೋರುವ ರಾಜಕೀಯ ಪ್ರದರ್ಶಿಸಿಲ್ಲ. ಈಗ ಅಧಿಕಾರ ಕಳೆದುಕೊಂಡು ಹತಾಶೆಗೊಂಡಿರುವ ಬಿಜೆಪಿ ಪ್ರತಿಕೃತಿ ದಹಿಸಿ ಜನರ ಒಲವು ಗಳಿಸಬಹುದೆನ್ನುವ ಭ್ರಮೆಯಲ್ಲಿದೆ.
ಬಿಜೆಪಿಯ ಕೀಳು ಮಟ್ಟದ ರಾಜಕಾರಣದ ಬಗ್ಗೆ ಜನರಿಗೆ ಅರಿವಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದು ಸಾಬೀತಾಗಿದೆ. ಕ್ಷುಲ್ಲಕ ರಾಜಕಾರಣದ ಮೂಲಕ ಪೊನ್ನಣ್ಣ ಅವರನ್ನು ರಾಜಕೀಯವಾಗಿ ಕಟ್ಟಿ ಹಾಕಬಹುದೆಂದು ಬಿಜೆಪಿ ಹಗಲುಗನಸು ಕಾಣುತ್ತಿದೆ. ಶಾಸಕ ಪೊನ್ನಣ್ಣ ಅವರಿಗೆ ಅಪಾರ ಜನಬೆಂಬಲವಿದೆ ಎಂದು ತಿಳಿಸಿರುವ ರಾಜೇಶ್, ಬಿಜೆಪಿ ತಾನು ಮಾಡಿರುವ ತಪ್ಪಿಗೆ ಬಹಿರಂಗ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.