ಸೋಮವಾರಪೇಟೆ ಜೂ.21 NEWS DESK : ಕೊಡಗು ಜಿಲ್ಲಾ ಮತ್ತು ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಮಹಿಳಾ ಸಹಕಾರ ಸಮಾಜ, ಅಕ್ಕನ ಬಳಗದ ಆಶ್ರಯದಲ್ಲಿ ಕವಯಿತ್ರಿ ಜಲಜಾ ಶೇಖರ್ ಅವರ “ಪ್ರತೀಕ್ಷ” ಮತ್ತು “ವಿಲೋಕನ” ಕೃತಿಗಳ ಬಿಡುಗಡೆಗೊಂಡಿತು.
ಸೋಮವಾರಪೇಟೆಯ ಮಹಿಳಾ ಸಹಕಾರ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಲೋಕನ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, 22 ಲೇಖನಗಳನ್ನು ಹೊಂದಿರುವ ವಿಲೋಕನ ಕೃತಿ ಒಂದು ಸುಂದರವಾದ ಪುಸ್ತಕವಾಗಿದೆ. ಇದರಲ್ಲಿ ವಿವಿಧ ವಿಚಾರಗಳಿದ್ದು, ಸಂಗ್ರಹಕ್ಕೆ ಯೋಗ್ಯವಾಗಿದೆ. ಇಂದು ಪುಸ್ತಕ ಬರೆಯುವುದಕ್ಕೂ ಹೆಚ್ಚಿನ ಜವಾಬ್ದಾರಿ ಪುಸ್ತಕ ಬಿಡುಗಡೆ ಮತ್ತು ಅದರ ಮಾರುಕಟ್ಟೆ ವಿಸ್ತರಣೆಗೆ ಬೇಕಾಗಿದೆ. ಇದರೊಂದಿಗೆ ಹಣ ಕೊಟ್ಟು ಪುಸ್ತಕ ತೆಗೆದುಕೊಂಡು ಓದುವವರ ಸಂಖ್ಯೆಯೂ ಹೆಚ್ಚಬೇಕಿದೆ ಎಂದು ಹೇಳಿದರು.
ಪ್ರತೀಕ್ಷ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಪ್ರೊ.ಧರ್ಮಪ್ಪ, ಅಣ್ಣ ಬಸವಣ್ಣ ಮತ್ತು ಅಕ್ಕಮಹಾದೇವಿ ಮೇಲಿನ ಕವನಗಳು ಗಮನ ಸೆಳೆಯುತ್ತವೆ. ಕವಿಗಳು ಎಂದಿಗೂ ಕಲ್ಪನಾಲೋಕದಲ್ಲಿ ಇದ್ದು, ಅವರ ಯೋಚನಾಲಹರಿಯೇ ಪುಸ್ತಕದ ರೂಪ ಪಡೆಯುತ್ತವೆ. ಕವನ ಸಂಕಲನಗಳು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಸಾಹಿತ್ಯಾಸಕ್ತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದು ಆಶಾದಾಯಕ ಬೆಳವಣಿಗೆಯಾಗಿದೆ. ಇಂದು 60ಕ್ಕೂ ಹೆಚ್ಚಿನ ಸಾಹಿತಿಗಳು ಜಿಲ್ಲೆಯಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಅದರಲ್ಲೂ ಮಹಿಳೆಯರಲ್ಲಿ ಸಾಹಿತ್ಯಾಭಿರುಚಿ ಹಿಂದೆಂದಿಗಿಂತಲೂ ಹೆಚ್ಚಿದೆ. ಇದರಿಂದ ಸಾಹಿತ್ಯ ಕ್ಷೇತ್ರವೂ ಬೆಳವಣಿಗೆಯಾಗುತ್ತಿದೆ ಎಂದು ಹೇಳಿದರು.
ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್ ವಹಿಸಿದ್ದರು. ವೇದಿಕೆಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಡಿ.ವಿಜೇತ್, ಅಕ್ಕನ ಬಳಗದ ಅಧ್ಯಕ್ಷೆ ಚಂದ್ರಕಲಾ ಗಿರೀಶ್, ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಜೆ.ಸಿ.ಶೇಖರ್ ಮತ್ತು ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಶಿವಪ್ಪ ಇದ್ದರು.