ಮಡಿಕೇರಿ ಜು.2 NEWS DESK : ವೀರ ಯೋಧರ ತವರೂರಾದ ಕೊಡಗಿನಲ್ಲಿ ಹಾಕಿಯನ್ನು ಬೆಳೆಸುತ್ತಾ ಬಂದ ಯೋಧರು ಹಾಗೂ ಪ್ರತಿಭಾವಂತ ಹಾಕಿ ಆಟಗಾರರಲ್ಲಿ ಚೋಳಂಡ ಮುದ್ದಯ್ಯ(ಡಾಲು) ಕೂಡ ಒಬ್ಬರು.
ಚೋಳಂಡ ಅಚ್ಚಪ್ಪ ಹಾಗು ಬೆಳ್ಳಿಯವ್ವ( ಕಾವೇರಿ, ತಾಮನೆ ಐಚಂಡ) ದಂಪತಿಯರ ಪುತ್ರನಾಗಿ ಮುದ್ದಯ್ಯನವರು 9 ಮೇ 1947ರಂದು ಕಡಂಗ ಮುರೂರಿನಲ್ಲಿ ಜನಿಸಿದರು. ತಮ್ಮ ಶಿಕ್ಷಣವನ್ನು ಕಾಕೋಟುಪರಂಬು ಹಾಗೂ ವಿರಾಜಪೇಟೆಯಲ್ಲಿ ಮುಗಿಸಿದರು.
ಇ.ಒ.ಇ ಗೆ ಸೇರ್ಪಡೆ ::
1969ರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮೆಕಾನಿಕಲ್ ಇಂಜಿನಿಯರ್ಸ್(ಇ.ಒ.ಇ) ಗೆ ಸೇರ್ಪಡೆಗೊಂಡು 1988 ರಲ್ಲಿ ಅದರಿಂದ ನಿವೃತ್ತಿ ಪಡೆದರು. ಸರ್ವಿಸಸ್ ತಂಡಕ್ಕೆ 1981-84 ವರೆಗೆ 4 ವರ್ಷಗಳ ಕಾಲ ಅತ್ಯುತ್ತಮ ಫುಲ್ ಬ್ಯಾಕ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಪಶ್ಚಿಮ ಕಮಾಂಡ್ ::
ಇ.ಒ.ಇ ಗೆ ಆಡುವಾಗ ಇವರ ಅದ್ಭುತ ಆಟ ಹಾಗು ಚುರುಕುತನದಿಂದ ಪಶ್ಚಿಮ ಕಮಾಂಡ್ ಗೆ 5 ಬಾರಿ ಆಯ್ಕೆಯಾದರು.
1982 ಮೀರತ್ ನ್ಯಾಷನಲ್ಸ್ ::
ಮೀರತ್ ನಲ್ಲಿ ನಡೆದ 52ನೇ ರಂಗಸ್ವಾಮಿ ಕಪ್ ನ್ಯಾಷನಲ್ಸ್ ನಲ್ಲಿ ಮುದ್ದಯ್ಯ ಹಾಗೂ ಮನೋಹರ್ ಟೋಪ್ನೋ ಜೋಡಿ ಬಹಳಷ್ಟು ಒಳ್ಳೆಯ ಹಾಕಿ ಆಟವನ್ನು ಆಡಿದರು. ಈ ಪಂದ್ಯಾವಳಿಯನ್ನು ವೀಕ್ಷಿಸುತ್ತಿದ್ದ ಭಾರತದ ಹೆಸರಾಂತ ಹಾಕಿ ತರಬೇತಿದಾರ ಬಾಲ ಕಿಶನ್ ಸಿಂಗ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಅಲ್ಲದೆ ಈ ಜೋಡಿ ಗಡಿಯಾರದ ಮುಳ್ಳುಗಳಿದ್ದಂತೆ ಮೈದಾನದ ಪ್ರತಿ ಮೂಲೆಗೂ ತಲುಪುವಂತಹ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಂದಿನ ಉತ್ತರ ಪ್ರದೇಶದ ಹೆಸರಾಂತ “ಆಜ್ ತಕ್” ದಿನ ಪತ್ರಿಕೆಯ ಸಂದರ್ಶನದಲ್ಲಿ ನುಡಿದರು.
ಮನೋಹರ್ ಟೋಪ್ನೋ ಬ್ಲಾಕ್ ಪರ್ಲ್ ::
ಇವರ ಜೊತೆ ಆಡುತ್ತಿದ್ದ ಒಲಂಪಿಯನ್ ಮನೋಹರ್ ಟೋಪ್ನೋ ಹಾಕಿಯ ಬ್ಲಾಕ್ ಪರ್ಲ್ (ಕಪ್ಪು ಮುತ್ತು) ಎಂದೇ ಹೆಸರು ಮಾಡಿದ್ದರು. ಇವರ ಬಣ್ಣ ಹಾಗೂ ಆಟಕ್ಕೆ ವಿಶ್ವ ಹಾಕಿ ಇವರಿಗೆ ಕೊಟ್ಟ ಮನ್ನಣೆ.
ಮನೋಹರ್ ಟೋಪ್ನೋ ಅವರ ಅನಿಸಿಕೆ ::
ಮುದ್ದಯ್ಯನ ಜೊತೆ ಆಡಲು ನನಗೆ ಬಹಳ ಇಷ್ಟ, ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ನನ್ನನ್ನು ಮುನ್ನುಗ್ಗಲು ಬಿಟ್ಟು ಹಿಂಬದಿಯಲ್ಲಿ ರಕ್ಷಾಗೋಡೆಯಂತೆ ನಿಲ್ಲುತ್ತಿದ್ದ ಆಟಗಾರ ಎಂದು ಬಣ್ಣಿಸಿದರು. ಲೆಫ್ಟ್ ಬ್ಯಾಕ್ ಆಗಿದ್ದ ಮುದ್ದಯ್ಯನವರು ಬಂದ ಚೆಂಡನ್ನೆಲ್ಲ ರೈಟ್ ಇನ್ ಗೆ ಕೊಟ್ಟು ಆಡಿಸುತ್ತಿದ್ದರು. ಭಾರತದ ಆಯ್ಕೆ ಶಿಬಿರಕ್ಕೆ ಇವರು ಬರಬಹುದು ಎಂದು ನಾನು ನಂಬಿದ್ದೆ, ಆದರೆ ಕೊನೆ ಕ್ಷಣದಲ್ಲಿ ಅವರನ್ನು ಕೈ ನೀಡಲಾಯಿತು. ಇದಕ್ಕೆ ಉತ್ತರ ಸಿಗಲೇ ಇಲ್ಲ.
ಅದ್ಭುತ ಮೈಕಟ್ಟು ::
ಮುದ್ದಯ್ಯನವರ ಮೈಕಟ್ಟು ಹಾಕಿಗೆ ಹೇಳಿ ಮಾಡಿಸಿದಂತಿತ್ತು, ಒಳ್ಳೆಯ ಎತ್ತರ, ಚಂಡಿನ ಮೇಲಿದ್ದ ಹಿಡಿತ, ಬಲಿಷ್ಠ ಏಟುಗಳು, ಅಲ್ಲದೆ ಪೆನಾಲ್ಟಿ ಕಾರ್ನರ್ ನಲ್ಲಿ ಗೋಲ್ ಲೈನ್ ನ ಮೇಲೆ ನಿಂತು ಅದೆಷ್ಟೋ ಗೋಲುಗಳನ್ನು ಬಚಾವ್ ಮಾಡಿದ ಕೀರ್ತಿ ಇವರದು. ಆಡುವಾಗ ಅಬ್ಡೊಮನ್ ಗಾರ್ಡ್(Abdomen guard) ಹಾಕಿಕೊಂಡು ಭಯವಿಲ್ಲದೆ ಆಡುತ್ತಿದ್ದರು. ಇಂತಹ ಕಲೆ ಇದ್ದ ಅಪರೂಪದ ಆಟಗಾರ ಚೋಳಂಡ ಮುದ್ದಯ್ಯ(ಡಾಲು).
ಇ.ಒ.ಇ ಯಲ್ಲಿ ಕೊಡಗಿನವರ ಪ್ರಾಬಲ್ಯತೆ ::
ಇ.ಒ.ಇ ಜಲಂಧರ್ ನಲ್ಲಿ ಒಳ್ಳೆಯ ಹಾಕಿ ಆಟ ಆಡಿದ ಆಟಗಾರ ಬಲ್ಲಚಂಡ ಪೂಕುಞ್ಞಿ. ನಂತರ ಬಂದ ಕೊಡಗಿನ ಹಾಕಿಯ ಕಣ್ಮಣಿಗಳಾದ ಅಂತರಾಷ್ಟ್ರೀಯ ಆಟಗಾರ ಕೊಡಂದೇರ ಕುಶ, ಐತಿಚಂಡ ನಂಜಪ್ಪ, ಚೋಳಂಡ ಮುದ್ದಯ್ಯ, ಪುಗ್ಗೇರ ತಿಮ್ಮಯ್ಯ ಹಾಗು ನೆಲ್ಲಮಕ್ಕಡ ಕಾರ್ಯಪ್ಪ ಇವರುಗಳು ಬಹಳಷ್ಟು ಹೆಸರು ಮಾಡಿದರು.
ಇದಲ್ಲದೆ ಬಾಂಬೆ ಗೋಲ್ಡ್ ಕಪ್, ಬಾಂಬೆಯಲ್ಲಿ ನಡೆದ ಆಗಾಖಾನ್ ಕಪ್, ದೆಹಲಿಯ ಜವಾಹರಲಾಲ್ ಗೋಲ್ಡ್ ಕಪ್, ಕಲ್ಕತ್ತಾದ ಬೇಟನ್ ಕಪ್, ಭೂಪಾಲ್ ನಲ್ಲಿ ನಡೆದ ಅಬ್ದುಲ್ಲಾ ಗೋಲ್ಡ್ ಕಪ್, ಬೆಂಗಳೂರಿನಲ್ಲಿ ನಡೆದ ಕ್ಲಾರ್ಕ್ ಟ್ರೋಫಿ, ಮಡಿಕೇರಿಯಲ್ಲಿ ನಡೆದ ಜನರಲ್ ಕಾರ್ಯಪ್ಪ ಹಾಕಿ ಪಂದ್ಯಾವಳಿ ಹೀಗೆ ಭಾರತದಾದ್ಯಂತ ಇನ್ನು ಹಲವಾರು ಹಾಕಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಆಡಿ ಗೆದ್ದು ಬೀಗಿದರು.
ಮುದ್ದಯ್ಯನವರ ಅನಿಸಿಕೆ ::
ಈಗಿನ ಯುವಕರ ಬಗ್ಗೆ ಬಹಳಷ್ಟು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ, ಕೊಡಗಿನ ಆಟಗಾರರಿಗೆ ಶಿಸ್ತು ಬಹಳ ಮುಖ್ಯ ಹಾಗು ಪಂದ್ಯಾವಳಿಗಳಲ್ಲಿ ಮಧ್ಯಪಾನ ನಿಷೇಧಿಸಬೇಕು, ಇವೆರಡನ್ನು ನಿಯಂತ್ರಿಸಿದರೆ ಕೊಡಗಿನ ಯುವಕರಿಗಿರುವ ಬೇಡಿಕೆ ಇನ್ನೂ ಹೆಚ್ಚುತ್ತದೆ ಎಂದು ನುಡಿಯುತ್ತಾ ಭಾವುಕರಾದರು.
ಇವರ ಹೆಂಡತಿ ತಾರಾ (ತಾಮನೆ ಬಿದ್ದಂಡ) ಚೇರಂಬಾಣೆ ಜೂನಿಯರ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು, ಈಗ ನಿವೃತ್ತಿ ಪಡೆದಿದ್ದಾರೆ. ಇವರ ಮಕ್ಕಳಾದ ಸ್ಮರಣ್ ತಮ್ಮಯ್ಯ ಹಾಗೂ ಸ್ಮೃತಿ ಇವರೊಂದಿಗೆ ಪ್ರಸ್ತುತ ಮಡಿಕೇರಿಯಲ್ಲಿ ನೆಲೆಸಿದ್ದಾರೆ.
ಸ್ನೇಹಿತರ ಅನಿಸಿಕೆ ::
ಇವರ ನೆಚ್ಚಿನ ಸ್ನೇಹಿತರು ಇವರ ಜೊತೆ ಹಾಕಿ ಆಡಿದ ನಂಜಪ್ಪ ಹಾಗೂ ಕುಶ ಅವರ ಮಾತುಗಳು ಮುದ್ದಯ್ಯನವರ ಪರವಾಗಿ ಇದ್ದವು. ಇವರು ಇಷ್ಟೊಂದು ಸರಳ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದರೂ, ಇದುವರೆಗೂ ಯಾವುದೇ ಪಂದ್ಯಾವಳಿಗಳಲ್ಲೂ ಹಾಗು ಸಮಾರಂಭಗಳಲ್ಲೂ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಯಾವುದೇ ಪ್ರಚಾರ ಬೇಕೆಂದು ಬಯಸಲಿಲ್ಲ. ಆದರೆ ಅವರ ಸ್ನೇಹಿತರು ಎಲ್ಲೇ ಕಂಡರು ಕೈ ಹಿಡಿದು ಅವರ ಜೊತೆ ಒಂದೆರಡು ನಿಮಿಷ ಮಾತನಾಡಿದಾಗ, ಇವರ ಮಾತಿನಲ್ಲಿರುವ ಸೌಜನ್ಯತೆ ನಮ್ಮನ್ನೇ ಬೆರಗುಗೊಳಿಸುತ್ತದೆ. ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಇಂತಹ ತೆರೆಯ ಮರೆಯ ಪ್ರತಿಭೆಗಳು ಕೊಡಗಿನಲ್ಲಿ ಬೆರಳೆಣಿಕೆಯಷ್ಟು ಬಾಕಿ ಇದ್ದು ಅವರನ್ನೆಲ್ಲ ಓದುಗರಿಗೆ ಪರಿಚಯಿಸಬೇಕೆಂಬ ಗುರಿ ನನ್ನದು. ಅವರನೆಲ್ಲ ಪರಿಚಯಿಸಿದ ನಂತರ ನನ್ನ ಲೇಖನ ಮುಕ್ತಾಯಗೊಳ್ಳುತ್ತದೆ. ಇಂದು ಇವರನ್ನು ಈ ಲೇಖನದ ಮೂಲಕ ಪರಿಚಯಿಸಿದ್ದು ನನಗೆ ತೃಪ್ತಿ ತಂದಿದೆ. ಮುದ್ದಯ್ಯ ಅವರಿಗೆ ಶುಭವಾಗಲಿ.
ಕ್ರೀಡಾ ವಿಶ್ಲೇಷಣೆ : ಚೆಪ್ಪುಡೀರ ಕಾರ್ಯಪ್ಪ