ಮಡಿಕೇರಿ NEWS DESK ಸೆ.22 : ಕುಶಾಲನಗರ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಕಾನೂನಿನ ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರರನ್ನು ನಿಂಧಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ನಡೆಯನ್ನು ತೀವ್ರವಾಗಿ ಖಂಡಿಸುವುದಾಗಿ ಜಿಲ್ಲಾ ಕಾಂಗ್ರೆಸ್‌ನ ಐಎನ್‌ಟಿಯುಸಿ ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಡಿ.ಅಣ್ಣಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರ ಪುರಸಭೆಗೆ ನಾಮನಿರ್ದೇಶಿತಗೊಂಡಿರುವ ಇಬ್ಬರು ಸದಸ್ಯರುಗಳಿಗೆ ನಿಯಮಾನುಸಾರ ಮತ ಚಲಾಯಿಸುವ ಹಕ್ಕು ಇದೆ. ಈ ವಿಚಾರದಲ್ಲಿ ಕಾನೂನಿನ ಆದೇಶದಂತೆ ತಹಶೀಲ್ದಾರ್ ನಡೆದುಕೊಂಡಿದ್ದಾರೆ. ಆದರೆ ಕಾನೂನಿನ ಬಗ್ಗೆ ಅರಿವಿಲ್ಲದ ಬಿಜೆಪಿ ಮಂದಿ ಪ್ರತಿಭಟನೆ ನಡೆಸಿ ಗೊಂದಲ ಸೃಷ್ಟಿಸಿದ್ದಾರೆ. ಸ್ಥಳಕ್ಕೆ ಬಂದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಮ್ಮ ಸ್ಥಾನದ ಘನತೆಯನ್ನು ಮರೆತು ತಹಶೀಲ್ದಾರರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿದರು. ವಿರೋಧ ಪಕ್ಷದ ನಾಯಕರು ಸರ್ಕಾರಿ ಅಧಿಕಾರಿಗಳೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುವುದನ್ನು ಮೊದಲು ಅರಿತುಕೊಳ್ಳಲಿ. ನಾಮನಿರ್ದೇಶಿತ ಸದಸ್ಯರಿಗೆ ಇರುವ ಮತದಾನದ ಹಕ್ಕಿನ ಕುರಿತು ಜಾರಿಯಲ್ಲಿರುವ ಆದೇಶವನ್ನು ಅಧ್ಯಯನ ಮಾಡಲಿ ಎಂದು ಒತ್ತಾಯಿಸಿದರು. ಕೊಡಗು ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಬಿಜೆಪಿ ಮಂದಿ ಪ್ರತಿ ಹಂತದಲ್ಲೂ ಗೊಂದಲ ಸೃಷ್ಟಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ 350 ಕೋಟಿ ರೂ.ಗಳಿಗಿಂತಲೂ ಅಧಿಕ ಅನುದಾನ ಬಂದಿದೆ. ಇನ್ನು ಮುಂದೆಯೂ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ಇದನ್ನು ಸಹಿಸಿದ ಬಿಜೆಪಿ ಪ್ರಮುಖರು ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ ಎಂದು ಅಣ್ಣಯ್ಯ ಆರೋಪಿಸಿದರು. ಈಗಾಗಲೇ ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲು ನೀಡುವ ಮೂಲಕ ಜನ ತಕ್ಕ ಪಾಠ ಕಲಿಸಿದ್ದಾರೆ. ಆದರೂ ಎಚ್ಚೆತ್ತುಕೊಳ್ಳದ ಬಿಜೆಪಿ ಮಂದಿ ನಿಯಮಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಐಎನ್‌ಟಿಯುಸಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಮಿನಾಜ್ ಪ್ರವೀಣ್, ಕಾಂಗ್ರೆಸ್ ಪ್ರಮುಖರಾದ ಮಲ್ಲೇಶ್, ಕೆ.ಕೆ.ಸೋಮಣ್ಣ ಹಾಗೂ ಕೆ.ಪಿ.ಸೋಮಣ್ಣ ಉಪಸ್ಥಿತರಿದ್ದರು.