
ಮಡಿಕೇರಿ NEWS DESK ಸೆ.22 : ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ನಗರ ಸಂಚಾರ ಮಾಡಿದರು. ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಅವರು ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾರ್ಯವನ್ನು ದಸರಾ ಹಬ್ಬದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಇಂದಿರಾನಗರ ರಸ್ತೆ, ಶ್ರೀಕೋದಂಡರಾಮ ದೇವಾಲಯ ಬಳಿಯ ರಸ್ತೆ, ಭಗವತಿ ನಗರದ ಬಳಿಯ ಅಬ್ಬಿಫಾಲ್ಸ್ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳ ರಸ್ತೆ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು. ಗೌಳಿಬೀದಿ ಸೇರಿದಂತೆ ವಿವಿಧೆಡೆ ಅಪೂರ್ಣಗೊಂಡಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಪರಿಶೀಲಿಸಿದ ಅವರು ಗುತ್ತಿಗೆದಾರರೊಂದಿಗೆ ಚರ್ಚಿಸಿದರು. ದಸರಾ ಹಬ್ಬ ಸಮೀಪಿಸುತ್ತಿದೆ, ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬವಾಗಬಾರದು. ಗುಣಮಟ್ಟದೊಂದಿಗೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಹಬ್ಬದ ಸಂದರ್ಭ ನಗರದ ರಸ್ತೆಗಳು ಉತ್ತಮ ಸ್ಥಿತಿಯಲ್ಲಿರಬೇಕು, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಡಾ.ಮಂತರ್ ಗೌಡ ತಿಳಿಸಿದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ.ರಾಜೇಶ್, ಸದಸ್ಯರುಗಳಾದ ಆರ್.ಪಿ.ಚಂದ್ರಶೇಖರ್, ಮಿನಾಜ್ ಪ್ರವೀಣ್, ನಗರಸಭೆಯ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ, ಮಾಜಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯರುಗಳು, ಪೌರಾಯುಕ್ತ ಹೆಚ್.ಆರ್.ರಮೇಶ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ ಮತ್ತಿತರ ಪ್ರಮುಖರು ನಗರ ಸಂಚಾರದ ಸಂದರ್ಭ ಹಾಜರಿದ್ದರು.








