ಮಡಿಕೇರಿ ಸೆ.21 NEWS DESK : ವಚನ ಸಾಹಿತ್ಯವೂ ಸದಾಚಾರ ಹಾಗೂ ಸದ್ವಿಚಾರಗಳ ಮೂಲಕ ಮನುಷ್ಯ ತನ್ನ ಅಮೂಲ್ಯ ಜೀವನವನ್ನು ಕಟ್ಟಿಕೊಳ್ಳಲು ಪ್ರೇರೇಪಿಸುವ ಸಂಜೀವಿನಿ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ.ಅನಂತಶಯನ ಹೇಳಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮಡಿಕೇರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಮಡಿಕೇರಿಯ ಶರಣ ಮುರುಗೇಶ್ ಅವರು ಸ್ಥಾಪಿಸಿರುವ ಲಿಂ.ಹೆಚ್.ಬಿ.ಶೀಲವಂತ ಹಾಗೂ ಸಿದ್ದಲಿಂಗಪ್ರಸಾದ್ ದತ್ತಿ ಶರಣ ಸಂಸ್ಕೃತಿ ಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ಪ್ರತಿಪಾದಿಸುವ ಸರ್ವಸ ಮಾನತೆಯ ಮತ್ತು ಮಾನವ ಸಮಾಜದ ಸರ್ವಾಂಗೀಣ ಪ್ರಗತಿಯ ಪರಿಕಲ್ಪನೆಗಳು ಜಗತ್ತಿನ ಇಡೀ ಮನುಕುಲಕ್ಕೆ ಮಾರ್ಗದರ್ಶಿಯಾಗಿವೆ. ಹನ್ನೆರಡನೇ ಶತಮಾನದಲ್ಲಿ ತಾಂಡವಿಸಿದ್ದ ಮೂಢನಂಬಿಕೆ, ಅಂಧಶ್ರದ್ಧೆ ಹಾಗೂ ಮೂಲಭೂತವಾದಗಳನ್ನು ಪ್ರಶ್ನಿಸಿ ಪ್ರಗತಿಪರ ಚಿಂತನೆಗಳನ್ನು ಮೊಳಗಿಸಿದ ಕೀರ್ತಿ ವಚನಕಾರರದ್ದು ಎಂದು ಬಣ್ಣಿಸಿದ ಅನಂತಶಯನ, ಬಸವಣ್ಣ ಅವರು ನಾಡಿಗೆ ನೀಡಿರುವ ಸಪ್ತಸೂತ್ರಗಳ ವಚನ ಕಲಬೇಡ, ಕೊಲಬೇಡ, ಹುಸಿಯನುಡಿಲು ಬೇಡ ಎಂಬ ವಚನವನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎಂದು ಅನಂತಶಯನ ಆಶಿಸಿದರು.
” ಶರಣ ಸಂಸ್ಕ್ರತಿ ಪ್ರಸಾರ ” ದತ್ತಿ ಉಪನ್ಯಾಸ ನೀಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್, ಕನ್ನಡ ಸಾಹಿತ್ಯಕ್ಕೆ ವಿಶ್ವಮನ್ನಣೆ ತಂದು ಕೊಟ್ಟ ವಚನ ಸಾಹಿತ್ಯ ಈ ನಾಡಿನ ಎಲ್ಲಾ ಸಾಹಿತ್ಯ ಪ್ರಾಕಾರಗಳ ತಾಯಿ ಬೇರು. ಧರ್ಮ, ಗುಡಿ – ಗುಂಡಾರ, ದೇವಾಲಯಗಳನ್ನು ಕೆಡವಿ ಶರೀರವನ್ನೇ ದೇವಾಲಯವಾಗಿಸಿ, ಆತ್ಮಜ್ಞಾನವನ್ನೇ ದೇವರನ್ನಾಗಿಸಿ ತು. ಅರಿವನ್ನು ಗುರುವಾಗಿಸಿದ ವಚನ ಸಾಹಿತ್ಯ ಆಚಾರವನ್ನೇ ಪಥವಾಗಿಸಿತು. ದೇವರ ಹೆಸರಿನಲ್ಲಿ ಸಾಮಾನ್ಯ ಜನರನ್ನು ಸುಲಿಗೆ ಮಾಡಿ, ಶೋಷಣೆ ಮಾಡುತ್ತಿದ್ದ ಪೂಜಾರಿಗಳ ಬಣ್ಣ ಬಯಲು ಮಾಡಿದ ವಚನಕಾರರು, ಧರ್ಮದ ಆಚರಣೆಗಳಿಗೆ ದಲ್ಲಾಳಿಗಳ ಅಗತ್ಯವಿಲ್ಲವೆಂದು ಸಾರಿದ ಬಗೆಯನ್ನು ವಚನಗಳ ಮೂಲಕ ಮುನೀರ್ ಅಹಮದ್ ವಿಶ್ಲೇಷಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪಿ.ಪಿ.ಕವಿತಾ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ವಚನ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಸಾಮಾಜಿಕ ಹಾಗೂ ಧಾರ್ಮಿಕ ವಿಚಾರಗಳನ್ನು ಅರಿಯಲು ಅನುವಾಗುತ್ತದೆ. ಸಮಾಜದಲ್ಲಿ ಇಂದು ತಾಂಡವವಾಡುತ್ತಿರುವ ಎಲ್ಲಾ ಸಂಕೋಲೆಗಳಿಗೆ ವಚನಗಳ ಅರಿವು ಹಾಗೂ ಆಚರಣೆ ದಿವ್ಯ ಔಷಧಿ ಎಂದರು. ಮಡಿಕೇರಿ ಸರ್ವೋದಯ ಸಮಿತಿ ಅಧ್ಯಕ್ಷ ಅಂಬೇಕಲ್ ಕುಶಾಲಪ್ಪ, ಜಾನಪದ ಪರಿಷತ್ತಿನ ಕೋಷಾಧಿಕಾರಿ ಸಂಪತ್ ಕುಮಾರ್, ಕೊಡಗು ಗೌಡ ವಿದ್ಯಾಸಂಸ್ಥೆಯ ಅಧ್ಯಕ್ಷ ಅಂಬೇಕಲ್ ನವೀನ್, ಶರಣ ಸಾಹಿತ್ಯ ದತ್ತಿ ದಾನಿ ಕೂರ್ಗ್ ಆಪ್ಡಿಕಲ್ಸ್ ಮಾಲೀಕ ಮುರುಗೇಶ್ ಹಾಗೂ ಕಮಲಾ ಮುರುಗೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ವಸತಿ ನಿಲಯದ ಮೇಲ್ವಿಚಾರಕಿ ಕರುಣಾಕ್ಷಿ ಇದ್ದರು. ನೇತ್ರ ತಜ್ಞೆ ವಿಜಯಲಕ್ಷ್ಮಿ ಹಾಗೂ ಕಮಲಾ ಮುರುಗೇಶ್ ವಚನಗಳನ್ನು ವಾಚಿಸಿದರು. ವಿದ್ಯಾರ್ಥಿನಿ ಪ್ರನುತಾ ಸ್ವಾಗತಿಸಿ, ಸಿಂಚನ ವಂದಿಸಿದರು.