ಸುಂಟಿಕೊಪ್ಪ, ಜು.3 NEWS DESK : ಮದ್ಯವರ್ಜನದ ಕುರಿತು ರಾಜ್ಯದ 17,548 ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮವನ್ನು ನಡೆಸಿ 20 ಮಿಕ್ಕಿ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ಪಿ.ಪಿ.ನಂದಕುಮಾರ್ ಹೇಳಿದರು.
ಮಡಿಕೇರಿ ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ತಂಗಡಿಯ ಅಖಿಲ ಕರ್ನಾಟಕಬಜನಜಾಗೃತಿ ವೇದಿಕೆ, ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ, ಮಡಿಕೇರಿ ತಾಲ್ಲೂಕು ಪ್ರಗತಿಬಂದು ಸ್ವಸಹಾಯ ಸಂಘಗಳ ಒಕ್ಕೂಟ, ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜು ಅವರ ಸಂಯುಕ್ತಾಶ್ರಯದಲ್ಲಿ ಸ್ವಸ್ಥ್ಯ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ‘ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ’ ದಲ್ಲಿ ಅವರು ಮಾತನಾಡಿದರು.
ಇದುವರೆಗೆ 1805 ಮದ್ಯವರ್ಜನ ಶಿಬಿರಗಳನ್ನು ನಡೆಸಿ 1 ಲಕ್ಷದ 46 ಸಾವಿರ ಮದ್ಯವ್ಯಸನಿಗಳನ್ನು ವ್ಯಸನಮುಕ್ತಗೊಳಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕಳೆದ ಸಂಶೋಧನೆಯ ಪ್ರಕಾರ ನಮ್ಮ ದೇಶದಲ್ಲಿ ಒಂದು ವರ್ಷಕ್ಕೆ 5 ಲಕ್ಷ ಜನರು ಮದ್ಯಪಾನದಿಂದ ಮರಣ ಹೊಂದಿದರೆ, 14.5 ಲಕ್ಷ ಜನರು ಮಾದಕ ದ್ರವ್ಯ, ಮಾದಕ ವ್ಯಸನ ಅಥವಾ ಇನ್ನಿತರ ಚಟಗಳಿಂದ ಬಲಿಯಾಗುತ್ತಿರುವುದು ಶೋಚನೀಯವಾಗಿದೆ. ಹದಿಹರೆಯದ ಈ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಅನಾವಶ್ಯಕವಾಗಿ ಮನಸ್ಸಿಗೆ ಒತ್ತಡ ತಂದುಕೊಳ್ಳುವುದರಿಂದ ಮತ್ತು ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಗಿ ಅಮಲು ಪದಾರ್ಥ ಹಾಗೂ ಇನ್ನಿತರ ವ್ಯಸನಗಳಿಗೆ ಬಲಿಯಾಗುತ್ತಿರುವುದು ದುರಂತವೇ ಸರಿ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾಜದಲ್ಲಿ ವ್ಯಸನಕ್ಕೆ ಒಳಗಾದವರು ಅಪಘಾತ, ಆತ್ಮಹತ್ಯೆ ಮತ್ತು ಅಕಾಲಿಕ ಮರಣ ಇವುಗಳಿಗೆ ತುತ್ತಾಗುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆ ಮತ್ತು ಸಾಮಾಜಿಕ ಜಾಲತಾಣದಿಂದಲೂ ವಿದ್ಯಾರ್ಥಿಗಳ ಮನೋಸ್ಥಿತಿ ಹಾಳಾಗುತ್ತದೆ. ವಿದ್ಯಾರ್ಥಿಗಳು ಇದರ ಬಗ್ಗೆಯೂ ಗಮನ ಹರಿಸಬೇಕು ಎಂದು ನಂದಕುಮಾರ್ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ವಯೋಜನೆಯ ಯೋಜನಾಧಿಕಾರಿ ಪುರುಷೋತ್ತಮ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಸಿ.ಜಿ.ಮಂದಪ್ಪ ಅವರು, ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳ ಮನಸ್ಸು ತುಂಬಾ ಚಂಚಲ. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಸ್ವ ನಿಗ್ರಹದೊಂದಿಗೆ ಹತೋಟಿಗೆ ತಂದುಕೊಳ್ಳುವುದು ಅನಿವಾರ್ಯತೆ ಇದೆ. ವಿದ್ಯಾರ್ಥಿಗಳೇ ಉತ್ತಮ ಸಮಾಜದ ಆಸ್ತಿ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಟಿ.ಎಂ.ಅಯ್ಯಪ್ಪ ನೆರವೇರಿಸಿದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ರೀಟಾ, ಒಕ್ಕೂಟದ ಅಧ್ಯಕ್ಷೆ ಪುಷ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಿಕೇರಿ ವಲಯದ ಮೇಲ್ವಿಚಾರಕಿಬ ವಿನೋದ ಸೇರಿದಂತೆ ಇತರರು ಹಾಜರಿದ್ದರು.










