ಮಡಿಕೇರಿ ಜು.8 NEWS DESK : ಮಡಿಕೇರಿ ನಗರ ವ್ಯಾಪ್ತಿಯ ದುಸ್ಥಿತಿಯಲ್ಲಿರುವ ಬಸ್ ತಂಗುದಾಣಗಳನ್ನು ಆಧುನೀಕರಣಗೊಳಿಸಲು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ನಗರಸಭೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಜನರಲ್ ತಿಮ್ಮಯ್ಯ ವೃತ್ತ, ಜಿಲ್ಲಾ ಆಸ್ಪತ್ರೆ, ಚೈನ್ ಗೇಟ್, ಮೂರ್ನಾಡು ರಸ್ತೆ, ಮಂಗಳೂರು ರಸ್ತೆಯ ಬಸ್ ತಂಗುದಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು ತ್ವರಿತಗತಿಯಲ್ಲಿ ಹೈ ಟೆಕ್ ತಂಗುದಾಣಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚೈನ್ ಗೇಟ್ ಬಳಿ ಇದ್ದ ತಂಗುದಾಣ ಕೆಡವಿದ ಸ್ಥಳದಿಂದ ಸ್ವಲ್ಪ ಮುಂದಕ್ಕೆ ಸುರಕ್ಷಿತ ಮತ್ತು ಸುಸಜ್ಜಿತ ಬಸ್ ತಂಗುದಾಣ ನಿರ್ಮಾಣಕ್ಕೆ ಸೂಚನೆ ನೀಡಿದರು. ಮೂರ್ನಾಡು ರಸ್ತೆಯಲ್ಲಿನ ಶೌಚಾಲಯ ವೀಕ್ಷಣೆ ಮಾಡಿದ ಶಾಸಕರು 20 ಲಕ್ಷ ರೂ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ನಕಾಶೆ ಮತ್ತು ಅಂದಾಜು ಪಟ್ಟಿಯನ್ನು ಸಲ್ಲಿಸುವಂತೆ ಪೌರಾಯುಕ್ತರಿಗೆ ನಿರ್ದೇಶನ ನೀಡಿದರು.
ಈ ಸಂಧರ್ಭ ಮಡಿಕೇರಿ ನಗರಸಭೆ ಪೌರಾಯುಕ್ತ ವಿಜಯ್, ಪ್ರಮುಖರಾದ ತೆನ್ನಿರ ಮೈನಾ, ಪ್ರಕಾಶ್ ಆಚಾರ್ಯ, ಮಂಡೀರ ಸದಾ ಮುದ್ದಪ್ಪ, ಮುದ್ದುರಾಜ್, ವಿ.ಜಿ.ಮೋಹನ್, ಮೂಡಾ ಅಧಿಕಾರಿಗಳು, ಲೋಕೋಪಯೋಗಿ ರಾಷ್ಟ್ರೀಯ ಹೆದ್ದಾರಿಯ ಎಂಜಿನಿಯರ್ ಗಳು ಹಾಜರಿದ್ದರು.