ಸಿದ್ದಾಪುರ ಜು.13 NEWS DESK : ಅಭಿವೃದ್ಧಿ ಎಂಬ ಹೆಸರಿನಲ್ಲಿ ಕೊಡಗು ಜಿಲ್ಲೆಯ ಪರಿಸರವು ಹಾಳಾಗುತ್ತಿದ್ದು, ಪ್ರತಿ ಗ್ರಾಮಗಳಲ್ಲಿ ತ್ಯಾಜ್ಯ, ಪ್ಲಾಸ್ಟಿಕ್ ಸಮಸ್ಯೆಗೆ ಮುಕ್ತಿ ನೀಡುವ ಸಲುವಾಗಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ತ್ಯಾಜ್ಯ ವಿಲೇವಾರಿ ವೈಜ್ಞಾನಿಕ ಘಟಕವನ್ನು ಪ್ರಾರಂಭಿಸುವುದರೊಂದಿಗೆ
ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಜಿಲ್ಲೆಯನಾಗಿಸಬೇಕೆಂದು ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯ ಮುಕೋಂಡ ವಿಜು ಸುಬ್ರಮಣಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಸಿದ್ದಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಪ್ರಜ್ಞಾವಂತ ನಾಗರಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸ್ವಚ್ಛ ಪರಿಸರ ನಿರ್ಮಾಣದ ಜಿಲ್ಲೆಯನ್ನಾಗಿ ಮಾರ್ಪಾಡಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.
ಅಭಿವೃದ್ಧಿ ಎಂಬ ಹೆಸರಿನಲ್ಲಿ ಜಿಲ್ಲೆಯ ಪರಿಸರವು ಹಾಳಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಕೊಡಗಿನ ನಾಗರಿಕರು ನೀರು, ನೆರ್ಮಲ್ಯ ಮತ್ತು ಸ್ವಚ್ಛತಾ ಅಭಿಯಾನಗಳೆಂಬ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪರಿಸರ ಸ್ನೇಹಿ ಕಾಳಜಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಇದರ ಜೊತೆಗೆ ಕೊಡಗು ಜಿಲ್ಲಾ ಪಂಚಾಯತ್ ನ ಅಧಿಕಾರಿಗಳು ಮತ್ತು ಇಲಾಖೆಗಳು ನಾನಾ ಅಭಿಯಾನದ ಕಾರ್ಯಕ್ರಮದ ಮುಖಾಂತರ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಶುಚಿತ್ವ, ಪರಿಸರ, ಪ್ಲಾಸ್ಟಿಕ್ ನಿರ್ಮೂಲನೆ, ತ್ಯಾಜ್ಯ ವಿಲೇವಾರಿ ಸೇರಿದಂತೆ ಆರೋಗ್ಯ ಕಾಳಜಿಗಾಗಿ ಬೀದಿ ನಾಟಕಗಳ ಮುಖಾಂತರ ಜಾಗೃತಿ ಅರಿವು ಹಾಗೂ ಸ್ವಚ್ಛ ಗ್ರಾಮ ನಿರ್ಮಾಣದಡಿ ಜನರ ಕರ್ತವ್ಯ ಮತ್ತು ಪಾಲನೆ ಬಗ್ಗೆ ಮಾಹಿತಿ ನೀಡುವ ಉತ್ತಮ ಕೆಲಸ ಆರಂಭವಾಗಬೇಕಾಗಿದೆ.
ಕೊಡಗು ಜಿಲ್ಲೆಯ ಪ್ರತಿ ತಾಲ್ಲೂಕು ಪಂಚಾಯತ್ ನಲ್ಲಿ ನಿಗದಿಪಡಿಸಿದ ಸರಕಾರಿ ಜಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕಸ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಿ ನಂತರ ಆಯಾ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಯ ಕಸವನ್ನು ತಾಲೂಕು ಪಂಚಾಯತ್ ನಲ್ಲಿನ ಕಸ ವಿಲೇವಾರಿ ಘಟಕಕ್ಕೆ ವಿಲೇವಾರಿ ಮಾಡುವಂತೆ ಜಿಲ್ಲಾಡಳಿತವು ಪ್ರತಿ ಗ್ರಾ.ಪಂ ಮತ್ತು ತಾಲ್ಲೂಕು ಪಂಚಾಯಿತ್ ಗಳಿಗೆ ಆದೇಶ ನೀಡಬೇಕು. ಇದಕ್ಕಾಗಿ ಜಿಲ್ಲಾಡಳಿತವು ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಪಡೆಯಲು ಪ್ರಯತ್ನಿಸಬೇಕು ಎಂದು ಮುಕೊಂಡ ವಿಜು ಸುಬ್ರಮಣಿ ಒತ್ತಾಯಿಸಿದರು.
ಸಾರ್ವಜನಿಕರು ನೀರನ್ನು ಮಿತವಾಗಿ ಬಳಸುವುದರ ಜೊತೆಗೆ ಎಲ್ಲೆಂದರಲ್ಲಿ ಕಸ ಬಿಸಾಡದಂತೆ ಮತ್ತು ಅಲ್ಲಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನೀರಿನ ಸಂರಕ್ಷಣೆ ಮತ್ತು ಶೌಚಾಲಯ ಬಳಕೆ ಮಾಡುವುದರ ಮುಖಾಂತರ ನಮ್ಮ ಪರಿಸರವನ್ನು ರಕ್ಷಣೆ ಮಾಡುವ ಹೊಣೆ ನಮ್ಮೆಲ್ಲರ ಕರ್ತವ್ಯಾಗಿದೆ. ನಾವು ಆರೋಗ್ಯವಂತರಾಗಿ ಇರಬೇಕಾದರೆ ಸ್ವಚ್ಛತೆ ಮತ್ತು ಊರಿನ ಸಂರಕ್ಷಣೆಯನ್ನು ನಮ್ಮ ಮನೆಯಿಂದಲೇ ಆರಂಭಿಸಬೇಕು. ಸರ್ಕಾರದಡಿಯಲ್ಲಿ ಬರುವ ಕೊಡಗಿನ ಎಲ್ಲಾ ಇಲಾಖೆಗಳು ಒಗ್ಗೂಡಿ ಕೊಡಗು ಜಿಲ್ಲೆಯನ್ನ “ಪರಿಸರ ತಾಣವೆಂದು ಘೋಷಣೆ” ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಮುಂದಾಗಬೇಕು. ಕೇವಲ “ವಿಶ್ವ ಪರಿಸರ ದಿನಾಚರಣೆ”ಯಂದು ಗಿಡಕ್ಕೆ ನೀರು ಹಾಕಿದರೆ ಸಾಲದು. ಅದರ ಬದಲಾಗಿ ಕೊಡಗು ಜಿಲ್ಲೆಯ ಪರಿಸರ ಶುಚಿತ್ವ ಮತ್ತು ಸಂರಕ್ಷಣೆಯ ಮಹತ್ವದ ಬಗ್ಗೆ ಪ್ರತಿನಿತ್ಯವೂ ಅರಿವು ಮೂಡಿಸುವ ಪ್ರಯತ್ನವನ್ನು ನಡೆಸಿದಾಗ ಮಾತ್ರ ಇಂತಹ ದಿನಾಚರಣೆಗಳಿಗೆ ಅರ್ಥ ಬರಲು ಸಾಧ್ಯ ಎಂದರು.
ತಲಕಾವೇರಿ ಉಗಮ ಸ್ಥಾನ ಸೇರಿದಂತೆ ಕೊಡಗು ಜಿಲ್ಲೆಯ ಧಾರ್ಮಿಕ ಕೇಂದ್ರಗಳನ್ನ ಪ್ರವಾಸಿತಾಣ ಪಟ್ಟಿಯಿಂದ ಕೈಬಿಡಬೇಕೆಂದು ಒತ್ತಾಯಿಸಿದ ಅವರು ನಾವುಗಳು ಇತ್ತೀಚಿನ ದಿನಗಳಲ್ಲಿ ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್‍ನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸುತ್ತೇವೆ. ಆದರೆ ಬಳಸಿದ್ದನ್ನು ಮರು ಬಳಕೆಗೆ ನೀಡುತ್ತಿಲ್ಲ. ಪ್ಲಾಸ್ಟಿಕ್‍ನ್ನು ಎಲ್ಲೆಂದರಲ್ಲಿ ಬಿಸಾಡುವುದು, ಒಲೆಗೆ ಉಪಯೋಗಿಸುವುದು ಸರಿಯಲ್ಲ. ಮಿಲಿಯನ್ ವರ್ಷವಾದರೂ ಪ್ಲಾಸ್ಟಿಕ್ ತನ್ನ ಸ್ಥಿತಿಯನ್ನು ಕಳೆದುಕೊಳ್ಳುವುದಿಲ್ಲ. ಆದ್ದರಿಂದ ಪ್ಲಾಸ್ಟಿಕ್ ಬಳಕೆ ಮಾಡದೇ ಕೇವಲ ಬಟ್ಟೆ ಬ್ಯಾಗನ್ನು ಉಪಯೋಗಿಸುವಂತಾಗಬೇಕು. ಹೊರಜಿಲ್ಲೆಗಳಿಂದ ಅಥವಾ ಹೊರರಾಜ್ಯಗಳಿಂದ ಬರುವ ಪ್ರವಾಸಿಗರು ಕೊಡಗಿನ ರಸ್ತೆ ಬದಿಯಲ್ಲಿ ಕಸವನ್ನು ಸುರಿದು ಕೊಡಗಿನ ಸ್ವಚ್ಛ ಪರಿಸರವನ್ನು ಹಾಳು ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಆಯಾ ತಾಲೂಕು ಹಾಗೂ ಗ್ರಾಮ ಪಂಚಾಯತ್ ಗಳಿಗೆ ಅದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಪ್ರವಾಸಿ ಕೇಂದ್ರಗಳು, ಹೋಂಸ್ಟೇ, ರೆಸಾರ್ಟ್, ಹೋಟೆಲ್‍ಗಳು ಸೇರಿದಂತೆ ಎಲ್ಲಿಯೂ ಸಹ ಪ್ಲಾಸ್ಟಿಕ್ ಬಳಸಬಾರದು ಎಂದು ಸಲಹೆ ನೀಡಿದರು. ಪ್ರತಿ ಗ್ರಾಮ ಪಂಚಾಯತ್ ಗಳು ಹಸಿಕಸ ಮತ್ತು ಒಣಕಸವನ್ನು ಬೇರ್ಪಡಿಸಿ ಪರಿಸರ ಮಾಲಿನ್ಯದಿಂದ ಇಡೀ ಕೊಡಗು ಜಿಲ್ಲೆಯನ್ನು ದೂರವಿಡಲು ರಣತಂತ್ರ ರೂಪಿಸಬೇಕು. ಅಂದಾಗ ಮಾತ್ರ ಜಿಲ್ಲೆಯ ಪರಿಸರದಲ್ಲಿ ಸ್ವಚ್ಚತೆ ಕಾಪಾಡಲು ಸಾಧ್ಯ ಎಂದರು.
ವಿಶ್ವದಲ್ಲಿ 100 ಮಿಲಿಯನ್ ಟನ್‍ಗಳಷ್ಟು ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದ್ದು, 7 ಸಾವಿರ ಟನ್ ರಷ್ಟು ಪ್ಲಾಸ್ಟಿಕ್ ತ್ಯಾಜ್ಯವಾಗುತ್ತಿದೆ. ಇದು ಹಳ್ಳಕೊಳ್ಳ, ಕಾಲುವೆ, ನದಿ, ಸಮುದ್ರ ಸೇರಿ ಇಡೀ ಜೀವಜಲದ ಪ್ರಾಣವನ್ನೇ ಹಿಂಡುತ್ತಿದೆ. ಪ್ರಾಣಿ, ಪಕ್ಷಿ ಸೇರಿದಂತೆ ಜೀವಜಲಗಳು ಉಳಿಯಬೇಕಾದರೆ ನಾವುಗಳು ಪ್ಲಾಸ್ಟಿಕ್ ಬಳಸಬಾರದು. ಮುಂದಿನ ಪೀಳಿಗೆಗೆ ಹಸಿರು, ಶುದ್ಧಗಾಳಿ, ಶುದ್ಧ ಕುಡಿಯುವ ನೀರು ಸಿಗಬೇಕಾದರೆ ಮನುಕುಲವು ಪ್ಲಾಸ್ಟಿಕ್ ಬಳಕೆಯಿಂದ ದೂರವಿರಬೇಕು. ಇಲ್ಲದಿದ್ದಲ್ಲಿ ಜೀವನಕ್ಕೆ ದುಸ್ತರವಾಗಲಿದೆ ಎಂದು ಎಚ್ಚರಿಸಿದರು.
ಇಂದಿನ ಪೀಳಿಗೆಯಲ್ಲಿ ಮಾನವನು ಹಣ ಸಂಗ್ರಹ ಮಾಡುವುದರ ಕಡೆಗೆ ಹೆಚ್ಚಿನ ಗಮನ ಹರಿಸುತ್ತಾನೆ. ಇದರ ಬದಲು ಪರಿಸರ, ಅರಣ್ಯ ಸಂರಕ್ಷಣೆ ಮಾಡಿದ್ದಲ್ಲಿ ನಮ್ಮ ಮತ್ತು ಮಕ್ಕಳ ಹಾಗೂ ಮುಂದಿನ ಪೀಳಿಗೆಯವರ ಆರೋಗ್ಯ ಮತ್ತು ಜೀವನವು ಉತ್ತಮವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರಲ್ಲಿಯೂ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ಇರಬೇಕು. ಇದಕ್ಕಾಗಿ ನಾವು ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ತೊಲಗಿಸಬೇಕು. ಹಸಿರುಮಯ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು. ಮರಗಿಡಗಳು ಇಲ್ಲದಿದ್ದರೆ ಬದುಕು ಅಸಾಧ್ಯ. ಪರಿಸರವನ್ನು ಸದಾ ರಕ್ಷಣೆ ಮಾಡಬೇಕು. ನದಿ, ಜಲವನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಮೂಲಭೂತ ಕರ್ತವ್ಯವಾಗಿದೆ. ಅರಣ್ಯ ಮತ್ತು ಪರಿಸರ ಸಂಪತ್ತು ಸಂರಕ್ಷಣೆಯಾದಲ್ಲಿ ಮಾತ್ರ ಕಾಲ ಕಾಲಕ್ಕೆ ಮಳೆ, ಬೆಳೆ ಕಾಣಬಹುದು. ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು ವಿತರಿಸಲಾಗುತ್ತಿದ್ದು, ಇವುಗಳನ್ನು ಯಾರು ಪೋಷಣೆ ಮಾಡುತ್ತಾರೆಯೋ ಅವರಿಗೆ ಸರ್ಕಾರದ ವತಿಯಿಂದ ಪ್ರೋತ್ರಾಹ ಧನ ನೀಡಬೇಕು. ಜೊತೆಗೆ ಪರಿಸರ ದಿನಾಚರಣೆ ಪ್ರಯುಕ್ತ ಶಾಲಾ-ಕಾಲೇಜುಗಳಿಗೆ ವಿತರಿಸಲಾಗುವ ಗಿಡಗಳನ್ನು ಸಮರ್ಪಕವಾಗಿ ಸಂರಕ್ಷಣೆ ಮಾಡಿದ್ದಲ್ಲಿ ಅಂತಹ ಶಾಲಾ-ಕಾಲೇಜುಗಳಿಗೆ ಪ್ರಶಸ್ತಿ ಪತ್ರ ನೀಡಬೇಕು. ಆಗ ಪ್ರತಿಯೊಬ್ಬರಲ್ಲೂ ಪರಿಸರದ ಮೇಲಿನ ಕಾಳಜಿಯು ವೃದ್ಧಿಸುತ್ತದೆ.
“ಭೂಮಿಯ ಅತ್ಯಮೂಲ್ಯ ಸಂಪನ್ಮೂಲವನ್ನು ಮಿತವಾಗಿ ಬಳಸೋಣ, ಮುಂದಿನ ಪೀಳಿಗೆಗಾಗಿ ಸಂರಕ್ಷಿಸೋಣ, ಪರಿಸರದೊಂದಿಗೆ ಉತ್ತಮ ಬಾಂಧವ್ಯ ಸಾಧಿಸಿ ಬದುಕು ಕಟ್ಟಿಕೊಳ್ಳೋಣ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳೊಣ, ಹಸಿರಾಗಿಸೋಣ, ಪ್ಲಾಸ್ಟಿಕ್ ಮುಕ್ತವಾಗಿಸೋಣ ಮತ್ತು ಪರಿಸರ ಸಂರಕ್ಷಿಸೋಣ ಎಂಬ ಪ್ರತಿಜ್ಞಾ ವಿಧಿಯಂತೆ ಸರ್ವರೂ ಬದುಕು ಸಾಗಿಸಿ ಕೊಡಗನ್ನು ಪರಿಸರ ಸ್ನೇಹಿ ಜಿಲ್ಲೆಯನ್ನಾಗಿಸಬೇಕೆಂದು ಸಲಹೆ ನೀಡಿದರು.