ಮಡಿಕೇರಿ ನ.20 NEWS DESK : ಕೃಷಿ ಟುವಟಿಕೆಗಳ ಮೂಲಕ ಬದುಕು ಕಟ್ಟಿಕೊಂಡಿರುವ ರೈತ ಸಮುದಾಯದ ಬದುಕಿಗೆ ಆತಂಕ ಮೂಡಿಸಿರುವ ಕರಾಳ “ವಕ್ಫ್ ಕಾಯ್ದೆ”ಯನ್ನು ಹಿಂಪಡೆಯಬೇಕು ಮತ್ತು ಹಗರಣಗಳಲ್ಲಿ ಮುಳುಗಿರುವ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ನ.22 ರಂದು ಕೊಡಗು ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ದಿನಪೂರ್ತಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ನಗರದ ಶ್ರೀ ಚೌಡೇಶ್ವರಿ ದೇಗುಲದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು, ನಗರದ ಹಳೇ ಖಾಸಗಿ ಬಸ್ ನಿಲ್ದಾಣ, ಜ.ತಿಮ್ಮಯ್ಯ ವೃತ್ತವನ್ನು ಹಾದು ಜಿಲ್ಲಾಧಿಕಾರಿಗಳ ಕಚೇರಿ ತಲುಪಲಿದೆ. ಬಳಿಕ ಸಂಜೆ 5 ಗಂಟೆಯವರೆಗೆ ಧರಣಿ ಮುಷ್ಕರ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಂದಿಲ್ಲ ಒಂದು ಹಗರಣಗಳು ನಡೆಯುತ್ತಲೆ ಇದೆ. ಒಂದು ಸಮುದಾಯದ ಓಲೈಕೆಗಾಗಿ ತುಷ್ಟೀಕರಣ ನೀತಿಯನ್ನು ಅನುಸರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಸಂವಿಧಾನದ ಆಶಯಗಳಿಗೆ ತಕ್ಕಂತೆ ವಕ್ಫ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು. ವಕ್ಫ್ ಸಂಬಂಧಿ ಸಮಸ್ಯೆಗಳನ್ನು ನ್ಯಾಯಾಲಯಗಳಲ್ಲು ಪ್ರಶ್ನಿಸಲು ಅವಕಾಶವಿಲ್ಲ ಎಂದಾದಲ್ಲಿ ಅಂತಹ ವಕ್ಫ್ ಕಾಯ್ದೆಯನ್ನು ಶಾಶ್ವತವಾಗಿ ಹಿಂದಕ್ಕೆ ಪಡೆಯುವ ಮೂಲಕ ಅದನ್ನು ಸಂವಿಧಾನದ ಪರಿಮಿತಿಗೆ ತರಬೇಕಾಗಿದೆ ಎಂದು ತಿಳಿಸಿದರು.
ಮುಡಾ ಪ್ರಕರಣದ ತನಿಖೆಗೂ ಮುನ್ನವೆ ತಾವು ಪಡೆದ ಮುಡಾ ನಿವೇಶನಗಳನ್ನು ಹಿಂದಕ್ಕೆ ನೀಡುವ ಮೂಲಕ ತಾವು ತಪ್ಪಿತಸ್ಥರೆಂದು ಮುಖ್ಯಮಂತ್ರಿಗಳೆ ಒಪ್ಪಿಕೊಂಡಂತಾಗಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣವಾಗಿಲ್ಲ, 85 ಕೋಟಿಯಷ್ಟೆ ಎನ್ನುವ ಮೂಲಕ ಮತ್ತೆ ಹಗರಣ ನಡೆಸಿರುವುದನ್ನು ಒಪ್ಪಿಕೊಂಡಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಗರಣಗಳ ಸರಮಾಲೆಯಲ್ಲಿ ಸಿಲುಕಿದೆ ಎಂದು ಟೀಕಿಸಿದ ನಾಪಂಡ ರವಿ ಕಾಳಪ್ಪ, ಸರ್ಕಾರವನ್ನು ವಜಾ ಗೊಳಿಸಬೇಕೆಂದು ಪ್ರತಿಭಟನೆಯ ಮೂಲಕ ರಾಜ್ಯಪಾಲರನ್ನು ಒತ್ತಾಯಿಸಲಾಗುತ್ತದೆ ಎಂದರು. ಪ್ರತಿಭಟನೆ ಸಂದರ್ಭ ಜಿಲ್ಲೆಯ ಸಿ ಮತ್ತು ಡಿ ದರ್ಜೆಯ ಜಾಗವನ್ನು ಅರಣ್ಯ ಎಂದು ಘೋಷಿಸುವ ಸರ್ಕಾರದ ಕ್ರಮವನ್ನು, ಜಿಲ್ಲೆಯ 5 ಏಕರೆಗಿಂತ ಕಡಿಮೆ ಇರುವ ರೈತರ ಜಾಗವನ್ನು 11 ಇ ಸ್ಕೆಚ್ ಮಾಡದಂತೆ ಹೊರಡಿಸಿರುವ ಆದೇಶವನ್ನು, ಹದಗೆಟ್ಟ ಜಿಲ್ಲೆಯ ರಸ್ತೆಗಳ ದುರಸ್ತಿ ಕಾರ್ಯ ನಡೆಸದಿರುವ ಕ್ರಮ, ಬಿಪಿಎಲ್ ಕಾರ್ಡ್‍ಗಳನ್ನು ರದ್ದು ಪಡಿಸುತ್ತಿರುವ ಧೋರಣೆಯನ್ನು ಖಂಡಿಸಲಾಗುತ್ತದೆ ಎಂದು ತಿಳಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಅತ್ಯಂತ ಕೀಳು ಮಟ್ಟದಿಂದ, ಅವಹೇಳನಕಾರಿಯಾಗಿ ಟೀಕಿಸಿರುವ ಸಚಿವ ಜಮೀರ್ ಅಹಮ್ಮದ್‍ರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರರುಗಳಾದ ಬಿ.ಕೆ.ಅರುಣ್ ಕುಮಾರ್, ತಳೂರು ಕಿಶೋರ್ ಕುಮಾರ್ ಹಾಗೂ ಕಾಂಗೀರ ಸತೀಶ್ ಉಪಸ್ಥಿತರಿದ್ದರು.