ಮಡಿಕೇರಿ ನ.20 NEWS DESK : ರಾಜ್ಯದ ವಿವಿಧೆಡೆ ರೈತರ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪ್ರತಿಬಿಂಬಿಸಲ್ಪಟ್ಟಿರುವ ವಕ್ಫ್ ನೋಟೀಸ್ ನಿಂದಾಗಿ ಕೃಷಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಪ್ರಕರಣದಿಂದಲಾದರೂ ಕೊಡಗಿನ ಬೆಳೆಗಾರರು ಎಚ್ಚೆತ್ತುಕೊಂಡು ಜಮ್ಮಾ ಜಾಗದ ಮೇಲಿನ ತಮ್ಮ ಹಕ್ಕನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಬಿಜೆಪಿಯ ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಕ್ಫ್ ಆಸ್ತಿ ಎಂಬ ನೋಟೀಸ್ ಎಚ್ಚರಿಕೆಯ ಗಂಟೆಯಾಗಿದ್ದು, ಉತ್ತರ ಕರ್ನಾಟಕದ ಹಲವು ಭಾಗಗಳ ರೈತರು ಆತಂಕದಲ್ಲಿದ್ದಾರೆ. ಇನ್ನಾದರೂ ಕೊಡಗಿನ ಬೆಳೆಗಾರರು ಜಾಗೃತರಾಗಲೇಬೇಕಾಗಿದೆ. ಭೂಮಿಯ ಹಕ್ಕಿನ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಮುಂದೊಂದು ದಿನ ಜಮ್ಮಾ ಜಾಗದ ಮೇಲೆ ಮತ್ಯಾರೋ ಅಧಿಕಾರ ಚಲಾಯಿಸಬಹುದಾದ ಸಾಧ್ಯತೆಗಳಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತಲೆತಲಾಂತರಗಳಿಂದ ಕೊಡಗು ಜಿಲ್ಲೆಯ ಎಲ್ಲಾ ಜಾತಿ, ಜನಾಂಗ, ಧರ್ಮದವರು ಜಮ್ಮಾಭೂಮಿಯನ್ನು ಅನುಭವಿಸಿಕೊಂಡು ಬರುತ್ತಿದ್ದಾರೆ. ಕೃಷಿ ಕಾರ್ಯ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಆದರೆ ಜಮ್ಮಾಭೂಮಿಯ ಕುರಿತು ಇರುವ ಗೊಂದಲಗಳು ಇಲ್ಲಿಯವರೆಗೆ ಸರ್ಕಾರದ ಮಟ್ಟದಲ್ಲಿ ಬಗೆಹರಿದಿಲ್ಲ. ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ಜಮ್ಮಾಭೂಮಿಯ ಗೊಂದಲ ನಿವಾರಣೆಯಾಗಲೇಬೇಕಾಗಿದೆ. ಈ ಭೂಮಿಯ ಮೇಲೆ ಅಧಿಕೃತ ಹಕ್ಕುದಾರರು ಯಾರು ಎನ್ನುವುದು ದಾಖಲೆಗಳ ಮೂಲಕ ಸಾಬೀತಾಗಬೇಕಾಗಿದೆ. ಇದು ಅಧಿಕೃತಗೊಳ್ಳದಿದ್ದಲ್ಲಿ ಮುಂದೊಂದು ದಿನ ಯಾರದ್ದೋ ಆಸ್ತಿ ಎಂಬ ನೋಟೀಸ್ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.
ಆದ್ದರಿಂದ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದೆ ಜಾತಿ, ಮತ, ಪಕ್ಷ ಬೇಧ ಮರೆತು ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದೆ. ವಕ್ಫ್ ಆಸ್ತಿ ಎಂಬ ನೋಟೀಸ್ ನಂತೆ ನೋಟೀಸ್ ಗಳು ಬರುವ ಮೊದಲೇ ಜಿಲ್ಲೆಯ ಜನ ಜಾಗೃತರಾಗಬೇಕಾಗಿದೆ. ಪ್ರಸ್ತುತ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಮಾಯಕರಿಗೆ ಹಾಗೂ ರೈತರಿಗೆ ವಕ್ಫ್ ಆಸ್ತಿ ಎಂಬ ನೋಟೀಸ್ ನೀಡಿರುವುದು ಖಂಡನೀಯ. ನೋಟೀಸ್ ವಾಪಾಸ್ಸು ಪಡೆದಿರುವುದಾಗಿ ಜನ ಆಕ್ರೋಶಗೊಂಡ ನಂತರ ಸರ್ಕಾರ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬಂತೆ ರೈತರ ಜೀವನದಲ್ಲಿ ಸರ್ಕಾರ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ.
ಮುಂದೊಂದು ದಿನ ಕೊಡಗಿನ ಜಮ್ಮಾಭೂಮಿ ಮೇಲೂ ಆಡಳಿತಶಾಹಿಗಳ ದೃಷ್ಟಿ ಬೀಳುವ ಮೊದಲು ಗೊಂದಲ ನಿವಾರಣೆಯಾಗಬೇಕಾಗಿದೆ. ಕೊಡಗಿನಲ್ಲಿ ಜಾಗದ ಹಕ್ಕು ಇತರ ಜಿಲ್ಲೆಗಳಿಂದ ವಿಭಿನ್ನವಾಗಿದ್ದು, ಚುನಾಯಿತ ಪ್ರತಿನಿಧಿಗಳು ಸರ್ಕಾರದ ಪರ ಇರದೆ ಜನರ ಪರ ಇರುವುದು ಉತ್ತಮ ಎಂದು ಎಂ.ಎಂ.ಪರಮೇಶ್ವರ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಸರ್ಕಾರ ಒಂದು ವರ್ಗವನ್ನು ಓಲೈಸಿಕೊಳ್ಳುವ ನಿಟ್ಟಿನಲ್ಲಿ ಇತರರಿಗೆ ತೊಂದರೆ ನೀಡುತ್ತಿದೆ. ವಕ್ಫ್ ಆಸ್ತಿ ಹೆಸರಿನಲ್ಲಿ ನೋಟೀಸ್ ನೀಡಿದಂತೆ ಈ ಹಿಂದೆ ಅರಣ್ಯ ಇಲಾಖೆ ಮೂಲಕವೂ ಜಿಲ್ಲೆಯ ಬೆಳೆಗಾರರಲ್ಲಿ ಸರ್ಕಾರ ಗೊಂದಲ ಸೃಷ್ಟಿಸಿತ್ತು. ಅಲ್ಲದೆ ವಾಲ್ಮೀಕಿ ಅಭಿವೃದ್ಧಿ ನಿಗಮ, ಪರಿಶಿಷ್ಟರ ಅನುದಾನ ದುರುಪಯೋಗ, ಮೂಡ ಹಗರಣ ಸೇರಿದಂತೆ ಇನ್ನೂ ಕೆಲವು ಆರೋಪಗಳು ಸರ್ಕಾರದ ಮೇಲಿದೆ. ಕೊಡಗಿನ ಜನ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ಈ ಸರ್ಕಾರದಿಂದ ಮತ್ತಷ್ಟು ಆತಂಕದ ಸನ್ನಿವೇಶಗಳು ಎದುರಾಗಬಹುದು ಎಂದು ಆರೋಪಿಸಿದ್ದಾರೆ.