ಸೋಮವಾರಪೇಟೆ ನ.20 NEWS DESK : ಮನುಷ್ಯ ಸಾಮಾಜಿಕ ಸ್ವಾಸ್ಥ್ಯದೊಂದಿಗೆ ಸುಂದರವಾದ ಜೀವನ ನಡೆಸಲು ವಚನ ಸಾಹಿತ್ಯ ದೀವಿಗೆ ಇದ್ದಂತೆ ಎಂದು ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಶಿಕ್ಷಕರೂ ಹಾಗೂ ವಾಗ್ಮಿ ಮೆ.ನಾ.ವೆಂಕಟನಾಯಕ್ ಹೇಳಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ತೋಳೂರು ಶೆಟ್ಟಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿನಿಯರ ವಸತಿ ಶಾಲೆಯಲ್ಲಿ ನಡೆದ “ಶರಣ ಸಂಸ್ಕೃತಿ” ವಿಚಾರ ಗೋಷ್ಠಿಯಲ್ಲಿ ಪ್ರವಚನ ನೀಡಿದ ಅವರು, ಹನ್ನೆರಡನೇ ಶತಮಾನದಲ್ಲಿ ಕನ್ನಡದ ನೆಲದಲ್ಲಿ ನಡೆದ ಶರಣರ ಕ್ರಾಂತಿ ಸಮಾಜದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣವಾಯಿತು. ಅಂದಿನ ಸಮಾಜದಲ್ಲಿ ತಾಂಡವವಾಡುತ್ತಿದ್ದ ಸಾಮಾಜಿಕ ಸಂಘರ್ಷಗಳನ್ನು ತಡೆಗಟ್ಟಲು ವಚನಕಾರರು ಕಲ್ಯಾಣದ ಅನುಭವ ಮಂಟಪದಲ್ಲಿ ಮೊಳಗಿಸಿದ ವಿಚಾರ ಲಹರಿಗಳ ಕಹಳೆ ಇಂದಿಗೂ ಹಾಗೂ ಎಂದೆಂದಿಗೂ ಚಿರಸ್ಥಾಯಿ. ಅಂದಿನ ಶರಣರ ಶ್ರೇಷ್ಠ ಚಿಂತನೆಗಳು ಇಂದು ನೊಂದವರು, ದೀನ ದಲಿತರು ಹಾಗೂ ಜನಸಾಮಾನ್ಯರ ಪಾಲಿಗೆ ಆಶಾಕಿರಣಗಳಾಗಿವೆ ಎಂದರು. ಸ್ವಾತಂತ್ರ್ಯಾನಂತರ ದೇಶದಲ್ಲಿ ಜಾರಿಗೆ ಬಂದ ಸಮಾನತೆ, ಮಹಿಳಾ ಸ್ವಾತಂತ್ರ್ಯ ಹಾಗೂ ವಾಕ್ ಸ್ವಾತಂತ್ರ್ಯದ ಮೂಲ ಕಾರಣಿಕರೇ ಅಂದಿನ ಶರಣರು. ಏಕೆಂದರೆ ಜಗಜ್ಯೋತಿ ಬಸವೇಶ್ವರರು ಇಂತಹ ಅಸಮಾನತೆ, ಜಾತೀಯತೆಯ ವಿಷ ಬೀಜವನ್ನು ನಿರ್ಮೂಲನೆಗೊಳಿಸಲು ಹೋರಾಡಿದ ಮಹಾಪುರುಷ. ಹಾಗಾಗಿ ಇಂದಿನ ಮಕ್ಕಳು ಅಳಿದು ಹೋಗುತ್ತಿರುವ ಶರಣರ ವಿಚಾರಧಾರೆಗಳು ಹಾಗೂ ಅವರಲ್ಲಿದ್ದ ಶ್ರೇಷ್ಟ ಚಿಂತನೆಗಳನ್ನು ವಚನಗಳ ಮೂಲಕ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ.
ಅದಕ್ಕಾಗಿಯೇ ಸರ್ಕಾರ ಬಸವಣ್ಣನನ್ನು ಸಾಂಸ್ಕೃತಿಕ ನಾಯಕನಾಗಿ ಘೋಷಿಸಿರುವುದು ಎಂದು ವೆಂಕಟನಾಯಕ್ ವಿಮರ್ಶಿಸಿದರು. ಶ್ರೇಷ್ಟ ವಚನಕಾರರಾದ ಅಕ್ಕಮಹಾದೇವಿ, ಅಲ್ಲಮಪ್ರಭು, ಅಂಬಿಗರ ಚೌಡಯ್ಯ, ಸೂಳೆ ಸಂಕವ್ವಾ, ಆಯ್ದಕ್ಕಿ ಮಾರಯ್ಯ, ಲಕ್ಕಮ್ಮ ಮೊದಲಾದ ಶರಣರ ವಚನಗಳ ಅನುಭೂತಿಯನ್ನು ವಿದ್ಯಾರ್ಥಿಗಳಿಗೆ ವೆಂಕಟನಾಯಕ್ ಉಣಬಡಿಸಿದರು. “ಶರಣ ಸಂಸ್ಕೃತಿ” ವಿಚಾರ ಗೋಷ್ಠಿ ಉದ್ಘಾಟಿಸಿದ ಪುಷ್ಪಗಿರಿಯ ಶಾಂತಮಲ್ಲಿ ಕಾರ್ಜುನ ದೇವಾಲಯ ಸಮಿತಿ ಅಧ್ಯಕ್ಷ ಟಿ.ಪಿ.ಚೆಂಗಪ್ಪ ಮಾತನಾಡಿ, ನೈತಿಕ ಮೌಲ್ಯ ಹಾಗೂ ಆದರ್ಶಗಳು ಕುಸಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಮನದಲ್ಲಿ ಹಬ್ಬೆರಡನೇ ಶತಮಾನದ ಶರಣರ ವಿಚಾರಧಾರೆಗಳು ಹಾಗೂ ನಾಡಿನ ಸಾಹಿತ್ಯ ಹಾಗೂ ಸಂಸ್ಕ್ರತಿಯ ಪುನರ್ ಪಠನ ಇಂದು
ಇಂದಿನ ಪೀಳಿಗೆಗೆ ಅತಿ ಅಗತ್ಯವಾಗಿದೆ ಎಂದರು. ಡಾ.ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ ರೆಡ್ಡಿ ಮಾತನಾಡಿ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಶ್ರೀಮಂತಿಕೆಗೆ ವಚನ ಸಾಹಿತ್ಯದ ಕೊಡುಗೆ ಅಪಾರವಾದುದು. ಹನ್ನೆರಡನೇ ಶತಮಾನದ ವಚನಕಾರರ ಕಲ್ಯಾಣ ಕ್ರಾಂತಿ ಇಂದಿನ ಸಮಾಜದಲ್ಲಿ ಅಪಾರವಾದ ಬದಲಾವಣೆಗಳಿಗೆ ಸಾಧ್ಯವಾಯಿತು. ನೊಂದವರು, ದೀನ ದಲಿತರು, ದಮನಿತರು ಹಾಗೂ ಮಹಿಳೆಯರ ಪಾಲಿಗೆ ಅಂದಿನ ಶರಣರ ಕ್ರಾಂತಿ ಇಂದಿಗೂ ಪ್ರೇರಣೆಯಾಗಿದೆ ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ನಿರ್ದೇಶಕ ಕೂಗೆಕೋಡಿ ಬಾಲಶಂಕರ್, ಸೋಮವಾರಪೇಟೆ ತಾಲ್ಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಕೆ.ಪಿ.ಆದರ್ಶ, ವಸತಿ ಶಾಲೆಯ ಮೇಲ್ವಿಚಾರಕ ಶಭರಿ ಗಿರೀಶ್, ಶಿಕ್ಷಕರಾದ ಎಂ.ಡಿ.ಭವ್ಯ, ಎಸ್.ಎ.ಶಭಾನಾ, ಗೌತಮಿ, ರಮ್ಯಾ, ಪೂಜಾ, ಪುಷ್ಪಲತಾ, ಶೈಲಾ, ಕೀರ್ತಿ ಇದ್ದರು. ವಿದ್ಯಾರ್ಥಿನಿಯರಿಂದ ವಚನ ವೈಭವ ನೃತ್ಯ ಆಕರ್ಷಕವಾಗಿತ್ತು.