ಮಡಿಕೇರಿ ಜು.15 NEWS DESK : ಆರ್ಥಿಕ ಹೊರೆಯನ್ನು ಅನುಭವಿಸುತ್ತಿರುವ ರಾಜ್ಯ ಸರ್ಕಾರ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಕೊಡಗು ಜಿಲ್ಲೆಯಲ್ಲಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಗೆ ಪರೋಕ್ಷವಾಗಿ ಉತ್ತೇಜನ ನೀಡುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಸಿದ್ದಾಪುರದ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್ಸಿ ವತಿಯಿಂದ ಪೊನ್ನಂಪೇಟೆ ಪಟ್ಟಣದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಭೂಪರಿವರ್ತನೆ ಮತ್ತು ನೋಂದಣಿಗೆ ದೊಡ್ಡ ಮೊತ್ತದ ಶುಲ್ಕ ವಸೂಲಿ ಮಾಡುತ್ತಿರುವ ಸರ್ಕಾರ ಕೊಡಗು ಜಿಲ್ಲೆಯ ಕೃಷಿಭೂಮಿಯನ್ನು ಸುಲಭವಾಗಿ ಪರಭಾರೆ ಮಾಡಲು ಅವಕಾಶ ನೀಡುತ್ತಿದೆ. ಸರ್ಕಾರ ದಿನಕ್ಕೊಂದು ಕರಾಳ ಕಾನೂನನ್ನು ಜಾರಿಗೆ ತಂದು ಕೊಡವರಿಗೆ ಕಿರುಕುಳ ನೀಡುತ್ತಿದೆ. ಕೊಡವ ಲ್ಯಾಂಡ್ ನಿಂದಲೇ ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆಯುತ್ತಿದೆ. ದೊಡ್ಡ ದೊಡ್ಡ ಬಂಡವಾಳಶಾಹಿಗಳ ಪರ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವ ಸರ್ಕಾರ ಮತಬ್ಯಾಂಕ್ ಗಾಗಿ ಕೊಡಗನ್ನು ಬಲಿಪಶು ಮಾಡುತ್ತಿದೆ.
ಈ ಹಿಂದಿನ ಸರ್ಕಾರ 30 ಎಕರೆವರೆಗಿನ ಒತ್ತುವರಿ ಜಮೀನನ್ನು 30 ವರ್ಷ ಗುತ್ತಿಗೆ ನೀಡುವ ಕ್ರಮ ಜಾರಿಗೆ ತಂದಿತ್ತು. ಇದಕ್ಕೆ ಪೂರಕವಾಗಿ ಈಗಿನ ಸರ್ಕಾರ ವಿಧಾನಸಭೆಯಲ್ಲಿ ಅನುಮೋದನೆ ನೀಡಿ ಕೃಷಿಕರನ್ನು ನಿರಾಳಗೊಳಿಸಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳು ಇದಕ್ಕೆ ವ್ಯತಿರಿಕ್ತವಾಗಿದ್ದು, ಗುತ್ತಿಗೆ ಆಧಾರದ ಯೋಜನೆ ಅನುಷ್ಠಾನಗೊಳ್ಳುವ ಬಗ್ಗೆ ಅನುಮಾನ ಕಾಡುತ್ತಿದೆ. ಆದಿಮಸಂಜಾತ ಕೊಡವ ಬುಡಕಟ್ಟು ಜನರಿಗೆ ಒಂದಿಲ್ಲ ಒಂದು ಕಾನೂನಿನ ಮೂಲಕ ಕಿರುಕುಳವಾಗುತ್ತಿದೆ. ಸದಾ ಜನರ ಕಲ್ಯಾಣವನ್ನು ಬಯಸುವ ಸರ್ಕಾರದಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ, ಕೊಡವರು ಕಲ್ಯಾಣ ರಾಜ್ಯದ ವ್ಯಾಪ್ತಿಯಲ್ಲಿ ಸ್ವತಂತ್ರವಾಗಿ ಬದುಕಬೇಕೆ ಅಥವಾ ಬೇಡವೇ ಎನ್ನುವ ಗೊಂದಲವನ್ನು ಸರ್ಕಾರ ಸೃಷ್ಟಿಸಿದೆ.
ತಿತಿಮತಿ ಸೇರಿದಂತೆ ಕೆಲವು ಗ್ರಾಮಗಳ ಬೆಳೆಗಾರರಿಗೆ ಅಧಿಕಾರಿಗಳು ಕರೆ ಮಾಡಿ ಜಮೀನು ಸರ್ವೆ ಮಾಡಬೇಕು, ಒತ್ತುವರಿ ಇದ್ದರೆ ವಾಪಾಸ್ ಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಕೊಡವರಿಗೆ ಆಗುತ್ತಿರುವ ದೊಡ್ಡ ಅನ್ಯಾಯವಾಗಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.
ಸರ್ಕಾರಕ್ಕೆ ಧೈರ್ಯವಿದ್ದರೆ ಮೊದಲು ದೊಡ್ಡ ದೊಡ್ಡ ಕಂಪೆನಿಗಳು ಒತ್ತುವರಿ ಮಾಡಿಕೊಂಡಿರುವ ನೂರಾರು ಎಕರೆ ಭೂಮಿಯನ್ನು ತೆರವುಗೊಳಿಸಲಿ ಎಂದು ಒತ್ತಾಯಿಸಿದರು.
ಸಿದ್ದಾಪುರದಲ್ಲಿ ಒಂದು ಸಾವಿರ ಮರಗಳನ್ನು ಕತ್ತರಿಸಲು ಅನುಮತಿ ಪಡೆದು ಮೂರು ಸಾವಿರ ಮರಗಳನ್ನು ಅಕ್ರಮವಾಗಿ ಕಡಿದು ಹಾಕಿದ್ದಾರೆ. ದಕ್ಷಿಣ ಕೊಡಗಿನ ನೋಕ್ಯ, ಮತ್ತು ಕುಟ್ಟ ಭಾಗದಲ್ಲೂ ಅಕ್ರಮವಾಗಿ ಮರಗಳನ್ನು ತೆರವುಗೊಳಿಸಲಾಗಿದೆ. ಈ ಎಲ್ಲಾ ಅಕ್ರಮಗಳ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿದರೆ ಸತ್ಯಾಂಶ ಹೊರ ಬರುತ್ತದೆ ಎಂದು ತಿಳಿಸಿದರು.
ರಾಜಕೀಯ ನಂಟು ಹೊಂದಿರುವ ಭೂಮಾಫಿಯಾಗಳು ವಾಣಿಜ್ಯ ದುರುದ್ದೇಶಕ್ಕಾಗಿ ಆದಿಮಸಂಜಾತ ಕೊಡವರ ಪವಿತ್ರ ಕೊಡವ ಲ್ಯಾಂಡ್ ನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಕಪ್ಪು ಹಣ ಚಲಾವಣೆಯಾಗುತ್ತಿದೆ. ವಿಶ್ವದಾದ್ಯಂತ ಇರುವ ಆರ್ಥಿಕ ಅಪರಾಧಿಗಳು, ಕಾಳಸಂತೆಕೋರರು ಹಾಗೂ ರಾಜಕೀಯ ನಂಟು ಹೊಂದಿರುವ ಭೂಮಾಫಿಯಾಗಳು ಕಪ್ಪು ಹಣವನ್ನು ಬಿಳಿ ಮಾಡಲು ಕೊಡವ ಲ್ಯಾಂಡ್ ನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೊಡಗಿನಲ್ಲಿ ರೆಸಾರ್ಟ್ ವ್ಯವಹಾರ ದೊಡ್ಡ ಮಟ್ಟದಲ್ಲಿ ನಡೆಯದಿದ್ದರೂ ಕಾಫಿ ತೋಟಗಳ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಮಾಡಲಾಗುತ್ತಿದೆ. ನಷ್ಟ ತೋರಿಸುವುದಕ್ಕಾಗಿ ರೆಸಾರ್ಟ್ಗಳನ್ನು ನಿರ್ಮಿಸುತ್ತಿದ್ದು, ಕಪ್ಪು ಹಣವನ್ನು ಚಲಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಕ್ರಮ ದಂಧೆಕೋರ ಬಂಡವಾಳಶಾಹಿ ಕಂಪೆನಿಗಳು ಕಾನೂನು ದುರುಪಯೋಗ ಪಡಿಸಿಕೊಂಡು ರಾತೋರಾತ್ರಿ ಪ್ರಭಾವ ಬೀರಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಗಾಗಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಸರ್ಕಾರವೇ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ದಂಧೆಕೋರರಿಗೆ ಮಾರ್ಗ ತೋರಿಸುತ್ತಿದೆ. ಜಮೀನನ್ನು ಒಟ್ಟಾಗಿ ಖರೀದಿಸದೆ ಬಿಡಿ ಬಿಡಿಯಾಗಿ ಬೇನಾಮಿ ಹೆಸರಿನಲ್ಲಿ ಖರೀದಿಸಿ ನಂತರ ಭೂಪರಿವರ್ತನೆ ಮಾಡಿಸಿಕೊಳ್ಳುತ್ತಿದ್ದಾರೆ.
ಪಂಚಾಯಿತಿ ಪಿಡಿಒಗಳು ಜನಪೀಡಕರಾಗಿ ದೊಡ್ಡ ದೊಡ್ಡ ಕಂಪೆನಿಗಳಿಗೆ ಸಹಾಯ ಮಾಡುತ್ತಿದ್ದಾರೆ. ವಾಣಿಜ್ಯ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್ ಗಳಿಂದ ಸುಲಭವಾಗಿ ಸಾಲ ಪಡೆಯುವ ಬಂಡವಾಳಶಾಹಿಗಳು ರೆಸಾರ್ಟ್, ವಿಲ್ಲಾಗಳನ್ನು ನಿರ್ಮಿಸುತ್ತಿದ್ದಾರೆ. ಆದರೆ ಸ್ಥಳೀಯರು ಕೇವಲ ಸ್ವಂತ ಮನೆ ಕಟ್ಟಲು ಅನುಮತಿಗಾಗಿ ಕಚೇರಿಯಿಂದ ಕಚೇರಿಗೆ ವರ್ಷಗಟ್ಟಲೆ ಅಲೆಯಬೇಕಾಗಿದೆ. ಅಧಿಕಾರಿಗಳಿಗೆ ಲಂಚ ನೀಡಬೇಕಾಗಿದೆ ಎಂದು ನಾಚಪ್ಪ ಆರೋಪಿಸಿದರು.
ಭೂಮಾಫಿಯಾಗಳು ಹಾಗೂ ರಾಜಕೀಯ ಬೆಂಬಲಿತರು ಕೊಡಗಿನ ಕಾವೇರಿ ಜಲಾನಯನ ಪ್ರದೇಶದ ಭೂಮಿಗಳನ್ನು ದೊಡ್ಡ ಮಟ್ಟದಲ್ಲಿ ಖರೀದಿಸುತ್ತಿದ್ದು, ಕಪ್ಪು ಹಣದ ಚಲಾವಣೆಯಾಗುತ್ತಿದೆ. ಬೃಹತ್ ಕಾಫಿ ತೋಟಗಳ ಖರೀದಿಯ ನಂತರ ಅಕ್ಕಪಕ್ಕದ ಸಣ್ಣ ಹಿಡುವಳಿದಾರರ ಭೂಮಿಯನ್ನು ಹಣದ ಆಮಿಷವೊಡ್ಡಿ ಕಬಳಿಸಲಾಗುತ್ತಿದೆ.
ಕೊಡಗು ಜಿಲ್ಲೆಯಲ್ಲೂ ಸಾಫ್ಟ್ ಮನಿ ಹೆಸರಿನ ಆಂಧ್ರದ ಹಣ ಬಳಕೆಯಾಗುತ್ತಿದ್ದು, ದೊಡ್ಡ ಪ್ರಮಾಣದ ಭೂಪರಿವರ್ತನೆ ಮತ್ತು ಭೂವಿಲೇವಾರಿಯಾಗುತ್ತಿದೆ ಎಂದು ಆರೋಪಿಸಿದರು.
ಪವಿತ್ರ ಕೊಡವ ಲ್ಯಾಂಡ್ ನಲ್ಲಿ ನಿತ್ಯ ಪ್ರವಾಸಿಗರಮೋಜು ಮಸ್ತಿ, ದೌರ್ಜನ್ಯ ನಡೆಯುತ್ತಿದೆ. ಆದಾಯ ಕ್ರೋಢಿಕರಣಕ್ಕಾಗಿ ಸರ್ಕಾರ ಪ್ರವಾಸೋದ್ಯಮದ ಹೆಸರಿನಲ್ಲಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಂತಹ ಪ್ರಕೃತಿಗೆ ವಿರುದ್ಧವಾದ ಪ್ರಕ್ರಿಯೆಗಳಿಗೆ ಅವಕಾಶ ಹಾಗೂ ಅನುಕೂಲ ಕಲ್ಪಿಸುತ್ತಿದೆ. ಇದರ ಪರಿಣಾಮ ಪ್ರವಾಸಿಗರಿಂದಾಗಿ ಮೂಲನಿವಾಸಿಗಳಿಗೆ ರಕ್ಷಣೆ ಮತ್ತು ನೆಮ್ಮದಿ ಇಲ್ಲದಾಗಿದೆ. ಪ್ರವಾಸಿಗರ ದೌರ್ಜನ್ಯಕ್ಕೆ ಸಂಬಪಟ್ಟ ಇಲಾಖೆಗಳು ಕಡಿವಾಣ ಹಾಕಬೇಕು. ತಪ್ಪಿದಲ್ಲಿ ಸ್ಥಳೀಯರಿಗೆ ಉಳಿಗಾಲವಿಲ್ಲದಂತ್ತಾಗುತ್ತದೆ ಎಂದು ನಾಚಪ್ಪ ಆರೋಪಿಸಿದರು.
ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮೂಲಕ ರೆಸಾಟ್ರ್ಗಳು, ದೈತ್ಯಾಕಾರದ ವಿಲ್ಲಾಗಳು, ಲೇಔಟ್ ಗಳು, ಮನೆಗಳು ಟೌನ್ ಶಿಪ್ ಗಳು, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಸೇರಿದಂತೆ ವಾಣಜ್ಯ ಉದ್ದೇಶದ ಯೋಜನೆಗಳು ತಯಾರಾಗುತ್ತಿದೆ. ಇದು ಪವಿತ್ರ ಕೊಡವ ಲ್ಯಾಂಡ್ ನ ನಾಶಕ್ಕೆ ಕಾರಣವಾಗಬಹುದು.
ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಕಾಫಿ ತೋಟವನ್ನು ಸಂಪೂರ್ಣವಾಗಿ ಖರೀದಿಸಿ ನಿವೇಶನಗಳನ್ನಾಗಿ ಮಾರಾಟ ಮಾಡಿದ ನಂತರ ಭೂಪರಿರ್ತನೆಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಇಡೀ ಕಾಫಿ ತೋಟದ ಭೂಪರಿವರ್ತನೆಗೆ ಮುಂದಾದರೆ ಕಾನೂನಿನ ಅಡ್ಡಿ ಮಾತ್ರವಲ್ಲ ಹೋರಾಟಗಳು ನಡೆಯುತ್ತವೆ ಎನ್ನುವ ಆತಂಕ ಭೂಮಾಪಿಯಾಗಳಿಗಿದೆ.
ಬೃಹತ್ ರೆಸಾರ್ಟ್ಗಳ ನಿರ್ಮಾಣದಿಂದ ವ್ಯವಹಾರ ಕುಸಿದರೂ ಕಪ್ಪು ಹಣವನ್ನು ಬಿಳಿ ಮಾಡುವುದಕ್ಕಾಗಿ ಇದನ್ನು ಬಳಸುವ ಹುನ್ನಾರವಿದೆ.
ಸೂರ್ಲಬ್ಬಿ ಮತ್ತು ಅರೆಕಾಡು ಭಾಗದಲ್ಲಿ ತಲಾ 300 ಎಕರೆ ಭೂಮಿ ಭೂಪರಿವರ್ತನೆಯಾಗಿ ಟೌನ್ ಶಿಪ್ ಗಳ ನಿರ್ಮಾಣಕ್ಕೆ ಸಜ್ಜಾಗುತ್ತಿದೆ ಎಂದು ಆರೋಪಿಸಿದರು.
ಸರ್ಕಾರಗಳು ಡಾ.ಸ್ವಾಮಿನಾಥನ್ ಸಮಿತಿಯ ವರದಿಯನ್ನು ಉಲ್ಲಂಘಿಸಿವೆ. ಸ್ವಾಮಿನಾಥನ್ ತಮ್ಮ ವರದಿಯಲ್ಲಿ ಕೃಷಿಭೂಮಿಯನ್ನು ಹಾಗೆಯೇ ಉಳಿಸಿಕೊಳ್ಳಲು ಶಿಫಾರಸ್ಸು ಮಾಡಿದ್ದಾರೆ. ಲಭ್ಯವಿರುವ ಕೃಷಿಭೂಮಿಯ ಪ್ರಮಾಣ ಕಡಿಮೆಯಾದಂತೆ ಗ್ರಾಹಕರಿಗೆ ಲಭ್ಯವಿರುವ ಆಹಾರದ ಗುಣಮಟ್ಟ ಕಡಿಮೆಯಾಗುತ್ತದೆ. ಇದು ಆರ್ಥಿಕತೆಗೆ ಮಾತ್ರವಲ್ಲದೆ ಆರೋಗ್ಯದ ಮೇಲೆ ಹಾನಿ ಮಾಡುತ್ತದೆ. ಆರ್ಟಿಕಲ್ 51(ಎ), 51ಎ (ಎಫ್) – ನಮ್ಮ ಸಂಸ್ಕøತಿಯ ಶ್ರೀಮಂತ ಪರಂಪರೆಯನ್ನು ಮೌಲ್ಯೀಕರಿಸಲು ಮತ್ತು ಸಂರಕ್ಷಿಸಲು, 51ಎ(ಜಿ)-ಕಾಡುಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳನ್ನು ಒಳಗೊಂಡಂತೆ ನೈಸರ್ಗಿಕ ಆರ್ಥಿಕತೆಯನ್ನು ಮೌಲ್ಯೀಕರಿಸಲು, ರಕ್ಷಿಸಲು, ಸುಧಾರಿಸಲು ಮತ್ತು ಜೀವಂತ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಲು, 51ಎ(ಎನ್)-ವೈಜ್ಞಾನಿಕ ಮನೋಭಾವ, ಮಾನವತಾವಾದ, ವಿಚಾರಣೆ ಮತ್ತು ಸುಧಾರಣೆಯ ಮನೋಭಾವವನ್ನು ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ.
ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ 79ಎ ಮತ್ತು 79ಬಿಯನ್ನು ದುರ್ಲಾಭಪಡಿಸಿಕೊಂಡು ಕೃಷಿ ಜಮೀನು, ಭತ್ತದ ಗದ್ದೆಗಳು ಮತ್ತು ಕಾಫಿ ತೋಟಗಳನ್ನು ಪರಿವರ್ತನೆ ಮಾಡಲಾಗುತ್ತಿದೆ. ಕುಟ್ಟ-ಶ್ರೀಮಂಗಲದಲ್ಲಿ ಉದ್ದೇಶಿತ ಪಟ್ಟಣಗಳು ಮತ್ತು ಆರ್ಥಿಕ ಕಾರಿಡಾರ್ಗಳಿಗಾಗಿ ಭೂಮಿಯನ್ನು ಜೂಜಾಟದ ರೀತಿಯಲ್ಲಿ ಖರೀದಿಸಲಾಗುತ್ತಿದೆ. ಕೊಡಗಿನಲ್ಲಿ ಭೂಪರಿವರ್ತನೆ ಮಾಡುವುದಿಲ್ಲವೆಂದು ಹೇಳುತಲೇ ಒಂದೇ ಸರ್ವೆ ನಂಬರ್ ಬಳಸಿ ಹಲವರಿಗೆ ಭೂದಾಖಲಾತಿ ಮಾಡಿರುವ ಉದಾರಣೆಗಳಿವೆಂದು ಆರೋಪಿಸಿದರು.
ಬೆಂಗಳೂರು, ತಿರುವನಂತಪುರ, ಚೆನ್ನೈ, ಹೈದರಬಾದ್ ಸೇರಿದಂತೆ ದೇಶದ ವಿವಿಧೆಡೆಯ ಭೂಮಾಫಿಯ ಮತ್ತು ರಾಜಕೀಯ ಸಂಯೋಜಿತ ಗುಂಪುಗಳು ಈ ಕಾರ್ಯದಲ್ಲಿ ತೊಡಗಿವೆ. ಶ್ರೀಮಂಗಲ ಮತ್ತು ಕುಟ್ಟ ಭಾಗದಲ್ಲಿ ಗಡಿ ಜಿಲ್ಲೆ ಹಾಗೂ ಗಡಿರಾಜ್ಯದ ಮತಬ್ಯಾಂಕ್ ಗಳನ್ನು ಸೆಳೆಯುವ ದೊಡ್ಡ ಷಡ್ಯಂತ್ರವೂ ನಡೆಯುತ್ತಿದೆ ಎಂದು ನಾಚಪ್ಪ ಆರೋಪಿಸಿದರು.
ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್ಟಿ ಟ್ಯಾಗ್ ನೀಡುವುದು ಅಗತ್ಯವೆಂದು ತಿಳಿಸಿದರು.
ನಮ್ಮ ಅನುವಂಶಿಕ ಭೂಮಿಯನ್ನು ಉಳಿಸಿಕೊಳ್ಳಲು, ಮಾತೃಭೂಮಿ, ಶಾಶ್ವತವಾದ ದೀರ್ಘಕಾಲಿಕ ಜಲಸಂಪನ್ಮೂಲಗಳು, ನಯನ ಮನೋಹರ ಪರಿಸರ, ಭೂಗೋಳವನ್ನು ನೈಸರ್ಗಿಕವಾಗಿ ವಿಹಂಗಮ ಪರ್ವತಗಳು, ಬೆಟ್ಟಗಳು, ನಿತ್ಯಹರಿದ್ವರ್ಣದ ಸಸ್ಯ ಮತ್ತು ಪ್ರಾಣಿ ಸಂಕುಲಗಳು ಜೈವಿಕ ವೈವಿಧ್ಯತೆ, ಕೊಡವ ಬುಡಕಟ್ಟು ಜನಾಂಗದ ಶ್ರೀಮಂತ ಜಾನಪದ ಪರಂಪರೆ ಮತ್ತು ಭೂಮಿಯೊಂದಿಗೆ ಬೆಸೆದುಕೊಂಡಿರುವ ಕೊಡವರ ಯೋಧರ ಪರಂಪರೆಯನ್ನು ಉಳಿಸಿಕೊಳ್ಳಬೇಕಾಗಿದೆ. ಈ ಮಣ್ಣಿನಲ್ಲಿ ನಮ್ಮ ಐತಿಹಾಸಿಕ ನಿರಂತರತೆಗಾಗಿ ಸ್ವಯಂ-ಆಡಳಿತವನ್ನು ಸಂವಿಧಾನದ ವಿಧಿ 244, 371 ಆರ್/ಡಬ್ಲ್ಯೂ 6 ಮತ್ತು 8ನೇ ಶೆಡ್ಯೂಲ್ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯ ಹಕ್ಕುಗಳು ವಿಶ್ವರಾಷ್ಟ್ರ ಸಂಸ್ಥೆ ಹೊರಡಿಸಿರುವ ಆದಿಮಸಂಜಾತ ಜನಾಂಗದ ಹಕ್ಕುಗಳ ಅಂತರಾಷ್ಟ್ರೀಯ ಕಾನೂನಿನಂತೆ ಜಾರಿಯಾಗುವ ಅಗತ್ಯವಿದೆ ಎಂದರು.
ಇದಕ್ಕಾಗಿ ವ್ಯಾಪಕ ಜನಜಾಗೃತಿ ಅಗತ್ಯವಾಗಿದ್ದು, ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು. ಜು.24 ರಂದು ವಿರಾಜಪೇಟೆ, ಜು.29 ರಂದು ಟಿ.ಶೆಟ್ಟಿಗೇರಿ ಮತ್ತು ಆ.10 ರಂದು ಮಾದಾಪುರದಲ್ಲಿ ಮಾನವಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ನಾಚಪ್ಪ ಇದೇ ಸಂದರ್ಭ ತಿಳಿಸಿದರು.
ಚೇಂದಿರ ಶೈಲಾ, ಮುದ್ದಿಯಡ ಲೀಲಾವತಿ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಮತ್ರಂಡ ಬೋಜಮ್ಮ, ಮಾಚಿಮಾಡ ಲವ್ಲಿ, ಮಾಣಿಪಂಡ ರತಿ, ಮಲ್ಚಿರ ಕವಿತಾ, ಕಾಯಮಾಡ ಕಮಲ, ಕೇಚೆಟ್ಟಿರ ಕಾಮುನಿ, ಕಾಳಮಂಡ ನಯನ, ಕಾಳಮಂಡ ಕಲ್ಪಕ್, ಮಲ್ಚಿರ ಪ್ರತೀಮ, ಬೊಳ್ಳಮ್ಮ, ಸುಳ್ಳಿಮಾಡ ವಿನು, ಆಲೆಮಾಡ ರೋಶನ್, ಆಲೆಮಾಡ ನವೀನ, ಮತ್ರಂಡ ನವೀನ್, ಮುದ್ದಿಯಡ ಕಿರಣ್, ಗಾಂಡಂಗಡ ಕೌಶಿಕ್, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕೊಳ್ಳಿಮಾಡ ಸೋಮಯ್ಯ, ಕೊಳ್ಳಿಮಾಡ ಚಿಪ್ಪಿ ಕಾರ್ಯಪ್ಪ, ಕೊಟ್ಟುಕತ್ತೀರ ಸೋಮಣ್ಣ, ನೆರೆಯಮಂಡ ಸುಬ್ರಮಣಿ, ಕೋದೆಂಗಡ ವಿಠಲ್, ಮತ್ರಂಡ ರಾಜೇಂದ್ರ, ಕಾಕಮಾಡ ದಿಕ್ಷೀತ್, ಬಾಚಮಾಡ ಬೊಳ್ಳಿಯಪ್ಪ, ನೂರೇರ ಸುಗಂಧ, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶರೀನ್, ಅಪ್ಪೆಂಗಡ ಮಾಲೆ, ಕಾಂಡೇರ ಸುರೇಶ್, ಅಜ್ಜಿಕುಟ್ಟೀರ ಲೋಕೇಶ್, ಜಮ್ಮಡ ಮೋಹನ್, ಮದ್ರೀರ ಕರುಂಬಯ್ಯ, ಮೂಕೊಂಡ ದಿಲೀಪ್, ಕಾಯಮಾಡ ಮಧು, ಅಡ್ಡಂಡ ಕುಶಾಲಪ್ಪ, ಗಾಂಡಂಗಡ ಉಮೇಶ್, ಮುದ್ದಿಯಡ ಮುದ್ದಪ್ಪ, ಚಿನ್ನಮಾಡ ಪೂವಯ್ಯ, ಮಲ್ಲಂಡ ರಾಜ ಸುಬ್ಬಯ್ಯ, ಮಾಣಿಪಂಡ ಉಮೇಶ್, ಕಾಲಮಂಡ ಜಗತ್, ಸುಳ್ಳಿಮಾಡ ರಾಜ, ಸುಳ್ಳಿಮಾಡ ಕಾರ್ತಿಕ್, ಕಾಕಮಾಡ ಮುದ್ದಪ್ಪ, ಅಜ್ಜಿಕುಟ್ಟೀರ ಮೊಣ್ಣಪ್ಪ, ಚೇಂದಿರ ಬೋಪಣ್ಣ, ಕೇಚೆಟ್ಟಿರ ತಮ್ಮಯ್ಯ, ಪೆಮ್ಮಂಡ ಅಯ್ಯಪ್ಪ, ಕೋಳೇರ ಉಪೇಂದ್ರ, ಮತ್ರಂಡ ಲಾಲ, ವಲ್ಲಂಡ ಶಂಭು, ಅಜ್ಜಿಕುಟ್ಟೀರ ಅರುಣ, ಮತ್ರಂಡ ದಿನೇಶ್, ಮುಕ್ಕಾಟಿರ ಪೊನ್ನಪ್ಪ, ಮಲ್ಲಂಡ ನರೇಶ್, ಆಲೆಮಾಡ ಸನ್ನು, ಆಲೆಮಾಡ ಪ್ರಕಾಶ್, ಚೀರಂಡ ಚಂಗಪ್ಪ, ಮುದ್ದಿಯಡ ಪ್ರಕಾಶ್, ಮುದ್ದಿಯಡ ಕಿರಣ್, ಸುಳ್ಳಿಮಾಡ ಪ್ರಭು, ಸುಳ್ಳಿಮಾಡ ಪ್ರಧಾನ್, ಚೇಂದಿರ ಅಪ್ಪಯ್ಯ, ಮೂಕಳೇರ ಲಕ್ಷ್ಮಣ, ಕಳ್ಳಿಚಂಡ ಸೋಮಣ್ಣ, ಅದೇಂಗಡ ವಿಶ್ವನಾಥ್, ಚೋಡುಮಾಡ ಮನು, ಕೊಟ್ರಂಗಡ ಪ್ರಕಾಶ್, ಮತ್ರಂಡ ನಾಚಪ್ಪ, ಮುದ್ದಿಯಡ ಬಿದ್ದಪ್ಪ, ಮದ್ರಿರ ನಂದಾ, ಮೊಕಳೆಮಾಡ ಉತ್ತಯ್ಯ, ಆಲೆಮಾಡ ಬೋಪಯ್ಯ, ಚಂಗಣಮಾಡ ಮೊಣ್ಣಪ್ಪ, ಮಲ್ಲಂಡ ಜಯ, ಹೊಟ್ಟೆಂಗಡ ಕಾವೇರಪ್ಪ, ಕೊಣೇರಿರ ಧನು, ಮೆಚಮಾಡ ಪೊನ್ನಪ್ಪ, ಬೊವ್ವೇರಿಯಂಡ ಮೊಣ್ಣಪ್ಪ, ಕಟ್ಟೆಂಗಡ ಪ್ರಶಾಂತ್, ಸುಳ್ಳಿಮಾಡ ಆರ್ಯ ಮತ್ತಿತರರು ಮಾನವ ಸರಪಳಿಯಲ್ಲಿ ಪಾಲ್ಗೊಂಡು ಬೃಹತ್ ಭೂಪರಿವರ್ತನೆ, ಭೂವಿಲೇವಾರಿ ವಿರುದ್ಧ ಮತ್ತು ಕೊಡವ ಲ್ಯಾಂಡ್ ಪರ ಪ್ರತಿಜ್ಞಾವಿಧಿ ಸ್ವೀಕರಿಸಿದರು.