ಮಡಿಕೇರಿ ಜು.16 NEWS DESK : ಅಂತರಾಷ್ಟ್ರೀಯ ಗುಣಮಟ್ಟದ ಬೆಂಗಳೂರಿನ ಹೃದಯ ಭಾಗದಲ್ಲಿರುವ, ಐದು ದಶಕಗಳ ಕಾಲ ಬಹಳಷ್ಟು ಆಟಗಾರರಿಗೆ ಜೀವನ ರೂಪಿಸಿ ಕೊಟ್ಟಂತಹ ಸುಲ್ಲಿವನ್ ಹಾಕಿ ಮೈದಾನವನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದ ಮಹಾನ್ ವ್ಯಕ್ತಿ K.S.R.P ಯ ಕಮಾಂಡೆಂಟ್ ಕಂಜಿತಂಡ ಮುತ್ತಪ್ಪ ಈಗ ನೆನಪು ಮಾತ್ರ.
ಕಂಜಿತಂಡ ಕಾರ್ಯಪ್ಪ ಹಾಗೂ ದೇಚಮ್ಮ (ತಾಮನೆ ಕೊಡಂದೇರ) ದಂಪತಿಯರ ಪುತ್ರನಾಗಿ ಕಂಜಿತಂಡ ಮುತ್ತಪ್ಪ (ರಾಮು)ಅವರು 12/04/1931 ರಂದು ದೇವರಪುರದಲ್ಲಿ ಜನಿಸಿದರು.
ಮುತ್ತಪ್ಪ ಅವರು ವಿದ್ಯಾಭ್ಯಾಸವನ್ನು ಪೊನ್ನಂಪೇಟೆಯ ಸರ್ಕಾರಿ ಶಾಲೆಯಲ್ಲಿ ಮುಗಿಸಿ, ತಮ್ಮ 18ನೇ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿದರು. 1951 ರಲ್ಲಿ ಎಚ್.ಎಸ್.ಆರ್.ಪಿ (ಹೈದರಾಬಾದ್ ರಾಜ್ಯ ಮೀಸಲು ಪೊಲೀಸ್)ಯ ಪೊಲೀಸ್ ಆಗಿ ಭರ್ತಿ ಹೊಂದಿದರು. ಇದು ನಂತರದ ದಿನಗಳಲ್ಲಿ ಎಂ.ಎಸ್.ಆರ್.ಪಿ(ಮೈಸೂರು ರಾಜ್ಯ ಮೀಸಲು ಪೊಲೀಸ್) ಯೊಂದಿಗೆ ವಿಲೀನಗೊಂಡಿತು. ಇವರು 1964ರಲ್ಲಿ ಇನ್ಸ್ಪೆಕ್ಟರ್ ಆಗಿ ಬಡ್ತಿ ಹೊಂದಿದರು. 1977ರಲ್ಲಿ ಕೆ.ಎಸ್.ಆರ್.ಪಿ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್)ಯ ಅಸಿಸ್ಟೆಂಟ್ ಕಮಾಂಡೆಂಟ್ ಹಾಗೂ 1982 ರಲ್ಲಿ ಕಮಾಂಡೆಂಟ್ ಆಗಿ ಬಡ್ತಿ ಹೊಂದಿದರು. ಕೆ.ಎಸ್.ಆರ್.ಪಿ ಯ ಕಮಾಂಡೆಂಟ್ ಹುದ್ದೆಯು ಪೊಲೀಸ್ ಅಧೀಕ್ಷಕರ ಸ್ಥಾನಕ್ಕೆ ಸಮನಾಗಿರುತ್ತದೆ. ಇವರು ತಮ್ಮ ಸುದೀರ್ಘ ಸೇವೆಯ ನಂತರ 1989 ರಲ್ಲಿ ನಿವೃತ್ತಿ ಪಡೆದರು.
E.H.ಸುಲ್ಲಿವನ್ 1941 – 43 ಬ್ರಿಟಿಷರ ಕಾಲದಲ್ಲಿ 1941ರಲ್ಲಿ E.H.ಸುಲ್ಲಿವನ್ ಎಂಬ ಬ್ರಿಟಿಷ್ ಪೊಲೀಸ್ ಅಧಿಕಾರಿ ಹಾಗು ಅದ್ಭುತ ಹಾಕಿ ಆಟಗಾರ ಇವರು ಮೈಸೂರು ಹಾಕಿ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದ್ದರಿಂದ ಈ ಮೈದಾನಕ್ಕೆ ಸುಲ್ಲಿವನ್ ಅಥವಾ ಸುಲೈವನ್ ಮೈದಾನ ಎಂಬ ಹೆಸರು ಬಂತು. ಆಗ ಬಹಳಷ್ಟು ಆಂಗ್ಲೋ ಇಂಡಿಯನ್ ಆಟಗಾರರು ಹೊರ ಹೊಮ್ಮಿದರು. ಇದರಲ್ಲಿ ಮ್ಯಾಕ್ ಬ್ರೈಡ್ ಕೂಡ ಒಬ್ಬರು. 1973 ರಲ್ಲಿ ರೆನ್ನಿ ಫ್ರಾಂಕ್ ಆಲ್ ಇಂಡಿಯಾ ಟೂರ್ನಮೆಂಟ್ ನಡೆಯಿತು. ಅಲ್ಲದೆ ಇಲ್ಲಿ ಹೆಸರಾಂತ ಪಂದ್ಯಾವಳಿಗಳಾದ ರಂಗಸ್ವಾಮಿ ಕಪ್ ಕೂಡ ನಡೆಯಿತು. ಈ ಗುಣಮಟ್ಟದ ಮೈದಾನವನ್ನು ವೀಕ್ಷಿಸಿದ ಅಂದಿನ F.I.H ನ ಸದಸ್ಯರಾದ ಡೌಗ್ಲಾಸ್ ಬ್ರೂಸ್ ಮುತ್ತಪ್ಪ ಅವರ ಕಾರ್ಯವೈಕರಿಯನ್ನು ಶ್ಲಾಗಿಸಿದ್ದರು. ಲೀಗ್ ಪಂದ್ಯಾವಳಿಗಳು, ಕ್ಲಾರ್ಕ್ ಟ್ರೋಫಿ, I.T.C, ಐಸಾಕ್ ಮೆಮೋರಿಯಲ್ ಹಾಗು ಮಹಾರಾಜ ಗೋಲ್ಡ್ ಕಪ್ ಮುಂತಾದ ಪಂದ್ಯಾವಳಿಗಳು ನಡೆದವು.
ಕೆ.ಎಸ್.ಆರ್.ಪಿ ಹಾಕಿ ತಂಡ :: ಮುತ್ತಪ್ಪನವರ ಗರಡಿಯಲ್ಲಿ ಪಳಗಿದ ಹಾಕಿ ತಂಡವು ಬಹಳಷ್ಟು ಬಲಿಷ್ಠವಾಗಿತ್ತು. ಹೆಸರಾಂತ ರಾಷ್ಟ್ರೀಯ ಆಟಗಾರ ಕೋಣೇರೀರ ಪೊನ್ನಪ್ಪ, ಅಂತರಾಷ್ಟ್ರೀಯ ಆಟಗಾರ ಬೋವೇರಂಡ ಕುಟ್ಟಪ್ಪ, ಅದ್ಭುತ ಗೋಲ್ ಕೀಪರ್ ಬಲ್ಟಿಕಾಳಂಡ ರಘು ಅಲ್ಲದೆ ಮೂರ್ನಾಡಿನ ಕುಟ್ಟ, ಸರ್ದಾರ್,ಕುಶಾಲಪ್ಪ, ಗೋಲ್ ಕೀಪರ್ ಕುಟ್ಟಪ್ಪ ಹಾಗೂ ದೇವಯ್ಯ ಇಂತಹ ಒಳ್ಳೆಯ ಆಟಗಾರರನ್ನು ಒಳಗೊಂಡಿದ್ದ ಈ ತಂಡವು ಬಹಳಷ್ಟು ಪಂದ್ಯಾವಳಿಗಳನ್ನು ಗೆದ್ದವು.
ಸುಲ್ಲಿವನ್ ಮೈದಾನದ ವಿಶೇಷತೆ :: 70-80ರ ದಶಕದಲ್ಲಿ ಹಾಕಿ ಪ್ರಿಯರು ಈ ಮೈದಾನದಲ್ಲಿ ಪಂದ್ಯವನ್ನು ನೋಡಲು ಎಂ.ಜಿ ರಸ್ತೆ ಹಾಗು ಬ್ರಿಗೇಡ್ ರಸ್ತೆಯ ಮೂಲಕ ಹಾದು ಬಂದು ಸುಲ್ಲಿವನ್ ಮೈದಾನಕ್ಕೆ ಸೇರುವುದು ಒಂದು ಅದ್ಭುತ ಕ್ಷಣ. ಮೈದಾನದದ ಸುತ್ತ ತಡೆಗೋಡೆ, ಹಿಂಬದಿಯಲ್ಲಿ ವಿಶಾಲವಾದ ಮರಗಳು, ಅಲ್ಲಿ ಕೂತು ಪಂದ್ಯಾವಳಿ ವೀಕ್ಷಿಸುವುದೇ ಒಂದು ಮರೆಯಲಾಗದ ಅನುಭವ.
ಕೂರ್ಗ್ – 11 :: ಕೊಡಗಿನಿಂದ ಮೈದಾನದತ್ತ ಅಂದೊಂದು ದಿನ ಕೂರ್ಗ್-11 ತಂಡ ಸೆಮಿ ಫೈನಲ್ಸ್ ಆಡುತ್ತಿತ್ತು. ಯುವ ಆಟಗಾರರು ತಮ್ಮ ಜೀವನ ರೂಪಿಸಿಕೊಂಡು, ಅದ್ಭುತ ಪಂದ್ಯಾವಳಿಯನ್ನು ಆಡಿ ಬೆಂಗಳೂರಿನಲ್ಲಿ ಚರಿತ್ರೆ ನಿರ್ಮಿಸಿದ ಮೈದಾನವಿದು. ಇವರಲ್ಲಿ ಸುಭಾಷ್ ರೈ, ಮನೆಯಪಂಡ ದತ್ತ ಕರುಂಬಯ್ಯ, ನಡಿಕೇರಿಯಂಡ ದಿಲೀಪ್, ಕನ್ನಂಬೀರ ಚಿನ್ನು, ಇಟ್ಟೀರ ಕುಟ್ಟಪ್ಪ, ಪಟ್ಟಡ ವಿಜಿನ್, ಕುಪ್ಪಂಡ ನಾಚಪ್ಪ, ಕೊಡಂದೇರ ತಿಮ್ಮು, ಜಮ್ಮಡ ಭೀಮಯ್ಯ, ಕಲಿಯಂಡ ಮಧು, ಬುಟ್ಟಿಯಂಡ ಚಿಣ್ಣಪ್ಪ, ಬೆಳ್ಳಿಯಪ್ಪ, ದಿವಾಕರ್, ಮತ್ತು ದಯಾನಂದ್. ಇದನ್ನು ವೀಕ್ಷಿಸಲು ಹಾಕಿ ಪ್ರಿಯ ರಾಜು ಎಂಬ ಕೆ.ಎಸ್.ಆರ್.ಟಿ.ಸಿ ಚಾಲಕನ ಬಸ್ಸಿನಲ್ಲಿ ಬಹಳಷ್ಟು ಜನರು ಹಾಕಿ ಪಂದ್ಯಾವಳಿ ವೀಕ್ಷಿಸಲು ಕೊಡಗಿನಿಂದ ಬರುತ್ತಿದ್ದರು. ಪಂದ್ಯಾವಳಿ ಮುಗಿದ ನಂತರ ಜೈಕಾರ ಹಾಕುತ್ತಾ ಹಿಂದಿರುಗುತ್ತಿದ್ದರು. ಇದೆಲ್ಲಾ ಮರೆಯಲಾಗದ ಕ್ಷಣಗಳು.
ಒಮ್ಮೆ ಸೆಮಿ ಫೈನಲ್ ಟಾಟ ಬಾಂಬೆ ಹಾಗು ಆರ್ಮಿ-11 ನಡುವೆ ನಡೆಯಿತು. ಟೈ ಬ್ರೇಕರ್ ನ ಪೆನಾಲ್ಟಿ ಪುಷ್ ನಲ್ಲಿ ಟಾಟ ಬಾಂಬೆಯ ಗೋಲ್ ಕೀಪರ್ ಒಲಂಪಿಯೋ ಫರ್ನಾಂಡಿಸ್ 5 ಗೋಲುಗಳನ್ನು ಅದ್ಭುತವಾಗಿ ಬಚಾವು ಮಾಡಿದರು. ಇದು ಅಂದಿನ ಎಲ್ಲರ ಮನೆ ಮಾತಾಗಿತ್ತು.
ಅಂತರಾಷ್ಟ್ರೀಯ ತೀರ್ಪುಗಾರರು, ಅಂತಾರಾಷ್ಟ್ರೀಯ ಆಟಗಾರರು, ಅದ್ಭುತ ಗೋಲುಗಳು ಹಾಗೂ ರಕ್ಷಣಾತ್ಮಕ ಆಟಗಳು, ಹೀಗೆ ಅಂತಾರಾಷ್ಟ್ರೀಯ ಹಾಕಿ ಪಂದ್ಯಾಟದಲ್ಲಿ ನಡೆಯುವ ಎಲ್ಲಾ ಚಮತ್ಕಾರಗಳು ಈ ಮೈದಾನದಲ್ಲಿ ನಡೆದಿವೆ.
ಹಾಕಿಯ ಆಧಾರ ಸ್ತಂಭ :: ಕೊಡಗಿನ ಆಟಗಾರರಿಗೆ ಅಂದು ಬೆನ್ನೆಲುಬಾಗಿ ನಿಂತವರು ಕಂಜಿತಂಡ ಮುತ್ತಪ್ಪ, ಮಾಲೆಟ್ಟೀರ ಶರಿ ಬೆಳ್ಳಿಯಪ್ಪ ಹಾಗು ಚಾರಿಮಂಡ ತಾರಾ ಸೋಮಯ್ಯ ಇವರ ಸೇವೆ ಮರೆಯಲಾಗದು.
ಕರ್ನಾಟಕ ಹಾಕಿ ಸಂಸ್ಥೆಯು ಸುಲೈವನ್ ಮೈದಾನದಿಂದ 1990ರಲ್ಲಿ ಈಗಿನ ಹಕ್ಕಿ ತಿಮ್ಮನ ಹಳ್ಳಿ”ಶಾಂತಿನಗರ”ಕ್ಕೆ ವರ್ಗಾವಣೆ ಆದ ನಂತರ ಈ ಮೈದಾನದಲ್ಲಿ ಪಂದ್ಯಾವಳಿಗಳನ್ನು ಆಡುವುದು ಕ್ಷೀಣಿಸತೊಡಗಿದವು.
ಮುತ್ತಪ್ಪನವರು ಕೆ.ಎಸ್.ಎಚ್.ಎ ಯ ಉಪಾಧ್ಯಕ್ಷರಾಗಿ, ಆಯ್ಕೆದಾರರಾಗಿ, ವ್ಯವಸ್ಥಾಪಕರಾಗಿ 15 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದರು. ಮುತ್ತಪ್ಪನವರು ಸೇವೆಯಲ್ಲಿರುವವರೆಗೂ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಹಾಕಿ ತಂಡವು ಎಲ್ಲಾ ಪಂದ್ಯಾವಳಿಗಳನ್ನು ಗೆದ್ದು ಗರ್ಜಿಸುತ್ತಿತ್ತು. ಹಲವಾರು ಕಲಾತ್ಮಕ ಆಟಗಾರರನ್ನೂ ಸೃಷ್ಟಿಸಿತು. ಇದೆಲ್ಲವೂ ಇಂದು ಕೇವಲ ನೆನಪುಗಳಷ್ಟೇ……
ಕಂಜಿತಂಡ ಮುತ್ತಪ್ಪನವರು 07/07/2018 ರಂದು ತಮ್ಮ ಪತ್ನಿ ಗಂಗಮ್ಮ(ತಾಮನೆ ಮಾತಂಡ), ಮಗ ಮಾದಪ್ಪ(ಜೀಸು), ಸೊಸೆ ಸವಿತಾ(ತಾಮನೆ ಅಜ್ಜನಿಕಂಡ), ಮೊಮ್ಮಗಳು ನಿಧಿ ಹಾಗು ಮಗಳು ಜ್ಯೋತಿ ಅವರನ್ನು ಬಿಟ್ಟು ಬಾರದ ಲೋಕಕ್ಕೆ ಅಗಲಿದರು. ಅಂದು ಕೆ.ಎಸ್.ಆರ್.ಪಿ ಯ ಆವರಣದಲ್ಲಿ ಕಾರ್ಮೋಡ ಕವಿದಿತ್ತು. ಇತ್ತ ಮಳೆರಾಯನ ಆರ್ಭಟ ಜೋರಾಗಿತ್ತು, ಮುತ್ತಪ್ಪನವರ ದಂತಕಥೆಗೆ ಅಂತಿಮ ದಿನವಾಗಿತ್ತು.
ಸುಲ್ಲಿವನ್ ಮೈದಾನಕ್ಕೆ ಆಸ್ಟ್ರೋ ಟರ್ಫ್
ಈ ಮೈದಾನಕ್ಕೆ ಅಸ್ಟ್ರೋ ಟರ್ಫನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು ಇದರ ಘತ ವೈಭವ ಮರುಕಳಿಸಲಿದೆ. ಈ ಕಾಲ ಆದಷ್ಟು ಬೇಗ ಕೂಡಿ ಬರಲಿ, ಎಲ್ಲಾ ಆಟಗಾರರು ಒಮ್ಮೆಯಾದರೂ ಬಂದು ಸುಲ್ಲಿವನ್ ಹಾಕಿ ಮೈದಾನದ ಹೊಸ ರೂಪವನ್ನು ನೋಡಲಿ. ಎಂದು ಶುಭ ಹಾರೈಸುತ್ತೇನೆ.
ಕ್ರೀಡಾ ವಿಶ್ಲೇಷಣೆ : ಚೆಪ್ಪುಡೀರ ಕಾರ್ಯಪ್ಪ