ಮಡಿಕೇರಿ ಜು.22 NEWS DESK : ಕ್ರೀಡಾಪಟುಗಳು ಜೀವನದಲ್ಲಿ ಶಿಸ್ತು ಹಾಗೂ ಸಮಯ ಪಾಲನೆಯನ್ನು ಅಳವಡಿಸಿಕೊಂಡರೆ ಮಾತ್ರ ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವೆಂದು ಮಾಜಿ ಅಂತರರಾಷ್ಟ್ರೀಯ ರಗ್ಬಿ ಆಟಗಾರ ಹಾಗೂ ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ಪ್ರಗತಿ ಶಾಲೆಯಲ್ಲಿ ನಡೆದ, ಅಂಡರ್ 14 ಮಿನಿ ಒಲಿಂಪಿಕ್ ಕೊಡಗು ಫುಟ್ಬಾಲ್ ತಂಡಕ್ಕೆ ಆಯ್ಕೆಯಾದ ಬಾಲಕ ಮತ್ತು ಬಾಲಕಿಯರಿಗೆ ಕೌಶಲ್ಯ ತರಬೇತಿ ಮತ್ತು ಫಿಟ್ನೆಸ್ ತರಬೇತಿ ನೀಡಿ ಅವರು ಮಾತನಾಡಿದರು.
ಕ್ರೀಡಾ ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಮುಖ್ಯವಾಗಿ ಕ್ರೀಡಾಪಟುಗಳು ಶಿಸ್ತು ಮತ್ತು ಸಮಯ ಪಾಲನೆ ಕಡ್ಡಾಯವಾಗಿ ಪಾಲಿಸಬೇಕು.
ನಿರಂತರವಾಗಿ ಫಿಟ್ನೆಸ್ ಮುಂದುವರಿಸಿದರೆ ಮಾತ್ರ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯ.
ತರಬೇತಿ ನೀಡುವ ವೇಳೆಯಲ್ಲಿ ಕ್ರೀಡಾಪಟುಗಳು ಸರಿಯಾದ ಸಮಯಕ್ಕೆ ಆಗಮಿಸಬೇಕು.
ಅದಲ್ಲದೇ ತಮ್ಮ ಕೋಚ್ ನೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಂಡರೆ ಮಾತ್ರ ಉತ್ತಮ ಕ್ರೀಡಾಪಟುವಾಗಿ ರೂಪುಗೊಳ್ಳಲು ಸಾಧ್ಯವೆಂದ ಮಾದಂಡ ತಿಮ್ಮಯ್ಯ ನವರು,
ತರಬೇತುದಾರರು ಹೇಳಿಕೊಟ್ಟಿರುವ ಕೌಶಲ್ಯಗಳನ್ನು ಬರೀ ತರಬೇತಿ ವೇಳೆಯಲ್ಲಿ ಮಾತ್ರ ಸೀಮಿತಗೊಳಿಸದೆ, ಮನೆಯಲ್ಲಿ ಕೂಡ ನಾವು ಅಭ್ಯಾಸ ನಡೆಸಬೇಕೆಂದು ಅಭಿಪ್ರಾಯಪಟ್ಟರು.
ಅಂಡರ್ 14 ಮಿನಿ ಒಲಿಂಪಿಕ್ ನಿಮ್ಮ ಕ್ರೀಡಾ ಬದುಕಿನಲ್ಲಿ ಉತ್ತಮ ಸಾಧನೆ ತೋರಲು ಸಿಕ್ಕ ಸುವರ್ಣವಕಾಶವಾಗಿದೆ,ಕೊಡಗು ತಂಡಕ್ಕೆ ಆಯ್ಕೆಯಾಗಿರುವ ಎಲ್ಲಾ ಕ್ರೀಡಾಪಟುಗಳು ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಿ ಕೊಡಗು ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮುವಂತೆ ಮಾಡಬೇಕಾಗಿದೆ ಎಂದು ಮಾಜಿ ಅಂತರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಅಭಿಪ್ರಾಯಪಟ್ಟರು.
ಈ ಸಂದರ್ಭ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕಾರ್ಯದರ್ಶಿ ಪಿ.ಎ ನಾಗೇಶ್(ಈಶ್ವರ್), ಉಪಾಧ್ಯಕ್ಷ ಕ್ರಿಸ್ಟೋಫರ್, ಖಜಾಂಚಿ ದೀಪು ಮಾಚಯ್ಯ, ಎಂ.ಸಿಸಿ ಕ್ಲಬ್ ಕಾರ್ಯದರ್ಶಿ ಉಮೇಶ್ ಇದ್ದರು.