ಕುಶಾಲನಗರ ಜು.23 NEWS DESK : ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘ ಈ ಸಾಲಿನಲ್ಲಿ ರೂ.20 ಲಕ್ಷ 45 ಸಾವಿರ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಎಂ.ಕೆ.ದಿನೇಶ್ ತಿಳಿಸಿದ್ದಾರೆ.
ಅವರು ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಸಂಘವು ಪ್ರಾರಂಭವಾಗಿ 9 ವರ್ಷ ಸಂದಿದೆ. ಪ್ರಾರಂಭದಲ್ಲಿ 762 ಸದಸ್ಯರನ್ನು ಹೊಂದಿದ ಸಂಘ ಇದೀಗ ಎ ತರಗತಿಯ 861 ಸದಸ್ಯರು ಮತ್ತು ಸಿ ಗ್ರೇಡ್ 132 ಸದಸ್ಯರನ್ನು ಹೊಂದಿರುತ್ತದೆ.
ಸಂಘವು ಒಂದು ಕೋಟಿ ಎಪ್ಪತ್ತು ಲಕ್ಷ 77 ಸಾವಿರದ 847 ರು. ಠೇವಣಿ ಹಾಗೂ 50 ಲಕ್ಷ 55 ಸಾವಿರದ 228 ರೂಗಳ ನಿಧಿಗಳನ್ನು ಹೊಂದಿದೆ.
ಒಟ್ಟು 2 ಕೋಟಿ 84 ಲಕ್ಷ ರೂ.15 ಸಾವಿರ ದುಡಿಯುವ ಬಂಡವಾಳ ಇರುತ್ತದೆ ಎಂದು ಮಾಹಿತಿ ನೀಡಿದರು.
ಸದಸ್ಯರ ಬೇಡಿಕೆಗೆ ತಕ್ಕಂತೆ ಜಾಮೀನು ಸಾಲ, ಆಭರಣ ಸಾಲ, ಜಂಟಿ ಬಾಧ್ಯತಾ ಗುಂಪು ಸಾಲ, ಕಂತಿನ ಜಾಮೀನು ಸಾಲ ಹಾಗೂ ಪಿಗ್ಮಿ ಸಾಲಗಳನ್ನು ಸಂಘದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಬಡ್ಡಿಯನ್ನು ಪರಿಷ್ಕರಿಸುತ್ತಾ ಸಾಲ ವಿತರಿಸಲಾಗುತ್ತಿದೆ ಎಂದರು.
ಸಂಘವು ಏ ತರಗತಿಯಲ್ಲಿ ವರ್ಗೀಕರಣ ವಾಗಿದೆ.
ಹಿಂದಿನ ಆಡಳಿತ ಮಂಡಳಿಯ ಸತತ ಪ್ರಯತ್ನದಿಂದ ಲಕ್ಷಾಂತರ ಮೌಲ್ಯದ ನಿವೇಶನವನ್ನು ಸದಸ್ಯರಾದ ಎಂ ಡಿ ನಾಗರಾಜು ಅವರು ಸಂಘಕ್ಕೆ ಉಚಿತವಾಗಿ ನೀಡಿದ್ದಾರೆ. ಈ ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲು ಪ್ರಾರಂಭಿಸಲಾಗಿದೆ. ಎಲ್ಲಾ ಸದಸ್ಯರ ಸಹಕಾರವನ್ನು ಈ ಮೂಲಕ ಕೋರಲಾಗಿದೆ ಎಂದರು.
ವಾರ್ಷಿಕ ಮಹಾಸಭೆ :: ಸಂಘದ 9ನೇ ವಾರ್ಷಿಕ ಮಹಾಸಭೆ ಈ ತಿಂಗಳ 28 ರಂದು ಕುಶಾಲನಗರ ಎಪಿಸಿಎಂಎಸ್ ಸಭಾಂಗಣದಲ್ಲಿ ಬೆಳಗೆ 11 ಗಂಟೆಗೆ ನಡೆಯಲಿದೆ ಎಂದು ದಿನೇಶ್ ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಜಿ.ಬಿ.ಜಗದೀಶ್, ನಿರ್ದೇಶಕರಾದ ಕೆ.ಪಿ.ರಾಜು ,ರವಿಕುಮಾರ್, ರೇಖಾ ಪ್ರಕಾಶ್, ಕಸ್ತೂರಿ ಮಹೇಶ್, ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಕೆ.ಸುನಿತಾ ಇದ್ದರು.