ಮಡಿಕೇರಿ ಜು.24 NEWS DESK : ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕರೊಬ್ಬರು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಶಾಲನಗರ ಸಮೀಪ ಕೊಪ್ಪ ಸೇತುವೆ ಬಳಿ ನಡೆದಿದೆ. ಮಂಡ್ಯ ಮೂಲದ ಅರುಣ (52) ಎಂಬುವವರೇ ಆತ್ಮಹತ್ಯೆಗೆ ಶರಣಾದ ಸರ್ಕಾರಿ ಸಿಬ್ಬಂದಿಯಾಗಿದ್ದು, ಮೃತದೇಹ ಇನ್ನೂ ಕೂಡ ಪತ್ತೆಯಾಗಿಲ್ಲ. ಇಂದು ಮಡಿಕೇರಿಯಲ್ಲಿರುವ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗಿದ್ದ ಅರುಣ ಅವರು ಮಧ್ಯಾಹ್ನದ ನಂತರ ಕೊಪ್ಪಕ್ಕೆ ಬಂದು ಜೀವ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ಮಡಿಕೇರಿಯ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಕುಶಾಲನಗರದಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್, ನುರಿತ ಈಜು ತಜ್ಞರು ಹಾಗೂ ಸ್ಥಳೀಯರು ಕತ್ತಲಾಗುವವರೆಗೆ ಮೃತದೇಹದ ಶೋಧ ಕಾರ್ಯ ನಡೆಸಿದರು. ಅಧಿಕ ಮಳೆಯಿಂದ ನದಿಯಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಮೃತದೇಹ ಪತ್ತೆಯಾಗಿಲ್ಲ. ಗುರುವಾರ ಮತ್ತೆ ಶೋಧ ಕಾರ್ಯ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.