ಮಡಿಕೇರಿ ಜು.31 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರ ಅಧ್ಯಕ್ಷತೆಯಲ್ಲಿ ‘ಸಮಾಗಮ ಸಭೆಗೆ’ ಉತ್ತಮ ಸ್ಪಂದನೆ ದೊರೆಯಿತು.
ನಗರದ ಗಾಂಧಿ ಭವನದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯರು, ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಅರೆಭಾಷೆ ಸಮುದಾಯದ ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ನಿರ್ದೇಶಕರು ಸೇರಿದಂತೆ ಹಲವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ಸುಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಅಕಾಡೆಮಿ ಮೊದಲ ಸಭೆಯಲ್ಲಿ ಅಕಾಡೆಮಿ ಚಟುವಟಿಕೆ ಸಂಬಂಧಿಸಿದಂತೆ ಕಳೆದ ಎರಡು ಅವಧಿಯಲ್ಲಿನ ಫೆಲೋಶಿಪ್‌ನ ಪುಸ್ತಕ ಹೊರತರಲು ಬಾಕಿ ಇದ್ದು, ಮೊದಲ ಸಭೆಯಲ್ಲಿಯೇ ಪುಸ್ತಕ ಹೊರ ತರಲು ನಿರ್ಧರಿಸಿರುವುದು ವಿಶೇಷವಾಗಿದೆ ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ‘ಹಿಂಗಾರ’ ಪುಸ್ತಕವನ್ನು ಹೊರತರಲಾಗುತ್ತಿದ್ದು, ಕಳೆದ 18 ತಿಂಗಳಿ0ದ ಪುಸ್ತಕ ಹೊರತಂದಿಲ್ಲ. ಹಾಗಾಗಿ ‘ಹಿಂಗಾರ ಸಂಯುಕ್ತ ಸಂಚಿಕೆ’ ಹೊರತರಲು ನಿರ್ಧರಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಹಾಗೆಯೇ 2022-2023 ನೇ ಅವಧಿಯ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನವನ್ನು ನೀಡಲು ಮೊದಲ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸದಾನಂದ ಮಾವಜಿ ಹೇಳಿದರು.
ಈಗಾಗಲೇ ಅಕಾಡೆಮಿ ವತಿಯಿಂದ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಹುತಾತ್ಮ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ದಿನವನ್ನು ಸುಳ್ಯದಲ್ಲಿ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
‘ಅರೆಭಾಷೆ ಸಂಸ್ಕೃತಿ, ಸಾಹಿತ್ಯ, ಲೇಖನ, ಕವನ, ನಾಟಕ, ಸಾಕ್ಷ್ಯ ಚಿತ್ರ ಹೀಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸಲು ಅಕಾಡೆಮಿ ನಿರ್ಧರಿಸಿದ್ದು, ಸಾಹಿತ್ಯ, ಸಂಸ್ಕೃತಿ, ಸಂಶೋಧನೆ ಹಾಗೂ ದಾಖಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದರು.
ಕರ್ನಾಟಕ ಹೆಸರು ನಾಮಕರಣವಾಗಿ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ನಾಲ್ಕು ಕಂದಾಯ ವಿಭಾಗದಲ್ಲಿ ಕಾರ್ಯಕ್ರಮ ಆಯೋಜಿಸಲು ಸರ್ಕಾರ ನಿರ್ಧರಿಸಿದ್ದು, ಆ ನಿಟ್ಟಿನಲ್ಲಿ ಮೈಸೂರು ವಿಭಾಗಕ್ಕೆ ಸಂಬ0ಧಿಸಿದ0ತೆ ಮಂಗಳೂರಿನಲ್ಲಿ 5 ಭಾಷಾ ಅಕಾಡೆಮಿಗಳು, ಒಂದು ಯಕ್ಷಗಾನ ಅಕಾಡೆಮಿ ಸೇರಿ ಸೆಪ್ಟೆಂಬರ್ 24 ಮತ್ತು 25 ರಂದು ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಅಕಾಡೆಮಿ ಕಾರ್ಯಚಟುವಟಿಕೆಗಳು ಮತ್ತು ಅಭಿವೃದ್ಧಿಗೆ ಸಂಬ0ಧಿಸಿದ0ತೆ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಅರೆಭಾಷೆ ಸಮುದಾಯದ ವಿವಿಧ ಸಂಘಟನೆಗಳ ನಿರ್ದೇಶಕರು ನೀಡಿರುವ ಸಲಹೆಗೆ ಪೂರಕವಾಗಿ ಕಾರ್ಯಕ್ರಮ ಹಾಗೂ ಪುಸ್ತಕ ಪ್ರಕಟಣೆ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರು ತಿಳಿಸಿದರು.
ಅಕಾಡೆಮಿ ಮಾಜಿ ಅಧ್ಯಕ್ಷರಾದ ಲಕ್ಷ್ಮಿ ನಾರಾಯಣ ಕಜೆಗದ್ದೆ ಅವರು ಮಾತನಾಡಿ ಅರೆಭಾಷೆಗೆ ಸಂಬ0ಧಿಸಿದ0ತೆ ಐಎಸ್‌ಒ ಸ್ಥಾನಮಾನ ಪಡೆಯಲು ಮತ್ತಷ್ಟು ಶ್ರಮಿಸಬೇಕಿದೆ. ಅರೆಭಾಷೆ ಸಾಹಿತ್ಯ ಮತ್ತು ಸಂಶೋಧನೆ ಹಾಗೂ ಪ್ರಕಟಣೆಗೆ ಹೆಚ್ಚಿನ ಒತ್ತು ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.
ಅಕಾಡೆಮಿ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಅವರು ಮಾತನಾಡಿ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯು ಭಾಷಾ ಅಕಾಡೆಮಿಯಾಗಿದ್ದು, ಅರೆಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ನಾಡಿನಾದ್ಯಂತ ಪಸರಿಸುವಂತಾಗಬೇಕು. ‘ಹಿಂಗಾರ ತ್ರೈಮಾಸಿಕ’ ಪತ್ರಿಕೆಯನ್ನು ಕಾಲ ಕಾಲಕ್ಕೆ ಹೊರತರಬೇಕು ಎಂದು ಹೇಳಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಅವರು ಮಾತನಾಡಿ ಅರೆಭಾಷೆ ಅಕಾಡೆಮಿ ಕಾರ್ಯಚಟುವಟಿಕೆಗೆ ಕೊಡಗು ಗೌಡ ಸಮಾಜಗಳ ಒಕ್ಕೂಟಗಳಿಂದ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬರಲಾಗಿದೆ. ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿೆ ಒಳ್ಳೆಯ ಹೆಸರು ಮಾಡುವಂತಾಗಬೇಕು ಎಂದು ಹೇಳಿದರು.
ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೆರಿಯನ ಜಯಾನಂದ ಅವರು ಮಾತನಾಡಿ ಕೊಡಗು ಜಿಲ್ಲೆಗೂ ಸಹ ಅಕಾಡೆಮಿ ಸದಸ್ಯರಾಗುವ ಅವಕಾಶ ಮಾಡಬೇಕು ಎಂದು ಸಲಹೆ ಮಾಡಿದರು.
ಮೈಸೂರು ಗೌಡ ಸಮಾಜದ ಕೊಂಬಾರನ ಬಸಪ್ಪ ಅವರು ಮಾತನಾಡಿ ಅರೆಭಾಷೆ ಮಾತನಾಡುವವರು, ಕೊಡಗು, ದಕ್ಷಿಣ ಕನ್ನಡ, ಮೈಸೂರು, ಬೆಂಗಳೂರು ಇತರೆಡೆ ಇದ್ದು, ಎಲ್ಲೆಡೆ ಕಾರ್ಯಕ್ರಮ ಆಯೋಜಿಸುವಂತಾಗಬೇಕು ಎಂದು ಸಲಹೆ ಮಾಡಿದರು.
ಸುಳ್ಯ ತಾಲ್ಲೂಕಿನ ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾದ ಪಿ.ಎಸ್. ಗಂಗಾಧರ ಅವರು ಮಾತನಾಡಿ ಅರೆಭಾಷೆ ಅಕಾಡೆಮಿ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಆ ನಿಟ್ಟಿನಲ್ಲಿ ಗೌಡರ ಯುವ ಸೇವಾ ಸಂಘದಿAದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಪುದಿಯನೆರವನ ರೇವತಿ ರಮೇಶ್ ಅವರು ಮಾತನಾಡಿ ಅರೆಭಾಷೆಯು ಸಹ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸಗಳಿದ್ದು, ಆ ನಿಟ್ಟಿನಲ್ಲಿ ಕೊಡಗಿಗೆ ಸಂಬAಧಿಸಿದAತೆ ಸುದ್ದಿಜೊಂಪೆ ವಾಚಿಸಲಾಗುತ್ತಿದ್ದು, ಈ ಸಂಬ0ಧ ಪ್ರದೇಶವಾರು ಭಾಷೆ ವ್ಯತ್ಯಾಸವಿರುವುದರಿಂದ ತರಬೇತಿ ಶಿಬಿರ ಏರ್ಪಡಿಸುವಂತೆ ಸಲಹೆ ಮಾಡಿದರು.
ಬಾರಿಯಂಡ ಜೋಯಪ್ಪ ಅವರು ಮಾತನಾಡಿ ಕೊಡಗಿನಲ್ಲಿ ಸುದ್ದಿಜೊಂಪೆ ಓದುವಂತೆ ಮಂಗಳೂರು ಆಕಾಶವಾಣಿ ಕೇಂದ್ರದಲ್ಲಿಯೂ ಸಹ ಸುದ್ದಿಜೊಂಪೆ ಬಿತ್ತರಿಸುವಂತಾಗಬೇಕು ಎಂದು ಸಲಹೆ ಮಾಡಿದರು.
ಅಕಾಡೆಮಿ ಮಾಜಿ ಸದಸ್ಯರಾದ ಎ.ಟಿ.ಕುಸುಮಾಧರ ಅವರು ಮಾತನಾಡಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಅರೆಭಾಷೆ ಸಂಸ್ಕೃತಿ ಶಿಬಿರವನ್ನು ಏರ್ಪಡಿಸುವಂತಾಗಬೇಕು. ಅಜ್ಜಿ ಕಥೆಗಳು, ಗಾದೆಗಳನ್ನು ಸಂಗ್ರಹಿಸಿ ಪುಸ್ತಕಗಳನ್ನು ಪ್ರಕಟಿಸುವಂತಾಗಬೇಕು. ಅರೆಭಾಷೆಯಲ್ಲಿ ಒಳ್ಳೆಯ ಹಾಡು, ಜಾನಪದ ಗೀತೆಗಳನ್ನು ದಾಖಲೀಕರಣ ಮಾಡಬೇಕು ಎಂದರು.
ಪುರುಷೋತ್ತಮ ಕಿರ್ಲಾಯ ಅವರು ಮಾತನಾಡಿ ‘ಹಿಂಗಾರ’ ತ್ರೈಮಾಸಿಕ ಪತ್ರಿಕೆಯು ಪ್ರತೀ ಮನೆಯಲ್ಲಿ ಇರುವಂತೆ ಆಗಬೇಕು ಎಂದು ಅವರು ತಿಳಿಸಿದರು.
ಜಯಪ್ರಕಾಶ್ ಮೋಂಟಡ್ಕ ಅವರು ಮಾತನಾಡಿ ಮಕ್ಕಳಿಗೆ ಅರೆಭಾಷೆ ಸಾಹಿತ್ಯ ನಾಟಕ ಶಿಬಿರವನ್ನು ಆಯೋಜಿಸುವಂತಾಗಬೇಕು ಎಂದು ಹೇಳಿದರು.
ಮಾಜಿ ಸದಸ್ಯರಾದ ಕೋರನ ಸರಸ್ವತಿ ಅವರು ಮಾತನಾಡಿ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಸಂಬ0ಧಿಸಿದ0ತೆ ಅನುವಾದ ಕೃತಿಗಳನ್ನು ಹೆಚ್ಚು ಪ್ರಕಟಿಸುವಂತಾಗಬೇಕು. ಅನುವಾದ ಕೃತಿಯು ಉತ್ತಮವಾಗಿರಬೇಕು ಎಂದರು.
ಚಂಡೀರ ಬಸಪ್ಪ ಅವರು ಮಾತನಾಡಿ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಮತ್ತಷ್ಟು ಶ್ರಮಿಸಬೇಕು ಎಂದರು.
ಸೂದನ ಈರಪ್ಪ ಅವರು ಮಾತನಾಡಿ ಬಂಟ್ವಾಳ, ಪುತ್ತೂರು, ವಿಟ್ಲ ಮತ್ತಿತರ ಕಡೆಯು ಸಹ ಅರೆಭಾಷಿಕರು ಇದ್ದು, ಕಾರ್ಯಕ್ರಮ ಆಯೋಜಿಸುವಂತಾಗಬೇಕು ಎಂದರು.
ವಿದೂಷಿ ಕಾವ್ಯಶ್ರೀ ಕಪಿಲ್ ಅವರು ಪ್ರಾರ್ಥಿಸಿದರು. ಯಾವುದೇ ಕಾರ್ಯಕ್ರಮಕ್ಕೆ ಪೂರ್ವಸಿದ್ಧತೆಗಳು ಅಗತ್ಯ. ಆ ನಿಟ್ಟಿನಲ್ಲಿ ಮುಂಚಿತವಾಗಿ ಮಾಹಿತಿ ನೀಡುವಂತಾಗಬೇಕು ಎಂದು ಹೇಳಿದರು.
ಅಕಾಡೆಮಿ ಸದಸ್ಯರಾದ ಜ್ಞಾನೇಶ್ ಅವರು ಮಾತನಾಡಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯನ್ನು ಮುಂದಿನ ದಿನಗಳಲ್ಲಿ ಯಾವ ರೀತಿ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂಬ ಬಗ್ಗೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಅಗತ್ಯ ಸಹಕಾರಕ್ಕೆ ಕೋರಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಮಾತನಾಡಿದರು. ಪ್ರಮುಖರಾದ ತುಂತಜೆ ಗಣೇಶ್, ನವೀನ್ ಅಂಬೆಕಲ್ಲು, ಚಿಲ್ತಡ್ಕ ಪರಶುರಾಮ, ಸುರೇಶ್ ಅಮೈ, ಕೆ.ಟಿ.ವಿಶ್ವನಾಥ, ಎ.ಕೆ.ಹಿಮಕರ, ಸದಸ್ಯರಾದ ತೇಜಕುಮಾರ್ ಕುಡೆಕಲ್ ಹಾಗೂ ಪಿ.ಎಸ್.ಕಾರ್ಯಪ್ಪ ಇದ್ದರು.
ಸದಸ್ಯರಾದ ಸಂದೀಪ್ ಪುಳಕಂಡ್ರ, ಲೋಕೇಶ್ ಊರುಬೈಲು ಅವರು ಅರೆಭಾಷಿಕ ಸಂಘಟಕರನ್ನು ಗೌರವಿಸಿದರು. ಸದಸ್ಯರಾದ ಚಂದ್ರಶೇಖರ್ ಪೆರಾಲು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಚಂದ್ರಾವತಿ ಬಡ್ಡಡ್ಕ, ಲತಾ ಕುದ್ಪಾಜೆ ಅವರು ನಿರೂಪಿಸಿದರು, ವಿದೂಷಿ ಕಾವ್ಯಶ್ರೀ ಕಪಿಲ್ ಪ್ರಾರ್ಥಿಸಿದರು, ರಿಜಿಸ್ಟ್ರಾರ್ ಚಿನ್ನಸ್ವಾಮಿ ವಂದಿಸಿದರು.