ಮಡಿಕೇರಿ ನ.18 NEWS DESK : ಅಜಿಲ ಯಾನೆ ನಲಿಕೆ ಸಮಾಜ ಸೇವಾ ಸಮಿತಿಯ 9ನೇ ವಾರ್ಷಿಕೋತ್ಸವವು ಆನ್ಯಾಳದ ದ್ವಾಕ್ರ ಭವನದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಹಿರಿಯರಾದ ಚಂದಪ್ಪ ಕಾಂತುಬೈಲು ಉದ್ಘಾಟಿಸಿದರು. ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ದೇವಪ್ಪ ಕೊಯನಾಡು, ಉಪಾಧ್ಯಕ್ಷ ಚಂದಪ್ಪ ಆನ್ಯಾಳ, ಅತಿಥಿಗಳಾಗಿ ಕೆನರಾ ಬ್ಯಾಂಕ್ ಉದ್ಯೋಗಿ ಕುಮಾರ ಕಲ್ಲುಗುಂಡಿ, ಹಿರಿಯರಾದ ಬಾಬು ಚಟ್ಟೆಕಲ್ಲು ಹಾಜರಿದ್ದರು. ವಾರ್ಷಿಕೋತ್ಸವದ ಪ್ರಯುಕ್ತ ಮಕ್ಕಳಿಗೆ ಗಾಯನ ಮತ್ತು ಲಕ್ಕಿಗೇಮ್, ಮಹಿಳೆಯರಿಗೆ ಗಾಯನ ಮತ್ತು ಹಗ್ಗಜಗ್ಗಾಟ, ಪುರುಷರಿಗೆ ಲಕ್ಕಿಗೇಮ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಿತು. ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಪಾಣರ, ಅಜಿಲ ಯಾನೆ ನಲಿಕೆ ಸೇವಾ ಸಮಿತಿಯ ಮಾಜಿ ಅಧ್ಯಕ್ಷರಾದ ಸುಬ್ರಾಯ ಕಲ್ಮಂಜ, ಪುತ್ತೂರು ತಾಲೂಕು ನಲಿಕೆ ಸೇವಾ ಸಮಿತಿಯ ಅಧ್ಯಕ್ಷರಾದ ರವಿ ಎಂಡೆಸಾಗು ಇವರು ಅತಿಥಿಗಳಾಗಿ ಭಾಗವಹಿಸಿದ್ದರು.
ಸಾಧಕರಿಗೆ ಗೌರವಾರ್ಪಣೆ: ಚಾಪೆ ಹೆಣೆದು ಜೀವನ ಕಂಡುಕೊಂಡ ಹಿರಿಯರಾದ ದೇವಕಿ ಆನ್ಯಾಳ ಮತ್ತು ತ್ರೋಬಾಲ್ ಪಂದ್ಯಾಟದಲ್ಲಿ ಸಾಧನೆ ಮಾಡಿದ ಬಿ.ಜಿ.ಗಗನ್ ಅವರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು. ಪದಾಧಿಕಾರಿಗಳ ಆಯ್ಕೆ: 2024-25ನೇ ಸಾಲಿನ ಪದಾಧಿಕಾರಿಗಳನ್ನು ರಚಿಸಲಾಯಿತು. ಅಧ್ಯಕ್ಷರಾಗಿ ದೇವಪ್ಪ ಕೊಯನಾಡು, ಉಪಾಧ್ಯಕ್ಷರಾಗಿ ಚಂದಪ್ಪ ಆನ್ಯಾಳ, ಕಾರ್ಯದರ್ಶಿಯಾಗಿ ಕೃಷ್ಣಪ್ಪ ಆನ್ಯಾಳ, ಕೋಶಧಿಕಾರಿಯಾಗಿ ರಾಮಕೃಷ್ಣ ಎ.ಪಿ ಆಯ್ಕೆಯಾದರು. ಅಧ್ಯಕ್ಷರ ಮಾತಿನೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಮಾಧವ ಜೋಡುಪಾಲ ಸ್ವಾಗತಿಸಿದರು. ಅರುಣ್ ಸಿ, ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು.