
ಮಡಿಕೇರಿ NEWS DESK ಆ.9 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಬಡವರ್ಗದ ಮಂದಿ ಬದುಕು ಕಟ್ಟಿಕೊಂಡಿರುವ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ರಕ್ಷಿತಾರಣ್ಯ ವ್ಯಾಪ್ತಿಗೆ ತರುವ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿರುವ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹೋರಾಟವನ್ನು ರೂಪಿಸುವ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಸಂರಕ್ಷಣಾ ಸಮಿತಿಯ ಅಧ್ಯಕ್ಷರು ಗ್ರಾಮ ಪಂಚಾಯ್ತಿ ಪಿಡಿಒಗಳಿಗೆ ಆದೇಶ ಹೊರಡಿಸಿ, ಅವರ ವ್ಯಾಪ್ತಿಯಲ್ಲಿನ ರಕ್ಷಿತಾರಣ್ಯ ಮತ್ತು ಅವುಗಳ ಒತ್ತುವರಿಗಳ ಬಗ್ಗೆ ಮಾಹಿತಿಯನ್ನು ಕೇಳಿರುವ ಕ್ರಮ ಸರಿಯಲ್ಲ. ಗ್ರಾಮೀಣ ಭಾಗಗಳಲ್ಲಿ ಅಲ್ಪಸ್ವಲ್ಪ ಸಿ ಮತ್ತು ಡಿ ದರ್ಜೆಯ ಜಾಗವನ್ನು ಒತ್ತುವರಿ ಮಾಡಿ ಅವುಗಳಲ್ಲಿ ಬದುಕು ಕಟ್ಟಿಕೊಂಡ ದುರ್ಬಲ ವರ್ಗದವರನ್ನು ಅಲ್ಲಿಂದ ತೆರವುಗೊಳಿಸುವ ಪ್ರಯತ್ನ ನಡೆಸಿದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದರು. ಜಿಲ್ಲೆಯ ಬಹುತೇಕ ಗ್ರಾಮಿಣ ಭಾಗಗಳಲ್ಲಿ ಇರುವ ದೇವರಕಾಡುಗಳನ್ನು ಸ್ಥಳೀಯರು ಸಂರಕ್ಷಿಕೊAಡು ಬಂದಿದ್ದಾರೆ. ಸಾಕಷ್ಟು ಬಡ ಮಂದಿ ಒಂದಷ್ಟು ಸಿ ಮತ್ತು ಡಿ ದರ್ಜೆಯ ಜಮೀನನ್ನು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆಗಳನ್ನು ನಡೆಸುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ರಾಜ್ಯ ಸರ್ಕಾರದ ನಿರ್ದೇಶನದಂತೆ ಸಿ ಮತ್ತು ಡಿ ದರ್ಜೆಯ ಜಮೀನನ್ನು ಅರಣ್ಯವೆಂದು ಪರಿಗಣಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ಅರಣ್ಯೀಕರಣದ ಹೆಸರಿನಲ್ಲಿ ಅರಣ್ಯ ಇಲಾಖೆ ಕೋಟ್ಯಾಂತರ ಹಣವನ್ನು ಮತ್ತೆ ಅರಣ್ಯ ವ್ಯಾಪ್ತಿಯಲ್ಲೆ ಗಿಡ ನೆಡುವ ಕಾರ್ಯಗಳಿಗೆ ವಿನಿಯೋಗಿಸುತ್ತಿರುವುದು ಸರಿಯಾದ ಕ್ರಮವಲ್ಲ. ಜಿಲ್ಲೆಯಲ್ಲಿ ಹಸಿರ ಪರಿಸರ ಸಂರಕ್ಷಣೆೆಯಾಗುತ್ತಿರುವುದಕ್ಕೆ ಗ್ರಾಮ ವ್ಯಾಪ್ತಿಗಳಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚುತ್ತಿರುವುದೇ ಸಾಕ್ಷಿಯಾಗಿದೆ. ಅರಣ್ಯ ಪರಿಸರವನ್ನು ಹೆಚ್ಚಿಸುವುದೇ ಆದಲ್ಲಿ ಹಸಿರ ಪರಿಸರ ಕಡಿಮೆ ಇರುವ ಬಯಲು ಪ್ರದೇಶಗಳಲ್ಲಿ ಮರಗಿಡಗಳನ್ನು ಬೆಳೆಸಲಿ ಎಂದರು.
::: ಭ್ರಷ್ಟಾಚಾರದ ಸರ್ಕಾರ :::
ಹಿಂದಿನ ಬಿಜೆಪಿ ಸರ್ಕಾರವನ್ನು ಶೇ.40ರಷ್ಟು ಕಮಿಷನ್ ಪಡೆಯುವ ಸರ್ಕಾರ ಎಂದು ಆರೋಪಿಸುತ್ತಲೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ, ಇಂದು ವಾಲ್ಮೀಕಿ ನಿಗಮದ ಹಗರಣ, ಮುಖ್ಯಮಂತ್ರಿಗಳ ಪತ್ನಿಗೆ ಮುಡಾ ನಿವೇಶನ ಹಂಚಿಕೆ ಹಗರಣ ಸೇರಿದಂತೆ ವಿವಿಧ ಭ್ರಷ್ಟಾಚಾರದ ಪ್ರಕರಣಗಳಿಂದ ಕಾಂಗ್ರೆಸ್ ಸರ್ಕಾರ ಶೇ.100ರಷ್ಟು ಭ್ರಷ್ಟಾಚಾರ ನಡೆಸುತ್ತಿರುವ ಸರ್ಕಾರವಾಗಿದೆ ಎಂದು ರವಿ ಕಾಳಪ್ಪ ಲೇವಡಿ ಮಾಡಿದರು. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ನಿಂದ ನಡೆಯುತ್ತಿರುವ ಪಾದಯಾತ್ರೆಯ ಸಮಾರೋಪ ಸಮಾವೇಶ ಆ.10 ರಂದು ಮೈಸೂರಿನಲ್ಲಿ ನಡೆಯಲಿದೆ. ಕೊಡಗು ಜಿಲೆಯಿಂದ 3 ಸಾವಿರ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.









