ಪೆರಾಜೆ NEWS DESK ಆ.11 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಂಪಾಜೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಪೆರಾಜೆ ಜ್ಯೋತಿ ವಿದ್ಯಾ ಸಂಘದ ಸಂಯುಕ್ತಾಶ್ರಯದಲ್ಲಿ ಜ್ಯೋತಿ ಪ್ರೌಢಶಾಲೆಯ ಸಭಾಂಗಣದಲ್ಲಿ ದಿ.ಗಂಗಾಧರ ಶೇಟ್ ಹಾಗೂ ಸುಲೋಚನಾ ಬಾಯಿ ಸ್ಮಾರಕ ದತ್ತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಲಾಗಿದ್ದ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ನೆನಪಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲೆಯ ಹಿರಿಯ ಸಾಹಿತಿ, ಕೊಡಗಿನ ಗೌರಮ್ಮ ಪ್ರಶಸ್ತಿ ಪುರಸ್ಕೃತೆ ಸಹನಾ ಕಾಂತಬೈಲು ಕೊಡಗಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಮೆಲುಕು ಹಾಕಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ಸುಲಭವಾಗಿ ಸಿಕ್ಕಿಲ್ಲ, ಹಲವರ ತ್ಯಾಗ ಬಲಿದಾನ, ಹೋರಾಟಗಳಿಂದ ದೊರೆತ್ತಿದ್ದು, ಇಂದಿನ ಯುವ ಪೀಳಿಗೆಗೆ ಇದನ್ನು ತಿಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಗೋಣಿಕೊಪ್ಪದ ಎಂ.ಜಿ.ಮೋಹನ್ ಅವರು ಅವರ ತಂದೆ ತಾಯಿಗಳ ಹೆಸರಿನಲ್ಲಿ ದತ್ತಿಯನ್ನು ಸ್ಥಾಪಿಸಿದ್ದಾರೆ ಎಂದರು. ಪೆರಾಜೆಯ ಜ್ಯೋತಿ ವಿದ್ಯಾ ಸಂಘದ ಅಧ್ಯಕ್ಷ ಎನ್.ಎ.ಜ್ಞಾನೇಶ್ ಕಾರ್ಯಕ್ರಮ ಉದ್ಘಾಟಿಸಿದರು. ದತ್ತಿದಾನಿಗಳಾದ ಗೋಣಿಕೊಪ್ಪಲಿನ ಜಯಲಕ್ಷ್ಮಿ ಜ್ಯುವೆಲ್ಲರಿ ಮಾಲೀಕರಾದ ಎಂ.ಜಿ.ಮೋಹನ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಸಂಪಾಜೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೋಪಾಲ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಪೆರಾಜೆ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಪೆರುಮುಂಡ, ಜ್ಯೋತಿ ಪ್ರೌಢಶಾಲೆಯ ಸಂಚಾಲಕ ಮುಡುಕಜೆ ಹರಿಶ್ಚಂದ್ರ, ಮುಖ್ಯೋಪಾಧ್ಯಯ ನಾಗರಾಜ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರು ಬಳಗದ ಅಧ್ಯಕ್ಷ ಲೋಕನಾಥ್ ಅಮೆಚೂರು ಉಪಸ್ಥಿತರಿದ್ದರು. ಜ್ಯೋತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಹೋಬಳಿ ಕಾರ್ಯದರ್ಶಿ ಸಂಗೀತಾ ರವಿರಾಜ್ ಸ್ವಾಗತಿಸಿ, ನಿರೂಪಿಸಿ, ಕಡ್ಲೆರ ತುಳಸಿ ಮೋಹನ್ ವಂದಿಸಿದರು.