ಶ್ರೀಮಂಗಲ NEWS DESK ಆ.11 : ಜಬ್ಬೂಮಿ ಸಂಘಟನೆ, ರೂಟ್ಸ್ ಆಫ್ ಕೊಡಗು ಹಾಗೂ ವಿವಿಧ ಸಂಘಟನೆಗಳ ಜಂಟಿ ಆಶ್ರಯದಲ್ಲಿ “ಕೊಡಗಿನ ಕೃಷಿಯೊಂದಿಗೆ ಸಂಸ್ಕೃತಿ ಮಿಡಿತ ಹೊಂದಿದ್ದು, ಮರೆಯಾಗುತ್ತಿರುವ ಕೃಷಿ ಪರಂಪರೆ ಬಗ್ಗೆ ಅಭಿಮಾನ ಮೂಡಿಸಿ, ಉತ್ತೇಜಿಸಿ ಮತ್ತು ಕೊಡವ ಸಮುದಾಯಗಳ ನಡುವೆ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಆಯೋಜಿಸಿದ್ದ ಕೆಸರು ಗದ್ದೆ ಕ್ರೀಡಾಕೂಟ ಬಿಟ್ಟಂಗಾಲದಲ್ಲಿ ಸಂಭ್ರಮದಿಂದ ನಡೆಯಿತು. ಬಿಟ್ಟಂಗಾಲ ಗ್ರಾಮದ ನಾಯಡ ಕುಟುಂಬದ ಭತ್ತದ ಗದ್ದೆಯಲ್ಲಿ ಮುರುವಂಡ ಮಿಥುನ್ ಅಣ್ಣಯ್ಯ ಹಾಗೂ ಪೊನ್ನಕಚ್ಚಿರ ಪುನೀತ್ ಅವರ ಮೇಲುಸ್ತುವಾರಿಯ ಗದ್ದೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ನೂರಾರು ಕಿರಿಯರು, ಹಿರಿಯರು ಭಾಗವಹಿಸಿ, ಪ್ರೇಕ್ಷಕರ ಪ್ರೋತ್ಸಾಹದೊಂದಿಗೆ ಕೆಸರು ಗದ್ದೆಯಲ್ಲಿ ಎದ್ದು, ಬಿದ್ದು ಕ್ರೀಡಾ ಉತ್ಸಾಹ ಪ್ರದರ್ಶಿಸಿದರು. ನಾಟಿ ಗದ್ದೆಯ ಕ್ರೀಡಾ ಕೂಟದಲ್ಲಿ 6 ವರ್ಷದ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರು ಭಾಗವಹಿಸಿ ಸಂಭ್ರಮಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಸಾಂಪ್ರದಾಯಿಕವಾಗಿ ಗೆಜ್ಜೆತಂಡ್ ಎದುರು ಪುಡಿಯೊಕ್ಕಡ ಹರೀಶ್ ಅವರ ಮೂಲಕ “ತಪ್ಪಡ್ಕ”ಕಟ್ಟಿ ಕಾರ್ಯಕ್ರಮದ ಯಶಸ್ಸು, ಕೊಡಗಿನ ಪ್ರಕೃತಿ, ಜೀವ ಜಲ, ಪರಂಪರೆಯ ಗತವೈಭವ ಮರುಕಳಿಸಿ, ಅದರ ಸಂರಕ್ಷಣೆಯಾಗಲಿ ಎಂದು ಪ್ರಾರ್ಥಿಸಲಾಯಿತು. ಪುಚ್ಚಿಮಂಡ ಬಬ್ಬುಲು ಹಾಗೂ ಮಾಚೇಟ್ಟಿರ ಸುನಿಲ್ ತಂಡ ಕೋವಿಯಲ್ಲಿ 12 ಸುತ್ತು ಗುಂಡು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ನಾಯಡ ಶ್ಯಾಮ್ ಸೋಮಣ್ಣ, ಜಬ್ಬೂಮಿ ಸಂಘಟನೆ ಮತ್ತು ರೂಟ್ಸ್ ಆಫ್ ಕೊಡಗು ಪ್ರಮುಖರು ಉದ್ಘಾಟಿಸಿದರು. ಜಬ್ಬೂಮಿ ಸಂಚಾಲಕ ಚೊಟ್ಟೆಕ್’ಮಾಡ ರಾಜೀವ್ ಬೋಪಯ್ಯ, ಮಚ್ಚಮಾಡ ಅನೀಶ್ ಮಾದಪ್ಪ,ಮಾಚಂಗಡ ಸಚಿನ್, ಉಳುವಂಗಡ ಲೋಹಿತ್ ಭೀಮಯ್ಯ, ಮಲ್ಲಪನೆರ ವಿನು ಚಿಣ್ಣಪ್ಪ, ಪಾಲೆಂಗಡ ಅಮಿತ್ ಭೀಮಯ್ಯ,, ಗುಡಿಯಂಗಡ ನಿಖಿಲ್, ಚೇಂದಂಡ ಶಮ್ಮಿ ಮಾದಯ್ಯ, ಅಚ್ಚಾoಡಿರ ಕುಶಾಲಪ್ಪ, ಅಪ್ಪಂಡೇರಂಡ ಯಶ್ವoತ್, ಮಾಚೇಟ್ಟಿರ ಸುನಿಲ್, ಪುಚ್ಚಿಮಂಡ ಬಬುಲ್ ಅಪ್ಪಯ್ಯ ಪ್ರಮುಖರು ಉಪಸ್ಥಿತರಿದ್ದರು. ಉಳುವಂಗಡ ಲೋಹಿತ್ ಭೀಮಯ್ಯ ಅವರು ಜಬ್ಬೂಮಿ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಮಹಿಳೆಯರು, ಪುರುಷರಿಗೆ, ಶಾಲಾ ಮಕ್ಕಳಿಗೆ ಹಗ್ಗ ಜಗ್ಗಾಟ, ಕೆಸರು ಗದ್ದೆ ಓಟ, ಕೆಸರು ಗದ್ದೆ ನಡಿಗೆ, ಕೈಪುಳಿ ಹಾಗೂ ಕೈಕಣೆ ನಡಿಗೆ ಗಮನ ಸೆಳೆಯಿತು. ವಿಶೇಷ ಕಾರ್ಯಕ್ರಮವಾಗಿ ವಿರಾಜಪೇಟೆ ಪ್ರಗತಿ ಶಾಲಾ ಮಕ್ಕಳಿಂದ ಪ್ರಾಯೋಗಿಕ ಗದ್ದೆ ನಾಟಿ ಮಾಡಲಾಯಿತು. ಪೆರುವನಾಡ್ ಗೆ ಸಂಬಂಧಪಟ್ಟ ಸತತವಾಗಿ ಭತ್ತದ ಕೃಷಿ ಮಾಡುತ್ತಿರುವ ಬುಟ್ಟಿಯಂಡ ಪಟ್ಟು ಅಯ್ಯಪ್ಪ, ಬುಟ್ಟಿಯಂಡ ಚಿಮ್ಮಿ ಪೂಣಚ್ಚ, ಪುಚ್ಚಿಮಂಡ ಈಶ್ವರ ಮುತ್ತಪ್ಪ, ಬೊಪ್ಪಂಡ ರವಿ, ಪೊನ್ನಕಚ್ಚಿರ ಕುಶ ಬಿದ್ದಪ್ಪ, ಕುಪ್ಪಂಡ ಉತ್ತಯ್ಯ ಅವರನ್ನು ಸನ್ಮಾನಿಸಲಾಯಿತು. ಜಿಲ್ಲೆಯ ವಿವಿಧ ಶಾಲೆಗಳು ಹಾಗೂ ಇತರ ಭಾಗಗಳಿಂದ ಆಗಮಿಸಿದ ಕ್ರೀಡಾಸಕ್ತರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಮಾಲೇಟೀರ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.