ನಾಪೋಕ್ಲು ಆ.12 NEWS DESK : ನಾಪೋಕ್ಲು ಪೊಲೀಸ್ ಠಾಣೆಯ ಕ್ರೈಂ ಬ್ರಾಂಚಿನ ಠಾಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದುಗ್ಗಳ ಶ್ರೀಧರ (ಬಾಚಿ ಗದ್ದೆ) ಜುಲೈ 31ಕ್ಕೆ ಸೇವೆಯಿಂದ ನಿವೃತ್ತಿ ಹೊಂದಿದ್ದು, ಅವರನ್ನು ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ನಿವೃತ್ತ ದುಗ್ಗಳ ಶ್ರೀಧರ ಹಾಗೂ ಪತ್ನಿ ಪಾರ್ವತಿ ದಂಪತಿಗಳನ್ನು ಸನ್ಮಾನಿಸಿ ನಿವೃತ್ತ ಜೀವನ ಶುಭಪ್ರದವಾಗಿರಲೆಂದು ಹಾರೈಸಿದರು. ಸಂಪಾಜೆ ಗ್ರಾಮದವರಾದ ದುಗ್ಗಳ ಶ್ರೀಧರ್, 1981 ರಿಂದ 1991 ರವರೆಗೆ ದೂರವಾಣಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಬಳಿಕ ಪೊಲೀಸ್ ಇಲಾಖೆ ಸೇರಿ ವಿರಾಜಪೇಟೆಯ ಟೌನ್ ಸ್ಟೇಷನ್ ನಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬಳಿಕ ನಾಪೋಕ್ಲು ಪೋಲಿಸ್ ಠಾಣೆಯಲ್ಲಿ ಆರು ವರ್ಷ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರು ವರ್ಷ, ಹೆಡ್ ಕಾನ್ಸ್ಟೇಬಲ್ ಆಗಿ ಮಡಿಕೇರಿಯ ಗ್ರಾಮೀಣ ಸ್ಟೇಷನ್ ನಲ್ಲಿ ಆರು ವರ್ಷ ಸೇವೆ ಸಲ್ಲಿಸಿದರು. ಮಡಿಕೇರಿಯಿಂದ ಠಾಣಾಧಿಕಾರಿಯಾಗಿ ಪದೋನ್ನತಿ ಹೊಂದಿ ನಾಪೋಕ್ಲು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ದುಗ್ಗಳ ಪದ್ಮಣ್ಣ ಮತ್ತು ಚೋಮಕ್ಕ ದಂಪತಿಗಳ ಪುತ್ರ.
ವರದಿ : ದುಗ್ಗಳ ಸದಾನಂದ.