ಕುಶಾಲನಗರ, ಆ.14 NEWS DESK : ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರಪೇಟೆ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮತ್ತು ಸಂಘದ ಕುಶಾಲನಗರ ವಲಯದ ವತಿಯಿಂದ ಶಾಲೆಯ ಜೆ.ಸಿ.ಬೋಸ್ ಇಕೋ ಕ್ಲಬ್, ಎನ್.ಎಸ್.ಎಸ್.ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ಆಶ್ರಯದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಪರಿಸರ ಮಾಹಿತಿ ಕಾರ್ಯಕ್ರಮದ ಅಂಗವಾಗಿ ಶಾಲಾವರಣದಲ್ಲಿ ಅರಣ್ಯ ಸಸಿನೆಟ್ಟು ಪರಿಸರ ಸಂರಕ್ಷಣೆ ಕುರಿತು ಮಾಹಿತಿ ನೀಡಲಾಯಿತು. ಶಾಲಾವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಡಿ.ಭಾಸ್ಕರ್ ನಾಯಕ್, ಮುಂದಿನ ಉತ್ತಮ ಭವಿಷ್ಯಕ್ಕಾಗಿ ನಾವು ಪರಿಸರ ಸಂರಕ್ಷಣೆಗೆ ಸಂಕಲ್ಪ ತೊಡಬೇಕು ಎಂದರು. ಅರಣ್ಯ ಗಿಡಗಳನ್ನು ನೆಡಲು ವಿದ್ಯಾರ್ಥಿಗಳು ಹಾಗೂ ಜನರನ್ನು ಪ್ರೋತ್ಸಾಹಿಸಲು ಸರ್ಕಾರವು ವಿವಿಧ ಹಂತಗಳಲ್ಲಿ ವಿವಿಧ ನೆಡುತೋಪು ಅಭಿಯಾನಗಳನ್ನು ಆಯೋಜಿಸುತ್ತಿದೆ. ಪ್ರತಿಯೊಬ್ಬರೂ ಪ್ರಕೃತಿ ಮಾತೆಯಾದ ತಮ್ಮ ತಾಯಿ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪೋಷಿಸಿ ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು. ನಾವೆಲ್ಲರೂ ನಮ್ಮ ಸುತ್ತಮುತ್ತಲಿನ ಜಾಗಗಳಲ್ಲಿ ಅರಣ್ಯ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಉತ್ತಮ ಪರಿಸರ ಸಂರಕ್ಷಣೆಗೆ ಪಣ ತೊಡಬೇಕಿದೆ ಎಂದರು. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕ್ಷೀಣಿಸುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆ, ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಅರಣ್ಯ ಸಂಪತ್ತು ವೃದ್ಧಿಸುವ ನಿಟ್ಟಿನಲ್ಲಿ ಶ್ರಮಿಸಿದರೆ, ಖಂಡಿತಾ ಬರಗಾಲ ಅಳಿಸಬಹುದಾಗಿದೆ ಎಂದು ಭಾಸ್ಕರ್ ನಾಯಕ್ ಹೇಳಿದರು. ಧರ್ಮಸ್ಥಳ ಸಂಘದ ವತಿಯಿಂದ ಕೈಗೊಳ್ಳಲಾಗುತ್ತಿರುವ ವಿವಿಧ ಕಾರ್ಯಕ್ರಮಗಳು ಗ್ರಾಮೀಣ ಮಹಿಳೆಯ ಆರ್ಥಿಕ ಸಬಲೀಕರಣಕ್ಕೆ ಬಹಳ ಸಹಕಾರಿಯಾಗಿವೆ ಎಂದರು. ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿ “ಪರಿಸರ ಸಂರಕ್ಷಣೆ” ಕುರಿತು ಮಾಹಿತಿ ನೀಡಿದ ಮುಖ್ಯ ಶಿಕ್ಷಕ ಟಿ.ಜಿ ಪ್ರೇಮಕುಮಾರ್, ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಗಿಡ ನೆಟ್ಟು ಅದನ್ನು ಪೋಷಿಸಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿ ಉತ್ತಮ ಪರಿಸರ ನಿರ್ಮಾಣಕ್ಕೆ ಪಣ ತೊಡಬೇಕು ಎಂದರು. ಧರ್ಮಸ್ಥಳ ಸಂಘದ ಕುಶಾಲನಗರ ವಲಯದ ಮೇಲ್ವಿಚಾರಕಿ ಪೂರ್ಣಿಮಾ ಪರಿಸರ ಮಾಹಿತಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಯೋಜನೆಯ ತಾಲ್ಲೂಕು ಕೃಷಿ ಅಧಿಕಾರಿ ರಾಜಣ್ಣ ಸಂಘದ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಎ.ಎಂ.ಜವರಯ್ಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಒಕ್ಕೂಟದ ಅಧ್ಯಕ್ಷ ಗಿರೀಶ್, ಸಂಘದ ಕೂಡ್ಲೂರು ಸೇವಾ ಪ್ರತಿನಿಧಿ ನಿರ್ಮಲ,ವಿಜಯನಗರದ ಸೇವಾ ಪ್ರತಿನಿಧಿ ಸುನೀತ, ಎಸ್.ಡಿ.ಎಂ.ಸಿ ಸದಸ್ಯೆ ಶೃತಿ, ಶಾಲೆಯ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ದಯಾನಂದ ಪ್ರಕಾಶ್, ಬಿ.ಡಿ.ರಮ್ಯ, ಬಿ.ಎನ್.ಸುಜಾತ,, ಅನ್ಸಿಲಾ ರೇಖಾ, ಎಸ್ ಎಂ ಗೀತಾ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು,ವಿದ್ಯಾರ್ಥಿಗಳು, ಸಂಘದ ಸದಸ್ಯರು,ಧರ್ಮಸ್ಥಳ ಸಂಘದ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಹಾಗೂ ಸಂಘದ ಸ್ವಯಂ ಸೇವಕರು ಅರಣ್ಯ ಮತ್ತು ಪರಿಸರ ಸಂರಕ್ಷಣೆಗಾಗಿ ತಮ್ಮನ್ನು ತೊಡಗಿಸಿಕೊಳ್ಳುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಇದೇ ವೇಳೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಂಘದ ಸದಸ್ಯರಿಗೆ ಸಸಿಗಳನ್ನು ವಿತರಿಸಲಾಯಿತು. ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಘೋಷಣೆಗಳ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಪ್ರಚುರಪಡಿಸಿದರು. ಹಸಿರೇ ಉಸಿರು, ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಕಾಡೇ ರಾಷ್ಟ್ರದ ಸಂಪತ್ತು, ಮಳೆಗಾಗಿ ಅರಣ್ಯ, ನೀರಿಗಾಗಿ ಅರಣ್ಯ ಸಂರಕ್ಷಣೆ ಮುಂತಾದ ಘೋಷವಾಕ್ಯಗಳನ್ನು ವಿದ್ಯಾರ್ಥಿಗಳು ಪ್ರಚುರಪಡಿಸಿದರು.