ಮಡಿಕೇರಿ ಆ.15 NEWS DESK : ಭಾರತೀಯರಲ್ಲಿ ಅದು ಪೂರ್ಣವಾಗಿ ಸತ್ಯ ಎನಿಸುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳೇ ಕಳೆದು ಹೋಗಿದೆ. ಭಾರತೀಯರಿಗೆ ಸ್ವಾತಂತ್ರ್ಯ ಎಂದರೆ ಏನು ಎಂದು ಅರಿಯುವುದೇ ಕಷ್ಟವಾಗಿದೆ. ಇಂದಿನ ಪೀಳಿಗೆಗೆ ಯಾಕೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತೇವೆ ಎಂಬುದು ಅರಿವು ಇರುವುದಿಲ್ಲ. ನಮಗೆ ಸ್ವಾತಂತ್ರ್ಯ ದಿನಾಚರಣೆ ಎಂದರೆ ಒಂದು ದಿನದ ರಜೆ, ಮೈದಾನದಲ್ಲಿ ಧ್ವಜಾರೋಹಣೆ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅತಿಥಿಗಳಿಂದ ಸಿದ್ಧ ಭಾಷಣದ ವರದಿ ವಾಚನ ಹೊರತು ಅರ್ಥಪೂರ್ಣವಾದ ಆಚರಣೆ ಆಗುವುದೇ ಇಲ್ಲ.
ನಿಜವಾದ ಸ್ವಾತಂತ್ರ್ಯ ಎಂದರೆ ಗುಲಾಮಗಿರಿಯಿಂದ ಮುಕ್ತಿ ಎಂದು ಅರ್ಥ. ಅಂದು ಬ್ರಿಟಿಷರಿಂದ ಮುಕ್ತಿ ಪಡೆದ ನಾವು ನಮ್ಮ ದೇಶದಲ್ಲಿ ಬಂದಿಗಳು ಎಂಬುದನ್ನು ಅರಿಯಬೇಕು. ಇಂದು ರಾಷ್ಟ್ರ ಅಧಿಕಾರಿ ಶಾಹಿಗಳಿಂದ, ಬಂಡವಾಳ ಶಾಹಿಗಳಿಂದ ಬಂದಿಯಾಗಿದ್ದೇವೆ ಎಂಬುದನ್ನು ಅರಿತೇ ಇಲ್ಲ. ಬ್ರಿಟಿಷರ ಕಾಲದಲ್ಲಿ ಉತ್ತಮ ಆಡಳಿತ ಇತ್ತು ಎಂಬುದನ್ನು ನಾವು ಅವರ ಆಡಳಿತ ವೈಖರಿಯನ್ನು ಇತಿಹಾಸದಲ್ಲಿ ಅವಲೋಕಿಸಿದಾಗ ತಿಳಿಯುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಅಂದು ಅವರು ನಿರ್ಮಿಸಿದ ಕಟ್ಟಡಗಳು ಇಂದಿಗೂ ಗಟ್ಟಿಯಾಗಿರುವುದೇ ಸಾಕ್ಷಿ. ಹಿಂದೆ ಹಿರಿಯರು ಹೇಳುತ್ತಿದ್ದರು, ಅವರ ಆಡಳಿತವನ್ನು ನೋಡಿದವರು ಅನುಭವಿಸಿದವರು ಅವರನ್ನು ಹೊಗಳುತ್ತಿದ್ದರು. ಆದರೆ ನಮಗೆ ಸ್ವಾತಂತ್ರ್ಯ ಬಂದು 77 ವರ್ಷಗಳೇ ಕಳೆದುಹೋಯಿತು. ಇಂದು ನಮ್ಮ ಆಡಳಿತ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬ ಚಿಂತನೆ ಸಮಾಜಕ್ಕೆ ಅತ್ಯವಶ್ಯಕ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದು ಹೋದರೂ ನಮ್ಮಲ್ಲಿ ಅದರ ಪರಿಪೂರ್ಣತೆ ಕಂಡುಬಂದಿಲ್ಲ. ಇಂದು ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕವಲು ದಾರಿಯಲ್ಲಿದೆ. ಹಿಂದೆ ಹೋರಾಟಗಾರರು ಸೈದ್ಧಾಂತಿಕ ಹಿನ್ನಲೆ ಹೊಂದಿದದವರು ಚುನಾಯಿತ ಪ್ರತಿನಿಧಿಗಳಾಗುತ್ತಿದ್ದರು. ಇಂದು ರಾಜಕೀಯ ಪಕ್ಷಗಳ ಟಿಕೇಟ್ ಮುಖಂಡರ, ಅವರ ಮಕ್ಕಳ, ಹಣವಂತರ ಪಾಲಾಗುತ್ತಿದೆ. ಇಂದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಲೋಕಸಭೆಯವರೆಗೆ ಹಣ, ಜಾತಿ, ತೋಳ್ಬಲದ ಮೇಲೆ ನಿಂತಿದೆ ಹೊರತು ನಿಜವಾದ ಪ್ರಜಾಪ್ರಭುತ್ವದ ವ್ಯವಸ್ಥೆಯಡಿಯಲ್ಲಲ್ಲ. ಸ್ವಾತಂತ್ರ್ಯ ಬಂದು 77 ವರ್ಷಗಳೇ ಕಳೆದು ಹೋದರೂ ಅಧಿಕಾರಿ ವರ್ಗದವರ ದರ್ಪ ಕಡಿಮೆಯಾಗಿಲ್ಲ. ಇಂದಿಗೂ ಬಡ ಪ್ರಜೆಯೊಬ್ಬನು ಅಧಿಕಾರಿಯೊಬ್ಬನ ಬಳಿ ತನ್ನ ಅಹವಾಲನ್ನು ಸಲ್ಲಿಸಲು ನೇರವಾಗಿ ಭೇಟಿಯಾಗಲು ಸಾಧ್ಯವಿಲ್ಲವೆಂಬುದು ವಾಸ್ತವಿಕ. ಇನ್ನು ನಾವು ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಹಳ್ಳಿಗಳಲ್ಲಿ ಹೋಗಲಿ ಪಟ್ಟಣಗಳಲ್ಲೇ ಸಾಧ್ಯವಾಗಿಲ್ಲ. ವೈದ್ಯಕೀಯ ಸೇವೆ ವ್ಯಾಪಾರೀಕರಣವಾಗಿದೆ. ದೇಶದಲ್ಲಿ ಒಂದೇ ಒಂದು ಸರಕಾರಿ ಆಸ್ಪತ್ರೆ ಆಧುನೀಕರಣವಾಗಿಲ್ಲವೆಂಬುದು ಇದಕ್ಕೆ ಸ್ಪಷ್ಟ ಉದಾಹರಣೆ. ಶಿಕ್ಷಣ ಇಂದು ವ್ಯಾಪಾರೀಕರಣದ ಇನ್ನೊಂದು ಮಾರ್ಗ. ಶಿಕ್ಷಣ ಕ್ಷೇತ್ರಕ್ಕೆ ಹಣ ಹೂಡುವುದು ದಂಧೆಯಾಗಿ ಪರಿವರ್ತನೆಯಾಗಿದೆ. ಇಂದು ಉತ್ತಮ ಕಾಲೇಜಿನಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಅಥವಾ ಇತರೆ ವೃತ್ತಿನಿರತ ಕೋರ್ಸ್‍ಗಳಿಗೆ ಪ್ರವೇಶ ಪಡೆಯಬೇಕಾದರೆ ಲಕ್ಷದ ಮಾತು ಹೋಗಿ ಕೋಟಿಗೆ ಬಂದು ನಿಂತಿದೆ. ಹೀಗಿರುವಾಗ ಬಡವನ ಮಗನು ವಿದ್ಯಾವಂತನಾಗಲು ಸಾಧ್ಯವೇ?
ಭಾರತೀಯರು ಇನ್ನು ರೇಷನ್ ಅಂಗಡಿ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವ ವ್ಯವಸ್ಥೆಯಿಂದ ಹೊರ ಬಂದಿಲ್ಲ. ಸರ್ಕಾರದಿಂದ ದೊರೆಯುವ ಭಾಗ್ಯಗಳಿಗೆ ಅವಲಂಬಿತ ಜೀವನದಿಂದ ಮುಕ್ತಿ ಹೊಂದಿಲ್ಲ. ದೇಶದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ರೈತನ ಜೀವನವು ಬರಿ ಎಲುಬಿನಿಂದ ಕೂಡಿದೆ. ಇಂದಿಗೂ ಬೇಸಾಯ ಪದ್ಧತಿಯಲ್ಲಿ ತಂತ್ರಜ್ಞಾನ ಆವಿಷ್ಕಾರದ ಕೊರತೆಯಿಂದ ನಷ್ಟದ ಹಾದಿಯಲ್ಲಿ ಅವನ ಜೀವನ ಸಾಗುತ್ತಿದೆ. ಅವನಿನ್ನೂ ಸಾಲಮನ್ನಾ ಭಾಗ್ಯದಿಂದ ಹೊರ ಬಂದಿಲ್ಲ. ಗಡಿ ಕಾಯುವ ಸೈನಿಕರು ಇಂದಿಗೂ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿನ್ನೂ ಹೈಟೆಕ್ ಸೌಲಭ್ಯಕ್ಕಾಗಿ ಸರ್ಕಾರದತ್ತ ಮುಖ ಮಾಡುತ್ತಿದ್ದಾರೆ. ಅವರು ಅಲ್ಲಿ ದೇಶ ಕಾಯುತ್ತಿದ್ದರೆ ಅವರ ಊರಿನ ಆಸ್ತಿಪಾಸ್ತಿಗಳನ್ನು ದೇವರೇ ಕಾಪಾಡುವಂತಹ ಪರಿಸ್ಥಿತಿ. ಅವರು ಊರಿಗೆ ಬಂದು ಅವರ ಕೆಲಸ ಕಾರ್ಯಗಳಿಗೆ ಸರ್ಕಾರಿ ಕಛೇರಿಗಳಿಗೆ ಎಡತಾಕುವುದು ನೋಡಿದರೆ ಅಯ್ಯೋ ಎನಿಸುತ್ತದೆ. ಹೀಗಿದೆ ನಮ್ಮ ಆಡಳಿತದ ದೌರ್ಭಲ್ಯಗಳು.
ಇಂದು ನಮ್ಮಲ್ಲಿ ನಾವು ದೇಶಕ್ಕಾಗಿ ದುಡಿಯಬೇಕು ಎಂಬ ಪ್ರಬುದ್ಧತೆಯ ಕೊರತೆ ಎದ್ದು ಕಾಣುತ್ತದೆ. ಆದುದರಿಂದ ಸರಕಾರಿ ಸ್ವಾಮ್ಯದ ಘಟಕಗಳಲ್ಲಿ ಆಡಳಿತಾತ್ಮಕ ಕೊರತೆ ಎದ್ದು ಕಾಣುತ್ತದೆ. ಸರಕಾರಿ ಕಛೇರಿಗಳಲ್ಲಿ ಜನ ಸಾಮಾನ್ಯರ ಕೆಲಸ ಕಾರ್ಯಗಳಿಗೆ ಅಲೆದಾಟ ತಪ್ಪಿದ್ದಲ್ಲ. ಸರಕಾರಿ ನೌಕರರಿಗೆ ಶ್ರೀಸಾಮಾನ್ಯರ ಸೇವೆಗೆ ನಾವಿರುವುದು ಎಂಬುದು ಮರೆತು ಹೊಗಿದೆ. ಅಧಿಕಾರಿಗಳು ಬಡವರ ಅಹವಾಲನ್ನು ಕೇಳುವಂತಹ ವ್ಯವಸ್ಥೆ ಗಗನ ಕುಸುಮವಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತದೆ. ಅದಕ್ಕೆ ಉದಾಹರಣೆ ಎಂದರೆ ಸರಕಾರಿ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಕಛೇರಿಗಳ ಕಾರ್ಯವೈಖರಿ. ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು ನಷ್ಟದ ಹಾದಿ ಹಿಡಿಯುವುದೇ ಇನ್ನೊಂದು ಉದಾಹರಣೆ. ಇನ್ನು ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಜಾತಿವಾದದಿಂದ ಹೊರ ಬಂದಿಲ್ಲ. ನಾವು ಭಾರತೀಯರು ಎಂಬುದನ್ನು ಬಿಟ್ಟು ನಾವು ಇಂತಹ ಜಾತಿಯವರೆಂಬ ಹಣೆಪಟ್ಟಿ ಧರಿಸಿ ವಾಹನಗಳಲ್ಲಿ ಅಂಟಿಸಿಕೊಂಡು ತಿರುಗುತ್ತಿದ್ದೇವೆ.
ಅಖಂಡ ಭಾರತ ಏಕತೆ ಎಂಬ ಮಂತ್ರವನ್ನು ಉಚ್ಚರಿಸುವ ನಾವು ಇಂದು ರಾಜ್ಯಗಳು ಪರಸ್ಪರ ನೀರಿಗಾಗಿ, ಗಡಿಗಾಗಿ, ಭಾಷೆಗಾಗಿ ಹೋರಾಟ ಮಾಡುತ್ತಿದೆ. ನಾವು ನಿಜವಾದ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಬೇಕಾದರೆ ನಮ್ಮನ್ನು ನಾವು ಬದಲಿಸಿಕೊಳ್ಳಬೇಕು. ದೇಶದಲ್ಲಿ ಉತ್ತಮ ಸಂಸದೀಯಪಟುಗಳ ಆಯ್ಕೆಗೆ ಪ್ರಯತ್ನಿಸಬೇಕು. ಜಾತಿ ಎಂಬ ಹಣೆಪಟ್ಟಿಯಿಂದ ಹೊರ ಬಂದು ಬದುಕಬೇಕು. ಸಮಾಜದಲ್ಲಿ ಸಮಾನತೆ ಮೂಡಿಸಬೇಕು. ಮೊದಲಿಗೆ ಭಾರತ ಅಭಿವೃದ್ಧಿ ಹೊಂದಬೇಕಾದರೆ ಭಾರತೀಯರಾದ ನಾವು ಮೈಗಳ್ಳತನ ಬಿಟ್ಟು ದೇಶಾಭಿಮಾನದಿಂದ ದುಡಿಯಬೇಕು. ಚುನಾವಣೆಗಳು ಹಣ, ಹೆಂಡ, ಜಾತಿ ವ್ಯವಸ್ಥೆಯಿಂದ ಮುಕ್ತವಾಗಿಸಬೇಕು. ಆಡಳಿತದಲ್ಲಿ ಚುರುಕು ಮುಟ್ಟಿಸಲು ನಮ್ಮಲ್ಲಿ ಪ್ರತಿಭಟನೆಯನ್ನು ಮೈಗೂಡಿಸಿಕೊಳ್ಳಬೇಕು. ಅವ್ಯವಸ್ಥೆ, ಅನ್ಯಾಯವನ್ನು ಪ್ರಶ್ನಿಸುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು. ಆಗ ನಿಜವಾದ ಸ್ವಾತಂತ್ರ್ಯ ದೊರಕುತ್ತದೆ. ಭಾರತದಲ್ಲಿ ಬಡವರು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದೇವೆ. ಇಂದಿಗೂ ಭಾರತದ 90ರಷ್ಟು ಹಳ್ಳಿಗಳಲ್ಲಿ ಪ್ರಥಮ ಚಿಕಿತ್ಸೆ ನೀಡಲು, ಪ್ರಸೂತಿ ಮಾಡಿಸಲು ಓರ್ವ ವೈದ್ಯನಿಲ್ಲದ ಆಸ್ಪತ್ರೆ ಇದೆ ಎಂದರೆ ನೀವೇ ಊಹಿಸಿ, ನಮ್ಮ ಸ್ವಾತಂತ್ರ್ಯದ ಅರ್ಥ. ಹೀಗೆ ಸಮಸ್ಯೆಗಳು ಅರಣ್ಯೀಕರಣ, ಆಡಳಿತ ವ್ಯವಸ್ಥೆ, ಅಧಿಕಾರಶಾಹಿ, ಶಿಕ್ಷಣ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲೂ ಪ್ರಭುದ್ಧತೆ ಸಾಧಿಸಿಲ್ಲ. ಎಲ್ಲಾ ರಂಗಗಲಲ್ಲೂ ಇಂದು ಭ್ರಷ್ಟಾಚಾರ ಎದ್ದು ಕಾಣುತ್ತದೆ. ಶಾಸನ ಸಭೆಗಳಲ್ಲಿ ಉತ್ತಮ ಸಂಸದೀಯ ಪಟುಗಳ ಕೊರತೆ ಎದ್ದು ಕಾಣುತ್ತದೆ. ಗ್ರಾಮ ಪಂಚಾಯಿತಿಯಿಂದ ಲೋಕಸಭೆಯವರೆಗೆ ಸಭೆಗಳು ಗಲಾಟೆಗಳು ಗೊಂದಲಗಳಲ್ಲಿ ಮುಗಿಯುವುದೇ ಇದಕ್ಕೆ ಉದಾಹರಣೆ.
ನಮ್ಮ ನೆರೆಯ ರಾಷ್ಟ್ರಗಳು ನಾವು ಸ್ವಾತಂತ್ರ್ಯ ಪಡೆದ ನಂತರ ಸ್ವಾತಂತ್ರ್ಯ ಪಡೆದ ದೇಶಗಳು. ಅವರು ಪೂರ್ಣವಾಗಿ ಅಭವೃದ್ಧಿ ಹೊಂದಿದ್ದಾರೆ. ನಾವಿನ್ನೂ ಅಭಿವೃದ್ಧಿ ಹೊಂದುತ್ತಲೇ ಇದ್ದೇವೆ. ಪ್ರಜೆಗಳು ಕೂಡ ಇದಕ್ಕೆ ಜವಾಬ್ದಾರರು. ನಮ್ಮಲ್ಲಿ ನಾವು ದೇಶಕ್ಕಾಗಿ ದುಡಿಯಬೇಕು ಎಂಬ ಪ್ರಭುದ್ಧತೆ ಎದ್ದು ಕಾಣುತ್ತದೆ. ಸ್ವಾತಂತ್ರ್ಯ ದಿನ ಆಚರನೆಗೆ ಸೀಮಿತವೆಂಬುದು ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದಾಗ ಅದು ನಿಜವೆನಿಸುತ್ತದೆ. ಭಾರತೀಯರಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು. ಇಂದಿನ ಸ್ವಾತಂತ್ರ್ಯ ದಿನಾಚರಣೆ ಬರೀ ಬೂಟಾಟಿಕೆ ಆಗಿದೆ ಹೊರತು ನಿಜವಾದ ಆಚರಣೆ ಅಂತು ಅಲ್ಲ. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವವರು ತಮ್ಮ ಪಾಲಿನ ಕರ್ತವ್ಯವನ್ನು ಮುಗಿಸುತ್ತಾರೆ ಹೊರತು ದೇಶಾಭಿಮಾನ ಮೂಡಿಸಲು ಅಲ್ಲ. ವಿದ್ಯಾವಂತರು ದಿನಾಚರಣೆಗಳಿಂದ ದೂರ ಉಳಿಯುತ್ತಿದ್ದಾರೆ. ಬಡವರು, ರೈತರು ತಮ್ಮ ಹೊಟ್ಟೆಪಾಡಿಗಾಗಿ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಿಜವಾದ ಸ್ವಾತಂತ್ರ್ಯ ಯಾವುದು ಎಂದು ಅರಿಯಬೇಕಿದೆ. ನಮ್ಮಲ್ಲಿರುವುದು ನಿಜವಾದ ದೇಶಾಭಿಮಾನ ಅಲ್ಲವೆಂಬುದು ಕಟು ಸತ್ಯ. ಮುಂದಿನ ದಿನಗಳಲ್ಲಾದರೂ ನಿಜವಾದ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಆಗಲಿ ಎಂಬುದೇ ಈ ಬರವಣಿಗೆಯ ಉದ್ದೇಶ. ಕೊನೆಯ ಮಾತು: ಯಾರಿಗೆ ಬಂತು? ಎಲ್ಲಿಗೆ ಬಂತು? ಯಾತಕ್ಕೆ ಬಂತು? 47ರ ಸ್ವಾತಂತ್ರ್ಯ ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ ಮುಂದಿನ ಪೀಳಿಗೆಗೆ.
ಬರಹ : ಬಾಳೆಯಡ ಕಿಶನ್ ಪೂವಯ್ಯ
ವಕೀಲರು ಮತ್ತು ನೋಟರಿ
ಮಡಿಕೇರಿ
9448899554