ಮಡಿಕೇರಿ ಆ.16 NEWS DESK : ಕೊಡಗು ಜಿಲ್ಲೆಯಲ್ಲಿ ನೈರುತ್ಯ ಮುಂಗಾರು ಮಳೆಯು ಸೆಪ್ಟೆಂಬರ್ 30 ವರೆಗೂ ಇರಲಿದ್ದು, ಆ ದಿಸೆಯಲ್ಲಿ ಆಗಸ್ಟ್ ಅಂತ್ಯದವರೆಗೂ ಹೆಚ್ಚಿನ ಎಚ್ಚರ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿರ್ದೇಶನ ನೀಡಿದ್ದಾರೆ. ವಿಡಿಯೊ ಸಂವಾದ ಮೂಲಕ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಜಿಲ್ಲೆಯ ಭೂ ಕುಸಿತ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರ ವಹಿಸಬೇಕು. ಈಗ ಮಳೆ ಕಡಿಮೆ ಆಗಿದ್ದರೂ ಸಹ ಮುಂದಿನ ದಿನಗಳಲ್ಲಿ ಉತ್ತಮ ಮಳೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಭಾರತೀಯ ಹವಾಮಾನ ಇಲಾಖೆ ಕಾಲಾ ಕಾಲಕ್ಕೆ ಹೊರಡಿಸುವ ಮಾಹಿತಿಯಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಅಧಿಕಾರಿಗಳು ಮತ್ತು ಎಂಜಿನಿಯರ್‍ಗಳು ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಪ್ರಥಮ ಆದ್ಯತೆ ನೀಡಬೇಕು. ನೋಡಲ್ ಅಧಿಕಾರಿಗಳು, ವಿವಿಧ ವಿಭಾಗದ ಎಂಜಿನಿಯರ್‍ಗಳು, ತಾ.ಪಂ.ಇಒಗಳು, ತಹಶೀಲ್ದಾರರು ಸೇರಿದಂತೆ ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆ ಸಂದರ್ಭದಲ್ಲಿ ಲೋಕೋಪಯೋಗಿ, ಪಂಚಾಯತ್ ರಾಜ್ ಹಾಗೂ ನೀರಾವರಿ ಇಲಾಖೆ ವ್ಯಾಪ್ತಿಯ ರಸ್ತೆ ಗುಂಡಿ ಮುಚ್ಚುವ ಬಗ್ಗೆ ಸುಧೀರ್ಘ ಚರ್ಚೆ ಆಗಿದ್ದು, ಈ ಬಗ್ಗೆ ತ್ವರಿತ ಕ್ರಮ ವಹಿಸುವಂತೆ ಎಂಜಿನಿಯರ್‍ಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ರಸ್ತೆ ಗುಂಡಿ ಬಿದ್ದಿರುವ ಬಗ್ಗೆ ಹಾಗೂ ರಸ್ತೆಯ ಗುಂಡಿ ಮುಚ್ಚಿರುವ ಸಂಬಂಧ ದಿನಾಂಕ ಜೊತೆಗೆ, ಜಿಪಿಎಸ್ ಛಾಯಾಚಿತ್ರ ಸಹಿತ ಮಾಹಿತಿ ಒದಗಿಸಬೇಕು. ಈ ಬಗ್ಗೆ ಆಯಾಯ ತಾಲ್ಲೂಕಿನ ತಹಶೀಲ್ದಾರರು ಗಮನಿಸಬೇಕು. ಹಣವನ್ನು ಸಂಬಂಧಪಟ್ಟ ಎಂಜಿನಿಯರಿಂಗ್ ಇಲಾಖೆಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಶಾಲೆಗಳ ಮೇಲ್ಛಾವಣಿ ಸ್ಥಿತಿಗತಿ ಬಗ್ಗೆ ಗಮನಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸಲಹೆ ಮಾಡಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ರಂಗಧಾಮಪ್ಪ ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ವಿವಿಧ ಇಲಾಖೆ ಅಧಿಕಾರಿಗಳು, ಎಂಜಿನಿಯರ್‍ಗಳು, ತಾ.ಪಂ.ಇಒಗಳು, ತಹಶೀಲ್ದಾರರು, ಪೌರಾಯುಕ್ತರು ಇದ್ದರು.