ಮಡಿಕೇರಿ ಆ.17 NEWS DESK : 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೊಣಂಜಗೇರಿ ಪಂಚಾಯತಿ ವ್ಯಾಪ್ತಿಯ ಪಾರಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೆಲ್ಟ್, ಟೈ ಮತ್ತು ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಕೊಣಂಜಗೇರಿ ಗ್ರಾ.ಪಂ ಅಧ್ಯಕ್ಷ ಪಾಡೆಯಂಡ ಕಟ್ಟಿಕುಶಾಲಪ್ಪ ಶಾಲಾ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳಿಗೆ ಬೆಲ್ಟ್, ಟೈ ಮತ್ತು ಗುರುತಿನ ಚೀಟಿ ವಿತರಿಸಿದರು. ನಂತರ ಮಾತನಾಡಿದ ಅವರು, ಈ ದೇಶದ ಮಣ್ಣು, ಪ್ರಕೃತಿ ನಮಗೆ ಎಲ್ಲವನ್ನು ಕೊಟ್ಟಿದೆ. ಇಂತಹ ಸುಂದರ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಪ್ರತಿಯೊಬ್ಬ ಪ್ರಜೆಯೂ ಯೋಧರಂತೆ ದುಡಿಯಬೇಕು. ಮಕ್ಕಳಿಗೆ ಈಗಿನಿಂದಲೇ ರಾಷ್ಟ್ರೀಯತೆಯ ಅರಿವು ಮತ್ತು ಆಸಕ್ತಿ ಮೂಡಿಸಬೇಕು ಎಂದರು. ಶಾಲಾ ಸಹ ಶಿಕ್ಷಕ ಕಿಶೋರ್ ಕುಮಾರ್ ಮಾತನಾಡಿ, ಲಕ್ಷಾಂತರ ತ್ಯಾಗಮಯಿಗಳ ಬಲಿದಾನದ ಫಲವಾಗಿ ನಾವಿಂದು ಸ್ವತಂತ್ರ ಬದುಕನ್ನು ನಡೆಸುತ್ತಿದ್ದೇವೆ. ಹಿರಿಯರ ತ್ಯಾಗ ಬಲಿದಾನ ವ್ಯರ್ಥವಾಗಬಾರದೆಂದರು. ನಾವೆಲ್ಲರೂ ಇಂದಿನಿಂದಲೇ ದೇಶ ಬೆಳೆಸುವ ಕಾರ್ಯದಲ್ಲಿ ತೊಡಗಬೇಕು ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ, ಶಾಲಾ ಎಸ್‌ಡಿಎಂಸಿ ಸದಸ್ಯರು, ಶಿಕ್ಷಕಿಯರಾದ ಸುಮಿತ್ರ ಮತ್ತು ಮಂಜುಳಾ ಹಾಜರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ವೇದಪ್ರಸಾದ್ ದಿನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಿಶೋರ್ ಕುಮಾರ್ ನಿರ್ವಹಿಸಿದರು. ನಂತರ ಮಕ್ಕಳಿಗೆ ಸಿಹಿಯೂಟ ನೀಡಲಾಯಿತು.