ಮಡಿಕೇರಿ NEWS DESK ಆ.17 : ವನ್ಯಜೀವಿ-ಮಾನವ ಸಂಘರ್ಷ ತಡೆಗೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಕರ್ನಾಟಕ ರಾಜ್ಯ ವನ್ಯಜೀವಿ ಸಂರಕ್ಷಣಾ ಸಮಿತಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಅಧ್ಯಕ್ಷರಾಗಿ, ಅರಣ್ಯ ಸಚಿವರು ಉಪಾಧ್ಯಕ್ಷರಾಗಿ, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಹೋರಾಟಗಾರರನ್ನು ಒಳಗೊಂಡ ಸಮಿತಿ ಕಾರ್ಯನಿರ್ವಹಿಸುತ್ತಿದೆ. ವನ್ಯಜೀವಿ-ಮಾನವ ಸಂಘರ್ಷಕ್ಕೆ ವೈಜ್ಞಾನಿಕ ಪರಿಹಾರ ಕಂಡುಹಿಡಿಯುವ ಕಾರ್ಯ ಪ್ರಗತಿಯಲ್ಲಿದೆ ಎಂದರು. ಅತೀ ಹೆಚ್ಚು ವನ್ಯಜೀವಿ-ಮಾನವ ಸಂಘರ್ಷ ನಡೆಯುವ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದ್ದು, ಅದರಲ್ಲೂ ಕೊಡಗು ಜಿಲ್ಲೆಯ ವಿರಾಜಪೇಟೆ ಕ್ಷೇತ್ರದಲ್ಲಿ ಸಾಕಷ್ಟು ಪ್ರಾಣಹಾನಿ, ಅಂಗವೈಫಲ್ಯ, ಬೆಳೆಹಾನಿ ಸಂಭವಿಸಿ ರೈತರು, ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅರಣ್ಯ ಮಂತ್ರಿಗಳನ್ನು ಖುದ್ದು ಜಿಲ್ಲೆಗೆ ಕರೆತಂದು ಸಾವುನೋವುಗಳು ಉಂಟಾದ ಮನೆಗಳಿಗೆ, ರೈತರ ಜಮೀನುಗಳಿಗೆ ಭೇಟಿ ನೀಡಿ ಸಮಸ್ಯೆಯ ತೀವ್ರತೆಯನ್ನು ತಿಳಿಸಿದ್ದಾರೆ. ಅಲ್ಲದೇ ವಿಶ್ವ ಆನೆಯ ದಿನಾಚರಣೆಯ ಹಿನ್ನೆಲೆ ಕರ್ನಾಟಕ ಸರ್ಕಾರ, ಅರಣ್ಯ ಇಲಾಖೆ ಆನೆ ಮತ್ತು ಮಾನವ ಸಂಘರ್ಷಕ್ಕೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆದ ವಿಚಾರಸಂಕಿರಣದಲ್ಲಿ ಶಾಸಕ ಎ,ಎಸ್.ಪೊನ್ನಣ್ಣ ಅವರು ವಿಶೇಷ ಆಸಕ್ತಿ ವಹಿಸಿ ತಾಂತ್ರಿಕ ತೊಡಕುಗಳನ್ನು ನಿವಾರಣೆ ಮಾಡಲು ಮೊದಲನೆ ಹೆಜ್ಜೆ ಇಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಐದು ರಾಜ್ಯಗಳ ಮುಖ್ಯಮಂತ್ರಿ ಹಾಗೂ ವಿದೇಶದ ತಜ್ಞರು ಪಾಲ್ಗೊಂಡಿದ್ದರು ಎಂದು ಸಂಕೇತ್ ಪೂವಯ್ಯ ಹೇಳಿದರು. ಅರಣ್ಯದಂಚಿನಲ್ಲಿ ಕಂದಕಗಳ ನಿರ್ಮಾಣ, ಸೋಲಾರ್ ಬೇಲಿ ನಿರ್ಮಾಣ, ಹೆಚ್ಚಿನ ರೈಲ್ವೆಹಳಿಗಳನ್ನು ಅಳವಡಿಸುವುದು, ಬೆಳೆಹಾನಿ ಪರಿಹಾರ, ಕಾನೂನುಗಳಲ್ಲಿ ಮಾರ್ಪಾಡು, ಅರ್ಜಿಗಳ ವಿಲೇವಾರಿ, ತೋಟಗಳಲ್ಲಿ ನೆಲೆ ನಿಂತಿರುವ ಕಾಡಾನೆಗಳ ಪುನರ್ವಸತಿಗೆ ವೈಜ್ಞಾನಿಕ ಯೋಜನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಸರ್ಕಾರದ ಗಮನ ಸೆಳೆಯಲಾಗುವುದು. ಮೂರು ವರ್ಷಗಳ ಅವಧಿಯಲ್ಲಿ ಕಾಡಾನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.










