ಮಡಿಕೇರಿ ಆ.19 NEWS DESK : ಸುಂಟಿಕೊಪ್ಪ ಹೋಬಳಿಯ ವಿವಿಧ ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಆತಂಕ ಸೃಷ್ಟಿಸಿರುವ ಕಾಡಾನೆಯೊಂದು ಭಾನುವಾರ ರಾತ್ರಿ ಎಮ್ಮೆಗುಂಡಿ ಮತ್ತಿತರ ಪ್ರದೇಶದಲ್ಲಿ ಕಾಣಿಸಿಕೊಂಡಿತು. ಮುಖ್ಯ ಬೀದಿಯಲ್ಲೇ ರಾಜಾರೋಷವಾಗಿ ಸಂಚರಿಸಿದ ಒಂಟಿ ಸಲಗ ಗ್ರಾಮಸ್ಥರಲ್ಲಿ ಆತಂಕವನ್ನು ಮೂಡಿಸಿತು. ಸುತ್ತಮುತ್ತಲ ತೋಟಗಳಿಗೆ ನುಗ್ಗಿ ಹಾನಿಗೊಳಿಸುತ್ತಿರುವ ಕಾಡಾನೆ ಕೃಷಿ ಫಸಲನ್ನು ತಿಂದು ತೇಗುತ್ತಿದೆ. ಅರಣ್ಯ ಭಾಗದಲ್ಲಿ ಆಹಾರದ ಕೊರತೆ ಉಂಟಾಗಿ ಈ ಒಂಟಿ ಸಲಗ ತೋಟಗಳನ್ನೇ ಅವಲಂಬಿಸಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಹಲವು ಬಾರಿ ಮಾನವರ ಮೇಲೆ ದಾಳಿಗೆ ಮುಂದಾಗಿದ್ದ ಈ ಕಾಡಾನೆಯನ್ನು ಅನಾಹುತ ಸಂಭವಿಸುವ ಮೊದಲು ಸ್ಥಳಾಂತರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.









