ಕುಶಾಲನಗರ ಆ.23 NEWS DESK : ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಸಂಘ, ಎಸ್.ಡಿ.ಎಂ.ಸಿ. ಮತ್ತು ಎನ್.ಎಸ್.ಎಸ್.ಘಟಕದ ಆಶ್ರಯದಲ್ಲಿ ರಾಷ್ಟ್ರೀಯ ಅಂತರಿಕ್ಷ ದಿನಾಚರಣೆಯನ್ನು ಆಚರಿಸುವ ಮೂಲಕ ಚಂದ್ರಯಾನ ಯಶಸ್ವಿ ಕುರಿತು ವಿದ್ಯಾರ್ಥಿಗಳಿಗೆ
ಮಾಹಿತಿ ನೀಡಲಾಯಿತು. ರಾಷ್ಟ್ರೀಯ ಅಂತರಿಕ್ಷ ದಿನಾಚರಣೆಯ ಮಹತ್ವ ಕುರಿತು ಮಾಹಿತಿ ನೀಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್,
ಚಂದ್ರಯಾನ-3 ರ ಯಶಸ್ಸಿನ ಸ್ಮರಣಾರ್ಥವಾಗಿ ಆಗಸ್ಟ್ 23ರಂದು ಬಾಹ್ಯಾಕಾಶ ದಿನ ಆಚರಿಸಲಾಗುತ್ತಿದೆ. ಇಂತಹ ದಿನಗಳು ವಿದ್ಯಾರ್ಥಿಗಳಲ್ಲಿ
ಬಾಹ್ಯಾಕಾಶದ ಕುರಿತು ವೈಜ್ಞಾನಿಕ ಸಂಶೋಧನೆಗಳನ್ನು ಮತ್ತು ಸಾಹಸಗಳನ್ನು ಕೈಗೊಳ್ಳಲು ಪ್ರೇರೇಪಣೆ ಸಿಗುತ್ತದೆ ಎಂದರು. ಅಂತರಿಕ್ಷ ಕ್ಷೇತ್ರದಲ್ಲಿ ನಮ್ಮ ದೇಶವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೇರಿಸಲು ಈ ದಿನ ಸಹಕಾರಿಯಾಗಿದೆ ಎಂದು ಪ್ರೇಮಕುಮಾರ್ ತಿಳಿಸಿದರು. ಭಾರತದ ಬಾಹ್ಯಾಕಾಶ ಸಾಧನೆಗಳ ಕುರಿತು ಮಾಹಿತಿ ನೀಡಿದ ಶಾಲೆಯ ವಿಜ್ಞಾನ ಸಂಘದ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ ಮಾತನಾಡಿ, ಬಾಹ್ಯಾಕಾಶ ಸಾಧನೆಗಳ ಪೈಕಿ ಚಂದ್ರಯಾನ-3 ಯೋಜನೆಗೆ ವಿಶೇಷ ಸ್ಥಾನವಿದೆ. ಕಳೆದ ವರ್ಷ ಆ.23ರಂದು ಚಂದ್ರಯಾನ-3 ಮಿಷನ್‌ನ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದ ಕ್ಷಣದಲ್ಲಿ ಇತಿಹಾಸವೇ ಸೃಷ್ಟಿಯಾಯಿತು. ಈ ಸ್ಥಳಕ್ಕೆ ತಲುಪಿದ ಮೊದಲ ರಾಷ್ಟ್ರ ಭಾರತವಾಯಿತು. ಈ ಸಂಭ್ರಮವನ್ನು ಸದಾ ಸ್ಮರಣೀಯಗೊಳಿಸಲು ಭಾರತ ಸರಕಾರವು ಪ್ರಸಕ್ತ ವರ್ಷದಿಂದ ಆಗಸ್ಟ್ 23ರಂದು “ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಆಚರಿಸಲಾಗುತ್ತಿದೆ ಎಂದರು. ಅಂತರಿಕ್ಷಕ್ಕೆ ಉಡಾಯಿಸುವ ರಾಕೇಟ್ ಉಪಕರಣದ ಮಾದರಿಯನ್ನು ಮಕ್ಕಳಿಗೆ ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿ ಅಂತರಿಕ್ಷ ಯಾನದ ಬಗ್ಗೆ ವಿವರಿಸಲಾಯಿತು. 2024ರ ಆಗಸ್ಟ್ 23ರಂದು ಚಂದ್ರನನ್ನು ಸ್ಪರ್ಶಿಸಿದ ದಿನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಶಾಲಾ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್, ಬಿ.ಡಿ.ರಮ್ಯ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಕೆ.ಟಿ.ಸೌಮ್ಯ, ಸಿಬ್ಬಂದಿ ಎಂ.ಉಷಾ ಇದ್ದರು.









