

ಗುಂಡ್ಲುಪೇಟೆ NEWS DESK ಡಿ.21 : ಹುಲಿಗಳ ನಡುವಿನ ಕಾದಾಟದ ಸಂದರ್ಭ ದಾಳಿಗೆ ಸಿಲುಕಿ ಗಾಯಗೊಂಡಿದ್ದ ಗಂಡು ಹುಲಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮುಕ್ತಿ ಕಾಲೋನಿಯ ರೈತರೊಬ್ಬರ ಬಾಳೆ ತೋಟದಲ್ಲಿ ಸೆರೆ ಹಿಡಿದಿದ್ದಾರೆ.
ಮುಕ್ತಿ ಕಾಲೋನಿಯ ಲೋಕೇಶ್ ಎಂಬುವವರ ಬಾಳೆ ತೋಟದಲ್ಲಿ ಬೆಳ್ಳಂಬೆಳಗ್ಗೆ ಹುಲಿ ಕಾಣಿಸಿಕೊಂಡು ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯ ವ್ಯಾಪ್ತಿಯ ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿತು. ಬಾಳೆ ತೋಟದಲ್ಲಿ ವಿಶ್ರಾಂತಿಗೆ ಜಾರಿದ್ದ ಹುಲಿಗೆ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯಲಾಯಿತು. ಸೆರೆಯಾದ ಹುಲಿಯ ಮೈಮೇಲೆ ಗಾಯಗಳು ಗೋಚರಿಸಿದೆ. ಕಾರ್ಯಾಚರಣೆಯಲ್ಲಿ ಬಂಡೀಪುರ ಸಿಎಫ್ ಪ್ರಭಾಕರನ್, ಎಸಿಎಫ್ ಸುರೇಶ್, ಆರ್.ಎಫ್.ಓ ಪುನೀತ್, ಡಿ.ಆರ್.ಎಫ್.ಓ ಶಿವಕುಮಾರ್ ಮತ್ತಿತರ ಅರಣ್ಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.










