
ಮಡಿಕೇರಿ ಆ.29 NEWS DESK : ಅಭಿವೃದ್ಧಿ ಹಾಗೂ ಆಧುನೀಕರಣವನ್ನಷ್ಟೆ ಕೇಂದ್ರವಾಗಿಸಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಕೃತಿಯನ್ನು ವಿವೇಚನಾರಹಿತವಾಗಿ ಬಳಸಿಕೊಳ್ಳುತ್ತಿರುವುದೇ ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗಿದೆ. ಮನು ಕುಲ ಉಳಿಯಬೇಕಾದರೆ ಪಶ್ಚಿಮಘಟ್ಟ ಸಾಲಿನ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಿಪಿಐ(ಎಂಎಲ್)ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಿಂಹ ಠಾಕೂರ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆಯ ಕೇರಳ ರಾಜ್ಯದ ವಯನಾಡಿನಲ್ಲಿ ನಡೆದ ಪ್ರಾಕೃತಿಕ ವಿಕೋಪದಿಂದ ನೂರಾರು ಮಂದಿಯನ್ನು ನಾವು ಕಳೆದುಕೊಂಡಿದ್ದು, ಇದಕ್ಕೆ ಪಕ್ಷ ಸಹಾನುಭೂತಿಯನ್ನು ಹೊಂದಿದೆ. ಇದೇ ಸಂದರ್ಭ ಇಂತಹ ಘಟನೆಗಳಿಗೆ ಸರ್ಕಾರಗಳ ವಿವೇಚನಾ ರಹಿತ ನಿಲುವುಗಳೇ ಕಾರಣ ಎಂದರು. ಕೊಡಗು ಜಿಲ್ಲೆ ಕೂಡ ಪಶ್ಚಿಮಘಟ್ಟಗಳ ಸಾಲಿನಲ್ಲೆ ಬರುತ್ತಿದ್ದು, ಇಲ್ಲಿನ ಪರಿಸರವನ್ನು ಕಾಯ್ದುಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಹರಿಸಬೇಕು ಎಂದು ತಿಳಿಸಿದರು.
::: ಅಸ್ಥಿರಗೊಳಿಸವ ಪ್ರಯತ್ನ ::: ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಜನರಿಂದ ಆಯ್ಕೆಯಾದ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ “ಕಮಲ ಕಾರ್ಯಾಚರಣೆ” ಯಂತಹ ಪ್ರಯತ್ನಗಳಿಗೆ ಮುಂದಾಗಿದೆ ಎಂದು ಟೀಕಿಸಿದ ಪ್ರದೀಪ್ ಸಿಂಹ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದು ಉತ್ತಮ ಬೆಳವಣಿಗೆಯಲ್ಲವೆಂದು ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ. ಬದಲಾಗಿ ವಿವಿಧ ಸ್ವಹಿತಾಸಕ್ತಿಯ ನಡೆಗಳು ಮತ್ತು ಭ್ರಷ್ಟಾಚಾರದ ಆರೋಪ ಪ್ರಕರಣಗಳಲ್ಲಿ ಸಿಲುಕಿಕೊಂಡಿದೆ ಎಂದು ಟೀಕಿಸಿದರು. ಕೇಂದ್ರ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರು, ಅದು ಇತರೆ ಪಕ್ಷಗಳ ಬೆಂಬಲದೊಂದಿಗೆ ಆಡಳಿತವನ್ನು ಹಿಡಿದುಕೊಂಡಿದೆ. ಅಧಿಕಾರಕ್ಕೆ ಬರುವುದಕ್ಕೂ ಮುನ್ನ ರಾಷ್ಟ್ರದ ಕೃಷಿಕರ ಹಿತ ಚಿಂತನೆಗಳಡಿ ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪನ್ನಗಳಿಗೆ ‘ಕನಿಷ್ಟ ಬೆಂಬಲ ಬೆಲೆ'(ಎಂಎಸ್‍ಪಿ) ನೀಡುವ ಭರವಸೆಯನ್ನು ನೀಡಿತ್ತಾದರು, ಪ್ರಸ್ತುತ ಕೃಷಿಕರಿಗೆ ಎಂಎಸ್‍ಪಿ ನೀಡುವ ಬದಲಾಗಿ, ತಮ್ಮ ಸರ್ಕಾರದ ಆಧಾರ ಸ್ತಂಭವಾದ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ದು ಅವರನ್ನು ಓಲೈಸಲು ಬಿಹಾರ ಮತ್ತು ಆಂಧ್ರ್ರಪ್ರದೇಶಕ್ಕೆ ಅತೀ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಎಂಎಸ್‍ಪಿಯನ್ನು ಆ ರಾಜ್ಯಗಳಿಗೆ ನೀಡಿರುವುದಾಗಿ ಲೇವಡಿ ಮಾಡಿದರು. ಸಿಪಿಐ(ಎಂಎಲ್) ರಾಜ್ಯ ಕಾರ್ಯದರ್ಶಿ ಡಿ.ಹೆಚ್.ಪೂಜಾರ್ ಮಾತನಾಡಿ, ರಾಜ್ಯದ ಈ ಹಿಂದಿನ ಸರ್ಕಾರ ಜನ ವಿರೋಧಿಯಾಗಿ ತಂದಿದ್ದ ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆಗಳ ತಿದ್ದುಪಡಿಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂತೆಗೆದುಕೊಳ್ಳಬಹುದೆನ್ನುವ ನಿರೀಕ್ಷೆ ಇತ್ತು. ಆದರೆ, ಈ ಸರ್ಕಾರ ಅಂತಹ ನಿಲುವನ್ನು ತೆಗೆದುಕೊಳ್ಳುವುದಕ್ಕೆ ಬದಲಾಗಿ ಬೆಂಗಳೂರು ಸುತ್ತಮುತ್ತಲಿನಲ್ಲಿ ಸಹಸ್ರಾರು ಏಕರೆ ಜಾಗವನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ನೀಡುತ್ತಿರುವುದಾಗಿ ಟೀಕಿಸಿದರು. ಸಿಪಿಐಎಂ(ಎಂಎಲ್) ರಾಜ್ಯ ಸಮಿತಿ ಸದಸ್ಯ ಡಿ.ಎಸ್. ನಿರ್ವಾಣಪ್ಪ ಮಾತನಾಡಿ, ಪ್ರಸ್ತುತ ಅರಣ್ಯ ಸಂರಕ್ಷಣೆಯ ಹೆಸರಿನಲ್ಲಿ ಅರಣ್ಯದ ಅಂಚಿನಲ್ಲಿರುವ ಆದಿವಾಸಿಗಳು ಮತ್ತು ಬಡ ಬರ್ಗವನ್ನು ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆಯುತ್ತಿದೆ. ಅದೇ, ಬೃಹತ್ ಸಂಸ್ಥೆಗಳು ಒತ್ತುವರಿ ಮಾಡಿಕೊಂಡಿರುವ ನೂರಾರು ಏಕರೆ ಜಾಗವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿಲ್ಲವೆಂದು ಆರೋಪಿಸಿದರು. ಅರಣ್ಯದ ಅಂಚಿನಲ್ಲಿರುವ ಆದಿವಾಸಿಗಳು ಹಾಗೂ ಬಡವರ್ಗದ ಮಂದಿಗೆ ಅರಣ್ಯಹಕ್ಕು ಕಾಯ್ದೆಯಡಿ ಇದ್ದಲ್ಲಿಯೇ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಐ(ಎಂಎಲ್) ಸದಸ್ಯರುಗಳಾದ ಹೆಚ್.ಜೆ.ಪ್ರಕಾಶ್ ಹಾಗೂ ಅಣ್ಣಪ್ಪ ಉಪಸ್ಥಿತರಿದ್ದರು.










