ಮಡಿಕೇರಿ ಆ.29 NEWS DESK : ಹಸಿರ ಪರಿಸರ, ಜಲಪ್ರದೇಶಗಳ ಸಂರಕ್ಷಣೆಗಾಗಿ ಸರ್ಕಾರ ಸೂಕ್ಷ್ಮ ಪರಿಸರ ವಲಯದ ಕಾನೂನನ್ನು ಜಾರಿಗೆ ತಂದಿದೆ. ಆದರೆ ಕೊಡಗಿನಲ್ಲಿ ಈ ಕಾನೂನು ಬಂಡವಾಳಶಾಹಿಗಳಿಗೆ ಅನ್ವಯವಾಗುತ್ತಿಲ್ಲ, ಬದಲಿಗೆ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮೇಲೆ ಹೇರಲಾಗುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ. ಸಿದ್ದಾಪುರದ ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‍ಸಿ ವತಿಯಿಂದ ಮೂರ್ನಾಡಿನಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಆದಿಮಸಂಜಾತ ಕೊಡವ ಬುಡಕಟ್ಟು ಜನರು ಇಲ್ಲಿಯವರೆಗೆ ಹಸಿರಿನ ಕೊಡವ ಭೂಮಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಇಂದು ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್, ಬೃಹತ್ ಭೂಪರಿವರ್ತನೆ, ಭೂವಿಲೇವಾರಿ ಮಾಫಿಯಾಗಳು ಹಾಗೂ ಕಪ್ಪುಹಣದ ಬಂಡವಾಳಶಾಹಿಗಳು ಕೊಡವಲ್ಯಾಂಡ್ ನ್ನು ನಾಶ ಮಾಡುತ್ತಿದ್ದಾರೆ ಮತ್ತು ಕೊಡವರನ್ನು ಬಲಿಪಶು ಮಾಡುತ್ತಿದ್ದಾರೆ. ಈ ಎಲ್ಲಾ ಮಾಫಿಯಾಗಳಿಗೆ ಆಡಳಿತ ವ್ಯವಸ್ಥೆಯ ಕೃಪಾ ಕಟಾಕ್ಷವಿದೆ. ಕೊಡವರಿಗೆ ಮಾತೃಭೂಮಿಯಲ್ಲಿ ನೆಲೆ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ. ಇದಕ್ಕೆ ಕೊಡವ ವಿರೋಧಿಗಳ ಬೆಂಬಲವಿದೆ ಎಂದು ಆರೋಪಿಸಿದರು. ರಾಷ್ಟ್ರೀಯ ಹೆದ್ದಾರಿಯ ಕುಟ್ಟ ಸಮೀಪದ ಪೂಜೆಕಲ್ಲು ಗ್ರಾಮದಲ್ಲಿ ಇತ್ತೀಚೆಗೆ ಜಲಗರ್ಭ ಮತ್ತು ಭೂಗರ್ಭ ಸ್ಫೋಟವಾಗಿದೆ. ಇಲ್ಲಿ ಸಂಭವಿಸಿರುವ ಅನಾಹುತ ಲಕ್ಷ್ಮಣ ತೀರ್ಥ ವ್ಯಾಪ್ತಿಗೂ ವ್ಯಾಪಿಸಿ ಕ್ರಮೇಣ ಇಡೀ ಕೊಡಗಿಗೆ ಅಪಾಯ ಎದುರಾಗಬಹುದು. ಕುಟ್ಟ ಅತಿ ಎತ್ತರದ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿದ್ದು, ವಿಶ್ವ ಪಾರಂಪರಿಕ ತಾಣವಾಗಿದೆ. ಆದರೆ ಸರಕಾರದ ಕಾನೂನು ಕೊಡವರಿಗೆ ಮಾತ್ರ ಅನ್ವಯವಾಗುತ್ತಿದ್ದು, ಬಂಡವಾಳಶಾಹಿಗಳು ಆಡಳಿತ ವ್ಯವಸ್ಥೆಯ ಕೃಪಾ ಕಟಾಕ್ಷದಿಂದ ಯಾವುದೇ ಸೂಕ್ಷ್ಮ ಪರಿಸರ ವಲಯದ ಕಾನೂನಿಗೆ ಒಳಪಡುತ್ತಿಲ್ಲ. ಕೊಡವರು ಮಾತ್ರ ಎಲ್ಲಾ ಕಾನೂನುಗಳಿಗೆ ಒಳಪಟ್ಟು ಆಡಳಿತ ವ್ಯವಸ್ಥೆಯಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಪ್ರಕೃತಿಯ ಮೇಲೆ ಯಾವುದೇ ರೀತಿಯ ದಾಳಿಯಾದರೂ ಆಡಳಿತ ವ್ಯವಸ್ಥೆ ಮಾತ್ರ ತಟಸ್ಥ ಧೋರಣೆ ಅನುಸರಿಸುತ್ತಿದೆ. ಕೊಡವರು ಹೋರಾಟದ ಮೂಲಕ ವೇದನೆಯನ್ನು ಬಿಚ್ಚಿಟ್ಟರೂ ಯಾವುದೇ ಸ್ಪಂದನೆ ಮತ್ತು ರಕ್ಷಣೆ ಇಲ್ಲದಾಗಿದೆ ಎಂದು ಆರೋಪಿಸಿದರು.
ಹಾರಂಗಿ ಸೇರಿದಂತೆ ಅಪಾಯಕಾರಿ ಕಟ್ಟೆಗಳನ್ನು ತೆರವುಗೊಳಿಸುವ ಅನಿವಾರ್ಯತೆ ಇದೆ. ಆಗಸ್ಟ್ 22 ಮತ್ತು 23 ರಂದು ಕುಶಾಲನಗರ ಹೋಬಳಿಯಾದ್ಯಂತ ಆತಂಕಕಾರಿ ಭೂಕಂಪನವಾಗಿದೆ. 60 ವರ್ಷಗಳ ಹಿಂದೆ ಹಾರಂಗಿಕಟ್ಟೆ ಕಟ್ಟುವ ಸಲುವಾಗಿ ಅಲ್ಲಿನ ಇಟ್ಟಿಮಾಡು ಪರ್ವತ ಬಂಡೆಕಲ್ಲುಗಳನ್ನು ಸತತವಾಗಿ ವರ್ಷದ 365 ದಿನ ಎಂಟು ಹತ್ತು ವರ್ಷಗಳ ಕಾಲ ಸಿಡಿಮದ್ದುಗಳನ್ನು ಸ್ಪೋಟಿಸಿದ ಪರಿಣಾಮ ಜಲನಾಳ ಮತ್ತು ಭೂಮಿಯ ನರನಾಡಿಗಳ ಕಂಪನ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದರು. ಆರ್ಥಿಕವಾಗಿ ಹಿಂದುಳಿದಿರುವ ಕೊಡವರು ಸ್ವಾಭಿಮಾನದಿಂದ ಜೀವನ ಸಾಗಿಸಲು ಬ್ಯಾಂಕ್ ಮತ್ತು ಸಹಕಾರ ಸಂಘಗಳು ಸಾಲದ ಸೌಲಭ್ಯ ನೀಡಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದರು. ಕೊಡವ ಲ್ಯಾಂಡ್ ನ್ನು ಉಳಿಸಿಕೊಳ್ಳುವುದಕ್ಕಾಗಿ ಸಿಎನ್‍ಸಿ ಸಂಘಟನೆ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣ, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಆದರೆ ಅಧಿಕಾರದಲ್ಲಿರುವವರು ಹೋರಾಟದ ದಿಕ್ಕು ತಪ್ಪಿಸಿ ಜನರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಿದ್ದು, ಹೋಂಸ್ಟೇ ಮತ್ತು ಗೋದಾಮುಗಳ ನಿರ್ಮಾಣಕ್ಕೆ ಅನುಮತಿ ನೀಡದೆ ಸತಾಯಿಸಲು ಆರಂಭಿಸಿದ್ದಾರೆ. ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮಾತೃಭೂಮಿ ಕೊಡವಲ್ಯಾಂಡ್ ಗೆ ಸಂಚಕಾರವಾಗಬಲ್ಲ ಬೃಹತ್ ಭೂಪರಿವರ್ತನೆಗೆ ಮಾತ್ರ ಗುಪ್ತವಾಗಿ ಅನುಮತಿ ನೀಡುತ್ತಿದ್ದಾರೆ. ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ ಸರ್ಕಾರವೇ ನೇರವಾಗಿ ಭೂಪರಿವರ್ತನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.
ಭೂಮಾಫಿಯಾಗಳನ್ನು ಪ್ರೀತಿಯಿಂದ ಕಾಣುವ ಆಡಳಿತ ವರ್ಗ ಮುಗ್ಧ ರೈತರನ್ನು ಹಾಗೂ ಮೂಲ ನಿವಾಸಿಗಳನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ಹೋರಾಟ ನಡೆಸುವ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‍ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
::: ಸೆ.9 ರಂದು ಜನಜಾಗೃತಿ ::: ಸಿಎನ್‍ಸಿ ವತಿಯಿಂದ ಸೆ.9 ರಂದು ನಾಪೋಕ್ಲು, ಸೆ.10 ರಂದು ಚೇರಂಬಾಣೆ ಹಾಗೂ ಸೆ.16 ರಂದು ಹುದಿಕೇರಿಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ನಾಚಪ್ಪ ಇದೇ ಸಂದರ್ಭ ಮಾಹಿತಿ ನೀಡಿದರು. ಮೂರ್ನಾಡು ಜನಜಾಗೃತಿ ಕಾರ್ಯಕ್ರಮದಲ್ಲಿ ಪ್ರಮುಖರಾದ ಬೊಳ್ಳಚೆಟ್ಟಿರ ಜಯಂತಿ, ಬಿದ್ದಂಡ ಉಷಾ, ಪೆಮ್ಮುಡಿಯಂಡ ವೇಣು, ನಂದೇಟಿರ ರವಿ, ಬಡುವಂಡ ವಿಜಯ, ಪುದಿಯೊಕ್ಕಡ ಕಾಶಿ, ಪುದಿಯೊಕ್ಕಡ ಬೋಪಣ್ಣ, ಪುದಿಯೊಕ್ಕಡ ಸೋಮಯ್ಯ, ಪ್ರೊ. ಚೌರೀರ ಜಗತ್, ನೆರವಂಡ ಅನೂಪ್, ಪೆಮ್ಮಂಡ ಪವಿತ್ರ, ಚೊಕ್ಕಂಡ ಕಟ್ಟಿ, ಅಚ್ಚಕಾಳೆರ ಸಂತು, ಚಂಗಣಮಕ್ಕಡ ವಿನು, ಅವರೆಮಾದಂಡ ಚಂಗಪ್ಪ, ಅವರೆಮಾದಂಡ ಗಿರಿ, ಚಂಬಂಡ ಜನತ್, ಪಳಗಂಡ ಪ್ರಕಾಶ್, ಕೈಪಟ್ಟಿರ ಚಿಣ್ಣಪ್ಪ, ಮುಂಡಂಡ ಪವಿ, ಮೂಡೇರ ಮಾದಪ್ಪ, ಅವರೆಮಾದಂಡ ರಘು, ದೇವಣಿರ ಧನು, ಚೌರೀರ ಗಣೇಶ್, ಅಮ್ಮಾಟಂಡ ಕಾರ್ಯಪ್ಪ, ಅಮ್ಮಾಟಂಡ ಚಂಗಪ್ಪ, ವಾಂಚೀರ ಅಪ್ಪಯ್ಯ, ಅಮ್ಮಾಟಂಡ ಕಾವೇರಪ್ಪ, ಚಂಗಂಡ ಚಾಮಿ, ಕೈಪಟ್ಟಿರ ಪ್ರಕಾಶ್, ಪುದಿಯೊಕ್ಕಡ ಈರಪ್ಪ, ಪುದಿಯೊಕ್ಕಡ ಮಧು, ಪಳಂಗಂಡ ಮೇದಪ್ಪ, ಮಡೆಯಂಡ ದಾದ, ಬಾರಿಯಂಡ ಸುಬ್ರಮಣಿ, ಕೈಪಟ್ಟಿರ ಅಯ್ಯಪ್ಪ, ಮಂದಪಂಡ ಮನೋಜ್, ಮಂದಪಂಡ ಸೂರಜ್, ಪಳಗಂಡ ಪ್ರಕಾಶ್, ಪಳಗಂಡ ಅಪ್ಪಣ್ಣ, ಪಳಗಂಡ ಲವ, ಪುಟ್ಟಿಚಂಡ ದೇವಯ್ಯ, ಕೂಪದಿರ ಸಾಬು, ಅಳಮಂಡ ನೆಹರು, ಪಟ್ಟಮಾಡ ಅಶೋಕ್, ಚಂಗಂಡ ಗಣೇಶ್, ಬಡುವಂಡ ಬೋಪಣ್ಣ, ಕೈಪಟ್ಟಿರ ಕಾರ್ಯಪ್ಪ, ಮುಕ್ಕಾಟಿರ ಅಯ್ಯಪ್ಪ, ನೆರವಂಡ ಬೊಳ್ಯಪ್ಪ, ಕಂಬಿರಂಡ ಉಮೇಶ್, ಚೆನಂಡ ಅಯ್ಯಣ್ಣ, ಚಂಗಂಡ ಸೂರಜ್, ಪುದಿಯಮುಂಡಂಡ ಪೊನ್ನಪ್ಪ, ಪುದಿಯೊಕ್ಕಡ ವಿಪನ್, ಕೋಟೆರ ಮೊಣ್ಣಪ್ಪ, ಇಟ್ಟಿರ ಸಂಪತ್, ನಿಶು ನಂಜಪ್ಪ, ಪಳಂಗಿಯಂಡ ಕಾಳಪ್ಪ, ಪಳಂಗಿಯಂಡ ಕಾವೇರಪ್ಪ, ಅಮ್ಮಾಟಂಡ ಚೇತನ್, ಬಿದ್ದಂಡ ಸಂದೀಪ್, ಬೊಳ್ತಂಡ ಪಟ್ಟು, ಬೊಳ್ಳಚೆಟ್ಟಿರ ಅಚ್ಚಪ್ಪ, ಮುಕ್ಕಾಟಿರ ಕಿಟ್ಟು, ಬೊಟ್ಟೊಳಂಡ ಶಂಬು, ದೇವಣಿರ ಧನು, ಬೊಡ್ಡಂಡ ಕಾಳಪ್ಪ, ಬಾಳೆಕುಟ್ಟೀರ ಅಯ್ಯಪ್ಪ, ವಾಂಚಿರ ಮುತ್ತಪ್ಪ, ಕೊಟೇರ ಮುತ್ತಣ್ಣ, ಬಡುವಂಡ ಚಿಣ್ಣಪ್ಪ, ಮಂಡೆಪಂಡ ರಮೇಶ್, ಪುದಿಯೊಕ್ಕಡ ಮೇದಪ್ಪ, ಪಾಲಂದಿರ ಕಾವೇರಪ್ಪ, ಬೊಳ್ಳಚೆಟ್ಟಿರ ಪ್ರಕಾಶ್, ಬಿದ್ದಂಡ ಹರೀಶ್, ಪುದಿಯೊಕ್ಕಡ ಪೊನ್ನಣ್ಣ, ಪಾಂಡಂಡ ಕಿರಣ್, ವಾಂಚಿರ ರಘು ಮತ್ತಿತರರು ಪಾಲ್ಗೊಂಡು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡರು.