ಮಡಿಕೇರಿ ಆ.30 NEWS DESK : ಕೆರೆಯ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಕಾಡಾನೆಯೊಂದು ದುರ್ಮರಣಕ್ಕೀಡಾಗಿರುವ ಘಟನೆ ಅಮ್ಮತ್ತಿ ಸಮೀಪದ ಕಾಫಿ ತೋಟದಲ್ಲಿ ನಡೆದಿದೆ. ಸುಮಾರು ಹತ್ತು ವರ್ಷದ ಗಂಡಾನೆಯ ಮೃತದೇಹ ಕೆರೆಯಲ್ಲಿ ಇಂದು ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಕಾಡಾನೆ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಕಾಫಿ ತೋಟದ ಕೆರೆಗೆ ನೀರು ಕುಡಿಯಲೆಂದು ಬಂದಿದ್ದ ಕಾಡಾನೆ, ಆಕಸ್ಮಿಕವಾಗಿ ಬಿದ್ದು ಮೇಲೆ ಬರಲು ಸಾಧ್ಯವಾಗದೆ ಸಾವನ್ನಪ್ಪಿರುವ ಸಾಧ್ಯತೆ ಇದೆ. ಇಂದು ಬೆಳಿಗ್ಗೆ ಕಾರ್ಮಿಕರು ನೀರಿನಲ್ಲಿ ತೇಲುತ್ತಿದ್ದ ಆನೆಯ ಮೃತ ದೇಹವನ್ನು ಗಮನಿಸಿ ಮಾಹಿತಿ ನೀಡಿದರು. ಸ್ಥಳಕ್ಕೆ ಡಿಎಫ್‍ಓ ಜಗನ್ನಾಥ್, ಎಸಿಎಫ್ ಗೋಪಾಲ್, ಆರ್‍ಎಫ್‍ಓ ಶಿವರಾಂ, ವನ್ಯಜೀವಿ ವೈದ್ಯಾಧಿಕಾರಿ ಡಾ.ಚೆಟ್ಟಿಯಪ್ಪ ಹಾಗೂ ಸಿಬ್ಬಂದಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಿದರು. ಕಾಡಾನೆಯ ಮೃತದೇಹವನ್ನು ನೀರಿನಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಲಾಯಿತು. ಉಪವಲಯ ಅರಣ್ಯ ಅಧಿಕಾರಿಗಳಾದ ಸಂಜಿತ್ ಸೋಮಯ್ಯ, ಕನ್ನಂಡ ರಂಜನ್, ಅರಣ್ಯ ರಕ್ಷಕ ಅರುಣ, ಆರ್‍ಆರ್‍ಟಿ ಹಾಗೂ ಇಪಿಟಿ ಸಿಬ್ಬಂದಿಗಳಾದ ವಿನೋದ್, ಅಚ್ಚಯ್ಯ, ವಿನೋದ, ಸಚಿನ್, ಪ್ರವೀಣ್, ಗಣೇಶ್, ಅಖಿಲೇಶ್, ಮುರುಗನ್, ಆದರ್ಶ್, ಸತೀಶ ಮತ್ತಿತರರು ಈ ಸಂದರ್ಭ ಹಾಜರಿದ್ದರು.