ಮಡಿಕೇರಿ ಆ.30 NEWS DESK : ಜೀವನ ಪದ್ಧತಿಯಂತೆ ನಮ್ಮೊಳಗೆ ಹಾಸುಹೊಕ್ಕಾಗಿರುವ ಜಾನಪದ ಸಂಸ್ಕೃತಿ, ಕಲೆ, ಸಾಹಿತ್ಯಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಗರದ ಜೂನಿಯರ್ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ನಡೆದ ‘ಜಾನಪದ ವೈವಿಧ್ಯ ಕಾರ್ಯಕ್ರಮ’ದಲ್ಲಿ ದುಡಿ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಜಾನಪದ ಕಲೆ, ಸಾಹಿತ್ಯ ದಿನದಿಂದ ದಿನಕ್ಕೆ ಮರೆಯಾಗುತ್ತಿದೆ. ಈ ಬಗ್ಗೆ ಗಂಭೀರ ಚಿಂತನೆ ಅಗತ್ಯವಾಗಿದೆ. ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಭಾರತವಾಗಿದ್ದು, ಎಲ್ಲಾ ಮಾದರಿಯ ಜಾನಪದ ಕಲೆಗಳನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಜಾನಪದ ಪರಿಷತ್ ಕೇವಲ ಪಟ್ಟಣಕ್ಕೆ ಮಾತ್ರ ಸೀಮಿತವಾಗದೇ ಗ್ರಾಮೀಣ ಭಾಗದಲ್ಲೂ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ. ಜಾನಪದ ಉತ್ಸವಗಳು ಹೆಚ್ಚು ಹೆಚ್ಚು ನಡೆಯಬೇಕು. ಜಾನಪದ ಪರಿಷತ್ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತದಿಂದ ಸಹಕಾರ ನೀಡಲಾಗುವುದು ಎಂದರು. ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಪ್ರಸನ್ನ ಮಾತನಾಡಿ, ಜಾನಪದ ಜೀವನ ಪದ್ಧತಿ ಮನಸ್ಸನ್ನು ಪುಳಕಿತಗೊಳಿಸುತ್ತದೆ. ಜಾನಪದ ಅಗಾಧವಾಗಿದೆ. ಗ್ರಂಥಗಳಲ್ಲಿ ಅದು ಉಳಿದುಕೊಂಡಿಲ್ಲ. ಬಾಯಿಂದ ಬಾಯಿಗೆ ವರ್ಗವಾಗಿರುವ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕಿದೆ ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾನಪದ ಪರಿಷತ್ ನ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಜಾನಪದೀಯರಲ್ಲಿ ಯಾವುದೇ ಭೇಧ ಭಾವವಿಲ್ಲ. ಸಹಜ ಪ್ರೀತಿಯಿಂದ ಬೆಳೆದು ಬಂದವರು. ಇಂದಿನ ದಿನಮಾನದಲ್ಲಿ ಎಲ್ಲವೂ ಭಿನ್ನವಾಗಿದೆ. ಒಗ್ಗಟ್ಟು ಮರೆಯಾಗಿದೆ. ಈ ನಿಟ್ಟಿನಲ್ಲಿ ಜಾನಪದೀಯ ಮನಸ್ಸುಗಳನ್ನು ಜೋಡಿಸುವ ಕೆಲಸವನ್ನು ಪರಿಷತ್ ಮಾಡುತ್ತಿದೆ ಎಂದರು. ಉತ್ತಮ ಹಾಗೂ ನೆಮ್ಮದಿಯ ಸಮಾಜ ನಿರ್ಮಾಣಕ್ಕೆ ಜಾನಪದ ಸಹಕಾರಿ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಜಾನಪದವನ್ನು ಮೈಗೂಡಿಸಿಕೊಳ್ಳಬೇಕು. ಯುವ ಜನಾಂಗ ತಾಂತ್ರಿಕ ಬದುಕಿನಲ್ಲಿ ಕಳೆದುಹೋಗಬಾರದು ಎಂದರು. ಪ್ರಾಸ್ತಾವಿಕವಾಗಿ ಜಾನಪದ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ಮಾತನಾಡಿ, ಕೂಡಿ ಬಾಳುವ ಸಂತೋಷವನ್ನು ಉಳಿಸಿಕೊಂಡು ಬಂದವರೇ ಜಾನಪದರು. ಜಾನಪದರು ಎಂದಿಗೂ ಪ್ರಚಾರ ಮತ್ತು ಪ್ರಸಿದ್ಧಿಗೆ ಒಳಪಟ್ಟವರಲ್ಲ. ತಾಂತ್ರಿಕತೆ ಹೆಚ್ಚಾದಂತೆ ಜಾನಪದ ಮರೆಯಾಗುತ್ತಿದೆ. ವಿದ್ಯಾರ್ಥಿಗಳು ಜಾನಪದದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಜಾನಪದ ಪರಿಷತ್‍ನ ಉಪಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಖಜಾಂಚಿ ಸಂಪತ್ ಕುಮಾರ್, ಕಾರ್ಯದರ್ಶಿ ಉಜ್ವಲ್ ರಂಜಿತ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಕಾವೇರಿ ಪ್ರಕಾಶ್, ಸರ್ಕಾರಿ ಪ.ಪೂ. ಕಾಲೇಜು ಪ್ರಾಂಶುಪಾಲ ವಿಜಯ್ ಹಾಜರಿದ್ದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘದಿಂದ ಸಾಂಸ್ಕೃತಿಕ ನೃತ್ಯ ನಡೆಯಿತು. ಮಡಿಕೇರಿಯ ಸಪ್ತಸ್ವರ ಕಲಾವಿದರ ಬಳಗದಿಂದ ಜಾನಪದ ಗೀತೆ ಗಾಯನ, ಶನಿವಾರಸಂತೆಯ ಜಾನಪದ ಕಲಾವಿದ ಮೊಗೇರ ಸುರೇಶ್ ಅವರಿಂದ ಜಾನಪದ ಗೀತ ಗಾಯನ, ಕಾಶಿ ಅಚ್ಚಯ್ಯ ಅವರಿಂದ ದುಡಿಪಾಟ್, ವೀರಾಜಪೇಟೆಯ ಕಲಾವಿದ ಸಾದಿಕ್ ಹಂಸ ತಂಡದ ಕುಂಚಗಾಯನ ನೆರೆದಿದ್ದವರನ್ನು ರಂಜಿಸಿತು. ಮೊಗೇರ ಸುರೇಶ್ ಹಾಗೂ ಸಾದಿಕ್ ಹಂಸ ಅವರನ್ನು ಜಾನಪದ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ಜಾನಪದ ಪರಿಕರಗಳ ಪ್ರದರ್ಶನ ಗಮನ ಸೆಳೆಯಿತು. ಡಾ.ಕಾವೇರಿ ಪ್ರಕಾಶ್ ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಜ್ವಲ್ ರಂಜಿತ್ ಸ್ವಾಗತಿಸಿದರು. ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಸಂಪತ್ ಕುಮಾರ್ ವಂದಿಸಿದರು.