ಮಡಿಕೇರಿ NEWS DESK ಸೆ.6 : ಚೇರಂಬಾಣೆಯ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಬ್ಬದ ಸಂಭ್ರಮದಲ್ಲಿದೆ. 25ನೇ ವರ್ಷದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಮಿತಿ ನಿರ್ಧರಿಸಿದೆ. ಸೆ.7 ರಂದು ಬೆಳಿಗ್ಗೆ ಗಣಪತಿ ಹೋಮ ಮತ್ತು ವಿಶೇಷ ಪೂಜೆಯೊಂದಿಗೆ 10.30 ಗಂಟೆಗೆ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ಏಳು ದಿನಗಳ ಕಾಲ ಗಣೇಶೋತ್ಸವವನ್ನು ಆಚರಿಸಲಿರುವ ಸಮಿತಿ, ಪ್ರತಿದಿನ ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಮಾಡಲಿದೆ. ಸಂಜೆ 7.30 ಗಂಟೆಗೆ ಮಹಾಪೂಜೆ ನಡೆಯಲಿದ್ದು, ಪ್ರಸಾದ ಮತ್ತು ಫಲಹಾರ ನೀಡಲಾಗುವುದು. ಚೇರಂಬಾಣೆಯ ಮೇಲಿನಪೇಟೆ ಕೇಸರಿಮಯವಾಗಿದ್ದು, ಆಕರ್ಷಕ ಪ್ರವೇಶ ದ್ವಾರ ಸರ್ವ ಭಕ್ತರನ್ನು ಸ್ವಾಗತಿಸುತ್ತಿದೆ. ಸೆ.13ರಂದು ಸಂಜೆ 4ಗಂಟೆಗೆ ಗಣೇಶ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ದು ಕೊಳಗದಾಳು ಗ್ರಾಮದ ಪಾಕ ಹೊಳೆಯಲ್ಲಿ ವಿಸರ್ಜನೆ ಮಾಡಲಾಗುವುದು. ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಕೇರಳದ ಪುಕೋಡು ಬ್ಯಾಂಡ್ ಸೆಟ್ ಮತ್ತು ಕೊಡಗಿನ ಸಾಂಪ್ರದಾಯಿಕ ವಾಲಗ ಇರುತ್ತದೆ. ಮಂಗಳೂರಿನ ಶಾರದಾ ಎಲೆಕ್ಟಿçಕಲ್ಸ್ ಆಕರ್ಷಕ ಮಂಟಪಕ್ಕೆ ವಿದ್ಯುತ್ ದೀಪಗಳ ಅಲಂಕಾರವನ್ನು ನೀಡಲಿದೆ. ಗಣೇಶನ ದೃಶ್ಯಾವಳಿಗಳ ಸ್ಪಬ್ಧಚಿತ್ರ ಮತ್ತೊಂದು ಆಕರ್ಷಣೆಯಾಗಿದೆ. ಹಿಂದೂ ಬಾಂಧವರು ಮತ್ತು ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಗಣೇಶೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷ ಆಳಮಂಡ ಮೋಹನ್ ದೇವಯ್ಯ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.