ವಿರಾಜಪೇಟೆ ಸೆ.6 NEWS DESK : ವಿರಾಜಪೇಟೆ ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಮೂರ್ನಾಡು ಕಾರ್ಯಕ್ಷೇತ್ರದ ಬೋಪಣ್ಣ ಅವರ ಗದ್ದೆಯಲ್ಲಿ ಯಂತ್ರದ ಮೂಲಕ ಭತ್ತದ ನಾಟಿಯ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮ ನಡೆಯಿತು. ಗದ್ದೆಯ ಮಾಲೀಕರಾದ ಬೋಪಣ್ಣ ಯಂತ್ರದ ನಾಟಿಗೆ ಚಾಲನೆಯನ್ನು ನೀಡಿ ಮಾತನಾಡಿ, ಭತ್ತದ ನಾಟಿಯ ತರಬೇತಿ ಕಾರ್ಯಕ್ರಮವು ಜನರಿಗೆ ತುಂಬಾ ಸಹಕಾರಿಯಾಗಿದೆ. ಹೊಸ ಆವಿಸ್ಕಾರಗಳು ಕೃಷಿ ಕ್ಷೇತ್ರದಲ್ಲಿ ನಡೆದು ಉತ್ಪಾದಕತೆ ಹೆಚ್ಚಿಸುವ ಗುರಿಯನ್ನು ರೈತರು ಹೊಂದಬೇಕು ಎಂದರು. ಶ್ರೀ ಸಂಘದ ಮೇಲ್ವಿಚಾರಕ ಹರೀಶ್ ಮಾತನಾಡಿ, ಪ್ರಸ್ತುತ ವರ್ಷ ವಿರಾಜಪೇಟೆ ತಾಲೂಕಿನ ರೈತರಿಗೆ ಉಪಯೋಗವಾಗುವ ದೃಷ್ಟಿಯಲ್ಲಿ ಅಮ್ಮತ್ತಿಯಲ್ಲಿ ನಾಟಿ ಯಂತ್ರ ಬ್ಯಾಂಕ್ ನ್ನು ತೆರೆದಿದ್ದು, ಯಂತ್ರಗಳ ಅನುಷ್ಠಾನ ಬಳಕೆಯನ್ನು ವಿವಿಧೆಡೆ ಮಾಡಲಾಗುತ್ತಿದೆ ಎಂದರು. ಭತ್ತದ ನರ್ಸರಿ ವಿಧಾನ, ಭತ್ತದ ತಳಿಗಳು, ಮಣ್ಣಿನ ಸಂಗ್ರಹ ಟ್ರೇ ಗಳ ಬಳಕೆಯ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಮೂರ್ನಾಡು ವಲಯದ ಸಂಘದ ಮೇಲ್ವಿಚಾರಕ ಪ್ರತಾಪ್, ಯಸ್ವಂತ್, ಕೃಷಿ ಮೇಲ್ವಿಚಾರಕ ವಸಂತ್, ಒಕ್ಕೂಟದ ಕಾರ್ಯದರ್ಶಿ ಲಕ್ಷ್ಮಿ, ಸೇವಾ ಪ್ರತಿನಿಧಿ ದಿವ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು.