ಮಡಿಕೇರಿ ಸೆ.9 NEWS DESK : ನಗರದ ಹೊಸಬಡಾವಣೆ ಅಂಗನವಾಡಿಯಲ್ಲಿ ಪ್ರಧಾನಮಂತ್ರಿ ಮಾತೃವಂದನ ವಿಶೇಷ ನೋಂದಣಿ ಅಭಿಯಾನ ಕಾರ್ಯಕ್ರಮ ಹಾಗೂ ಪೋಷಣ್ ಅಭಿಯಾನ ಯೋಜನೆಯಡಿ ಪೂರಕ ಆಹಾರದ ಮಹತ್ವದ ಬಗ್ಗೆ ಕಾರ್ಯಕ್ರಮ ನೆರವೇರಿತು. ಸಹಾಯಕ ಶಿಶು ಅಭಿವೃದ್ಧಿ ಪ್ರಭಾರ ಮೇಲ್ವಿಚಾರಕ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಮಾತೃವಂದನಾ ಯೋಜನೆ ಅಡಿ ಮೊದಲನೇ ಮಗುವಿಗೆ ಎರಡು ಕಂತುಗಳಲ್ಲಿ 5 ಸಾವಿರ ಹಣವನ್ನು ಹಾಗೂ ಎರಡನೇ ಹೆಣ್ಣು ಮಗುವಿಗೆ ಒಂದೇ ಕಂತಿ ನಲ್ಲಿ ಆರು ಸಾವಿರ ಹಣವನ್ನು ಪಡೆಯಬಹುದಾಗಿದೆ ಎಂದರು. ತಾಯಿಯ ಆರೋಗ್ಯ ವರ್ಧನೆ ಹಾಗೂ ಪೂರಕ ಆಹಾರಕ್ಕಾಗಿ, ಆರೋಗ್ಯವಂತ ಮಗುವಿನ ಜನನಕ್ಕಾಗಿ ಸರ್ಕಾರದ ವತಿಯಿಂದ ನೀಡುವಂತಹ ಪ್ರೋತ್ಸಾಹ ಧನವಾಗಿರುತ್ತದೆ. ಈ ಮೊತ್ತವನ್ನು ನೇರ ನಗದು ವರ್ಗಾವಣೆಯ ಮೂಲಕ ಫಲಾನುಭವಿಯ ಆಧಾರ್ ನೋಂದಣಿಯಾದ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುವುದು ಎಂದು ಸವಿತಾ ತಿಳಿಸಿದರು. ಈ ಸೌಲಭ್ಯವನ್ನು ಪಡೆಯಲು ಸರ್ಕಾರಿ ನೌಕರರಲ್ಲದ ಗರ್ಭಿಣಿ ಮಹಿಳೆಯು ಅಂಗನವಾಡಿ ಕಾರ್ಯಕರ್ತೆಯನ್ನು 180 ದಿನಗಳೊಳಗೆ ಸಂಪರ್ಕಿಸಲು ಹಾಗೂ ಎರಡನೇ ಹೆಣ್ಣು ಮಗುವಿನ ಸೌಲಭ್ಯ ಪಡೆಯಲು ಮಗು ಜನಿಸಿದ ಮೂರು ಅಂಗನವಾಡಿ ಕಾರ್ಯಕರ್ತೆಯನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಫೋನ್ ಮುಖಾಂತರ ಸ್ಥಳದಲ್ಲೇ ಅರ್ಜಿ ನೋಂದಣಿ ಮಾಡಲಾಗುತ್ತದೆ. ಆ ದಿಸೆಯಲ್ಲಿ ಅರ್ಜಿಯೊಂದಿಗೆ ನೀಡಬೇಕಾದ ದಾಖಲಾತಿಗಳು ವಿವರಿಸಿದರು. ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ, ತಾಯಿ ಕಾರ್ಡ್ ಮತ್ತು ಮಗುವಿನ ಲಸಿಕೆಯ ಮಾಹಿತಿಯ ಪ್ರತಿ, ಫಲಾನುಭವಿಗಳ ಆಧಾರ್ ಕಾರ್ಡ್ ಪ್ರತಿ, ಫಲಾನುಭವಿಯ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ನೋಂದಣಿ ಆಗಿರಬೇಕು. ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನರೇಗಾ ಕಾರ್ಡ್, ಈಶ್ರಮ್ ಕಾರ್ಡ್, ಆಯುಷ್ಮಾನ್ ಕಾರ್ಡ್ ಯಾವುದಾದರೂ ಒಂದು ಪ್ರತಿಯನ್ನು ಹೊಸ ಬಡಾವಣೆ ಅಂಗನವಾಡಿ ಕೇಂದ್ರಕ್ಕೆ ಸಂಬಂಧಿಸಿದ ಅರ್ಹ ಫಲಾನುಭವಿಗಳನ್ನು ನೋಂದಣಿ ಮಾಡಲಾಯಿತು. ಅಂಗನವಾಡಿ ಮಕ್ಕಳು ಪ್ರಾರ್ಥಿಸಿದರು. ಅಂಗನವಾಡಿ ಕಾರ್ಯಕರ್ತೆ ಕಂಬೆಯಂಡ ಮುತ್ತಮ್ಮ ಸ್ವಾಗತಿಸಿದರು. ಪೌಷ್ಟಿಕ ಆಹಾರದ ಬಗ್ಗೆ ಹಿರಿಯ ಆರೋಗ್ಯ ಸಹಾಯಕ ಕಾರ್ಯಕರ್ತೆ ರೇವತಿ ತಿಳಿಸಿದರು. ಆಶಾ ಕಾರ್ಯಕರ್ತೆ ಜೂರಾ ವಂದಿಸಿದರು.