ಸೋಮವಾರಪೇಟೆ NEWS DESK ಸೆ.9 : ರಾಷ್ಟ್ರದ ಸರ್ವೋತೋಮುಖ ಅಭಿವೃದ್ಧಿಯಲ್ಲಿ ಪತ್ರಿಕಾ ರಂಗದ ಕೊಡುಗೆ ಅಪಾರವಾಗಿದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯಿಸಿದರು. ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕಾಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಷ್ಟದಲ್ಲಿರುವ ಪತ್ರಕರ್ತರನ್ನು ಕಾಪಾಡಿಕೊಳ್ಳಬೇಕಾದ ಕರ್ತವ್ಯ ಶಾಸಕಾಂಗದಲ್ಲಿ ಕೆಲಸ ಮಾಡುತ್ತಿರುವ ನಮ್ಮಂತವರ ಕರ್ತವ್ಯ ಎಂದು ಹೇಳಿದರು. ಪತ್ರಿಕೆ ಎಂದರೆ ಕೇವಲ ಸುದ್ದಿ ಸಮಾಚಾರಗಳನ್ನು ನೀಡುವ ಮಧ್ಯಮವಲ್ಲ. ತನ್ನದೆ ಆದ ಕರ್ತವ್ಯವನ್ನು ನಿಭಾಯಿಸುತ್ತಿದೆ. ಸಮಾಜದಲ್ಲಿರುವ ಅಂಕುಡೊಂಕನ್ನು ತಿದ್ದುವ ಕೆಲಸವನ್ನು ಮಾಡುತ್ತಿದೆ. ರಾಜಕಾರಣಿಗಳು ತಪ್ಪು ಮಾಡಿದಾಗ ಪತ್ರಿಕೆಗಳಲ್ಲಿ ಬರೆದು, ತಪ್ಪು ಹೆಜ್ಜೆಗಳನ್ನು ಇಡದಂತೆ ಎಚ್ಚರಿಸುವ ಕೆಲಸವನ್ನು ಮಾಡುತ್ತಿರುವುದು ನಮ್ಮ ಕಣ್ಣು ಮುಂದಿದೆ. ಪತ್ರಿಕೆ, ಮಾಧ್ಯಮಗಳ ಸಲಹೆಗಳನ್ನು ಜನಪ್ರತಿನಿಧಿಗಳು ಪಡೆದುಕೊಂಡರೆ ಉತ್ತನ ಜನಪರ ಕೆಲಸಗಳನ್ನು ಮಾಡಬಹುದು ಎಂದು ಹೇಳಿದರು. ಗ್ರಾಮೀಣ ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸುವುದು ನಮ್ಮ ಕರ್ತವ್ಯವಾಗಿದೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಕೊಡಿಸಲು ಸರ್ಕಾರದದೊಂದಿಗೆ ವ್ಯವಹರಿಸಲಾಗುವುದು ಎಂದು ಹೇಳಿದರು. ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ, ಪತ್ರಕರ್ತರು ಪ್ರತಿದಿನ ಒತ್ತಡದಲ್ಲೇ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದೆ. ಪತ್ರಕರ್ತರ ಬೇಡಿಕೆಗಳನ್ನು ಸರ್ಕಾರಗಳು ನಿರ್ಲಕ್ಷ್ಯ ಮಾಡಬಾರದು. ಪ್ರಜಾಪ್ರಭುತ್ವ ರಕ್ಷಣೆಯನ್ನು ಪತ್ರಿಕಾರಂಗ ಮಾಡುತ್ತಿದೆ. ಈ ಕಾರಣದಿಂದ ಪತ್ರಕರ್ತರುಗಳಿಗೂ ಸೌಲಭ್ಯಗಳು ಸಿಗಬೇಕು ಎಂದು ಹೇಳಿದರು. ವಸ್ತುನಿಷ್ಠ ವರದಿಗಳಿಗೆ ಪತ್ರಕರ್ತರು ಹೆಚ್ಚಿನ ಪ್ರಾಧ್ಯಾನತೆ ಕೊಡಬೇಕು. ಸಮಾಜಕ್ಕೆ ಮಾರಕವಾದ ಮತ್ತು ವೈಯುಕ್ತಿಕ ದ್ವೇಷದಿಂದ ಸುದ್ದಿಯನ್ನು ಪ್ರಕಟಿಸಿದರೆ, ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ. ಸುಳ್ಳು ವರದಿ ಪ್ರಕಟಿಸಿದರೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಬಹುತೇಕ ರಾಜಕಾರಣಿಗಳು ಪತ್ರಿಕೆಯಿಂದ ಬೆಳೆದಿದ್ದಾರೆ. ಈ ಕಾರಣದಿಂದ ಪತ್ರಿಕೋಧ್ಯಮದ ಮೇಲೆ ವಿಶೇಷ ಗೌರವವಿದೆ ಎಂದು ಹೇಳಿದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಉಪಾಧ್ಯಕ್ಷ ಮಂಡಿಬೆಲೆ ರಾಜಣ್ಣ ಮಾತನಾಡಿ, ಹೆಚ್ಚೆಚ್ಚು ಪತ್ರಕರ್ತರ ಸಂಘಗಳು ಹುಟ್ಟಿಕೊಳ್ಳುವುದಕ್ಕೆ ರಾಜಕಾರಣಿಗಳು ಕಾರಣರಾಗುತ್ತಿದ್ದಾರೆ. ತತ್ವ-ಸಿದ್ದಾಂತಗಳಿಲ್ಲ ಸಂಘಗಳು ಹೆಚ್ಚಿನ ಕಾಲ ಇರಲು ಸಾಧ್ಯವಿಲ್ಲ. ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಸಂಘಗಳು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ಗ್ರಾಮೀಣ ಪತ್ರಕರ್ತರಿಗೆ ಸರ್ಕಾರ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ. ಭರವಸೆಗಳು ಈಡೇರುತ್ತಿಲ್ಲ. ಪತ್ರಕರ್ತರ ಸಮಸ್ಯೆಗಳನ್ನು ಅರಿಯಲು ಐಎಎಸ್ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಅದರ ಅವಶ್ಯಕತೆಯೂ ಅವರಿಗೆ ಬೇಕಾಗಿಲ್ಲ. ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವವರು ಇಲ್ಲದಂತಾಗಿದೆ. ಒಂದು ತಾಲ್ಲೂಕಿನಲ್ಲಿ 10 ಸಾವಿರ ಮಂದಿ ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಸಂಚರಿಸುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಕೇವಲ 10 ಸಾವಿರ ಮಂದಿ ಪತ್ರಕರ್ತರಿಗೆ ಬಸ್ ಪಾಸ್ ಕೋಡಲು ಸಾಧ್ಯವಾಗುತ್ತಿಲ್ಲ. ಇದೊಂದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು. ಕೊಡಗಿನಲ್ಲಿ ಪತ್ರಕರ್ತರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಹಳದಿ ಪತ್ರಿಕೋದ್ಯಮ ಇಲ್ಲ ಎಂದು ಕೊಡಗು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಸ್.ಎ.ಮುರುಳೀಧರ್ ಹೇಳಿದರು. ಇಂದಿನ ಪರಿಸ್ಥಿತಿಯಲ್ಲಿ ಪತ್ರಕರ್ತರು ಭ್ರಷ್ಟಾಚಾರದ ವಿರುದ್ಧ ಸುದ್ದಿ ಮಾಡಲು ಭಯಪಡಬೇಕಾದ ಅನಿವಾರ್ಯತೆ ಇದೆ. ಯಾವುದೇ ಸಾಕ್ಷಿ ಸಿಗದಂತೆ ಭ್ರಷ್ಟಾಚಾರ ನಡೆಯುತ್ತಿರುವುದರಿಂದ ಮಾನನಷ್ಟ ಮೊಕದ್ದಮೆಗೆ ಭಯಪಡುವಂತಹ ಸ್ಥಿತಿ ಒದಗಿದೆ ಎಂದರು. ನೂತನ ಅಧ್ಯಕ್ಷ ಎಚ್.ಆರ್.ಹರೀಶ್, ಕಾರ್ಯದರ್ಶಿ ಡಿ.ಪಿ.ಲೋಕೇಶ್, ಖಜಾಂಚಿ ದುಶ್ಯಂತ್ ಕುಮಾರ್, ಉಪಾಧ್ಯಕ್ಷ ಕವನ್ ಕಾರ್ಯಪ್ಪ, ಸಹ ಕಾರ್ಯದರ್ಶಿ ಹೋಮೇಶ್ ಮಣಗಲಿ, ನಿರ್ದೇಶಕರುಗಳಾದ ಎಸ್.ಆರ್.ವಸಂತ್, ಜಯಪ್ಪ ಹಾನಗಲ್, ಸುಕುಮಾರ, ಟೋನಿ ತೋಮಸ್ ಅವರುಗಳು ಅಧಿಕಾರ ಸ್ವೀಕರಿಸಿದರು.